ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿಯನ್ನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಸೌಹಾರ್ದಯುತವಾಗಿ ಆಚರಿಸಬೇಕೆಂದು ಪಿಎಸೈ ಧರ್ಮಾಂಜಿ ಸೂಚನೆ ನೀಡಿದರು.
ಹುಳಿಯಾರು ಪೋಲಿಸ್ ಠಾಣೆಯಲ್ಲಿ ಹನುಮಜ್ಜಯಂತಿ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕೈಗೊಳ್ಳುವ ಬಗ್ಗೆ ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೂ ಪಟ್ಟಣದಲ್ಲಿ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮ ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ, ಎಲ್ಲರೂ ಪಾಲ್ಗೊಳ್ಳುವ ಮೂಲಕ ಸೌಹಾರ್ದಯುತವಾಗಿ ನಡೆಯಬೇಕೆಂದು ಕೆಲವೊಂದು ಸೂಚನೆಗಳನ್ನು ನೀಡಿದರು.
ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು, ಸಮಯ ಪರಿಪಾಲನೆ ಮಾಡಬೇಕು ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು ಎಂದರು.ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು. ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಸಲ್ಮಾನ ಬಂಧುಗಳು ಸಹ ಮಸೀದಿಯಲ್ಲಿ ಹನುಮ ಜಯಂತಿ ಉತ್ಸವಕ್ಕೆ ಎಲ್ಲರೂ ಸಹಕರಿಸಬೇಕೆಂದು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಸಣ್ಣಪುಟ್ಟ ಅಹಿತಕರ ಘಟನೆ ನಡೆದಲ್ಲಿ ತಕ್ಷಣವೇ ಇಲಾಖೆಗೆ ಅಥವಾ ತಮಗೆ ದೂರವಾಣಿ ಮೂಲಕ ತಿಳಿಸಿದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಅದರ ಬದಲಿಗೆ ಪ್ರಚೋದಿಸಿ ಸಮಸ್ಯೆ ಬಿಗಡಾಯಿಸಲು ಮುಂದಾಗಬಾರದು ಎಂದರು.ಯಾರೊಬ್ಬರು ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವಂತೆ ವರ್ತಿಸಬಾರದು. ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಬಡಗಿ ರಾಮಣ್ಣ, ಕಾರ್ಯದರ್ಶಿ ಧನಂಜಯ, ಉಪಾಧ್ಯಕ್ಷ ಎಣ್ಣೆಗೆರೆ ಮಂಜಣ್ಣ,ಶ್ರೀ ಪ್ರಸನ್ನ ಗಣಪತಿ ದೇವಾಲಯ ಸಮಿತಿಯ ಹೂವಿನ ಬಸವರಾಜ್, ಜಾಮಿಯಾ ಮಸೀದಿಯ ಮುತ್ತುವಲ್ಲಿ ಆರಿಫ್ ಉಲ್ಲಾಖಾನ್, ನೂರಾನಿ ಮಸೀದಿಯ ಮುತುವಲ್ಲಿ ಹಾರೂನ್ ಷರೀಫ್, ಮದೀನಾ ಮಸೀದಿಯ ಸಾಧತ್ ಷರೀಫ್ ,ಸೈಕಲ್ ಶಾಪ್ ಕದೀರ್, ಮೀಸೆ ರಂಗಪ್ಪ ಮತ್ತಿತರರು ಸೇರಿದಂತೆ ಹುಳಿಯಾರಿನ ವಿವಿಧ ಸಂಘ– ಸಂಸ್ಥೆಗಳ ಪ್ರತಿನಿಧಿಗಳು, ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ