ಹಳ್ಳಿ ಹುಡುಗನೊಬ್ಬ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡನ್ನು ಪ್ರಧಾನಿ ಮೋದಿ ಅವರೊಂದಿಗೆ ವೀಕ್ಷಿಸಲಿದ್ದಾನೆ.
ಇದೇ ಜನವರಿ 26ರಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿದೇಶಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಳ್ಳುವ ಅವಕಾಶ ಹುಳಿಯಾರಿನ ತಿಮ್ಮನಹಳ್ಳಿಯ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿ ಯಶಸ್‌ಗೆ ದೊರೆತಿದೆ.
ಹೌದು...ಯಶಸ್ ಪರಿಕ್ರಮಿಸಿರುವ ಯಶಸ್ಸಿನ ಹಾದಿ ಅವನನ್ನು ಪ್ರಧಾನಮಂತ್ರಿ ಬಾಕ್ಸ್ ನಲ್ಲಿ ಕುಳಿತು ಗಣರಾಜ್ಯೋತ್ಸವ ಪೆರೇಡ್ ವೀಕ್ಷಣೆ ಮಾಡಲು ಅನುವು ಮಾಡಿಕೊಟ್ಟಿದೆ.
ಹುಳಿಯಾರು ಸಮೀಪದ ಹಳ್ಳಿಗಾಡಿನ ತಿಮ್ಮನಹಳ್ಳಿಯ ಕೃಷಿಕರಾದ ದೇವರಾಜು ಹಾಗೂ ನೇತ್ರಾವತಿ ಪುತ್ರನಾದ ಯಶಸ್ ದೇವರಾಜು ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿ ಸಾಧಿಸಿದ್ದು ಬಹಳ. ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿ ಯಶಸ್ ಕಳೆದ ಸಾಲಿನ ಸಿಬಿಎಸ್ಸಿ ಹತ್ತನೇ ತರಗತಿಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದು ದಕ್ಷಿಣ ವಲಯ ಹಾಗೂ ರಾಜ್ಯಕ್ಕೆ ಪ್ರಥಮನಾಗಿ ಉತ್ತೀರ್ಣರಾಗುವ ಮೂಲಕ ರಾಜ್ಯಕ್ಕೆ ಹಾಗೂ ತುಮಕೂರು ಜಿಲ್ಲೆ ಸೇರಿದಂತೆ ಹುಳಿಯಾರಿನ ವಿದ್ಯಾವಾರಿಧಿ ಶಾಲೆಗೆ ಕೀರ್ತಿ ತಂದಿದ್ದು ಇದೀಗ ಯಶೋಗಾಥೆ. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ಮಾನವ ಸಂಪನ್ಮೂಲ ಸಚಿವಾಲಯದಿಂದ ಆತನಿಗೆ ಈ ವಿಶೇಷ ಆಹ್ವಾನ ಬಂದಿದೆ.
ಗಣರಾಜ್ಯೋತ್ಸವ ಪೆರೇಡ್ ಗೆ ಪಾಲ್ಗೊಳ್ಳಲು ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಿಂದ ಬಂದಿರುವ ಪತ್ರ. |
ಈ ಬಗ್ಗೆ ವಿದ್ಯಾವಾರಿಧಿ ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಮಾತನಾಡಿ ಪ್ರತಿ ವರ್ಷ ದೇಶದ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಆಹ್ವಾನ ಬರುತ್ತದೆ.ಇದೇ ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯ ಯಶಸ್ ಗೆ ಭಾಗವಹಿಸಲು ಆಹ್ವಾನ ಬಂದಿರುವುದು ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆಯನ್ನು ಪ್ರೋತ್ಸಾಹಿಸಲು ಅವಕಾಶವಾದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಯಶಸ್ ತಂದೆ ದೇವರಾಜು ಕಳೆದ ಹತ್ತು ವರ್ಷದಿಂದ ಹಾಸಿಗೆ ಹಿಡಿದಿದ್ದು ತಾಯಿಯೇ ಎಲ್ಲ ಆಗುಹೋಗುಗಳನ್ನು ಗಮನಿಸುತ್ತಿದ್ದು ಇದರೊಟ್ಟಿಗೆ ತಾಯಿಯ ಸಹೋದರ ರವೀಂದ್ರ ಮಾರ್ಗದರ್ಶನದಿಂದ ಇಂದು ನಾನು ಈ ಮಟ್ಟಕ್ಕೆ ಏರಲು ಸಾಧ್ಯವಾಗಿದೆ ಎಂದು ಸ್ಮರಿಸುವ ಯಶಸ್ ಈಗ ಬೆಂಗಳೂರಿನ ನಾರಾಯಣ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ.
500 ಅಂಕಗಳಿಗೆ 498 ಅಂಕ ಗಳಿಸುವ ಮೂಲಕ ದಕ್ಷಿಣ ವಲಯಕ್ಕೆ ಪ್ರಥಮನಾಗಿರುವ ಯಶಸ್ ಪ್ರಧಾನಮಂತ್ರಿಯೊಂದಿಗೆ ಗಣರಾಜ್ಯೋತ್ಸವ ವೀಕ್ಷಿಸುವ ಅವಕಾಶ ಕೇಂದ್ರಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಮೂಲಕ ಬಂದಿರುವುದು ಆತನ ತಾಯಿ ನೇತ್ರಾವತಿಗೆ ಜೀವನದ ಅತ್ಯಂತ ಖುಷಿಯ ವಿಚಾರವಾಗಿದ್ದು ಗಣರಾಜ್ಯೋತ್ಸವ ಪೆರೇಡ್ ಗೆ ಕೇವಲ ಆತನನ್ನು ಮಾತ್ರ ಆಹ್ವಾನಿಸಿರುವುದರಿಂದ ತಾವು ಸಹ ಆತನ ಜೊತೆಗೆ ಹೋಗಿ ಇದನ್ನು ಸಾಕ್ಷೀಕರಿಸಲು ಸಾಧ್ಯವಾಗುವುದಿಲ್ಲವಲ್ಲ ಎಂಬ ಕೊರಗಿದೆ. ಆದರೂ ಸಹ ಈ ಕ್ಷಣ ಮರೆಯಲಾಗದು ಎನ್ನುತ್ತಾರೆ.
ಕೇವಲ ಶೈಕ್ಷಣಿಕ ಸಾಧನೆಯ ಮೂಲಕವೇ ಹಳ್ಳಿಯಿಂದ ದಿಲ್ಲಿಗೆ ಯಶಸ್ಸಿನ ಪಯಣ ಮಾಡಿರುವ ಯಶಸ್ ಗೆ ದೊರೆತಿರುವ ಅವಕಾಶಕ್ಕೆ ಹುಳಿಯಾರಿನ ಜನತೆ ಸೇರಿದಂತೆ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ