ಹುಳಿಯಾರು ಸೇರಿದಂತೆ ಗಡಿಭಾಗದ ಹೊಸದುರ್ಗ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಬೆಳಿಗ್ಗೆ ಅಲ್ಪ ತೀವ್ರತೆಯ ಭೂ ಕಂಪವಾಗಿದ್ದು,ರಿಕ್ಟರ್ ಮಾಪಕದಲ್ಲಿ 2.9ರಷ್ಟು ತೀವ್ರತೆ ದಾಖಲಾಗಿದೆ.
ಮೇಲನಹಳ್ಳಿಯ ಗ್ರಾಮದಲ್ಲಿ ಮನೆಯಿಂದ ಭಯಭೀತರಾಗಿ ಆಚೆ ಓಡಿಬಂದ ಜನ ಭೂಕಂಪನದ ಬಗ್ಗೆ ಚರ್ಚಿಸುತ್ತಿರುವುದು. |
ಇಂದು ಮುಂಜಾನೆ ೬.೪೦ರ ಸಮಯದಲ್ಲಿ ಹುಳಿಯಾರು ಮತ್ತಿತರ ಕೆಲ ಗ್ರಾಮಗಳಲ್ಲಿ ಐದಾರು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ್ದು ಮನೆಯಲ್ಲಿದ್ದವರು ಇದರ ತೀವ್ರತೆಗೆ ಭಯಭೀತರಾಗಿ ಆಚೆ ಓಡಿಬಂದಿದ್ದಾರೆ. ಮನೆಯಲ್ಲಿ ಮಲಗಿದ್ದವರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು ,ಗಾಬರಿಯಿಂದ ಏನಾಗಿದೆ ಎತ್ತಾಗಿದೆ ಎಂದು ತಿಳಿಯದೆ ಆಚೆ ಓಡಿಬಂದಿದ್ದಾರೆ.ಒಳಗಿದ್ದವರನ್ನು ಕೂಗಿ ಕರೆದಿದ್ದಾರೆ.ಭೂಕಂಪನದ ತೀವ್ರತೆ ಮಹಡಿ ಮೇಲಿದ್ದವರಿಗೆ ಹೆಚ್ಚಿಗೆ ಅನುಭವಕ್ಕೆ ಬಂದಿದ್ದು ಇಳಿದು ಓಡಿದ್ದಷ್ಟೆ ಗೊತ್ತು ಎನ್ನುತ್ತಾರೆ.ಕೆಲವೇ ಸೆಂಕೆಂಡುಗಳಷ್ಟು ಕಾಲದ ಕಂಪನವಾದ್ದರಿಂದ ಕೆಲವರಿಗೆ ಏನಾಯಿತೆಂದು ತಿಳಿಯದೆ ಆತಂಕದಲ್ಲಿದ್ದರು.ಅಕ್ಕಪಕ್ಕದವರ ಜೊತೆ ತಾವು ಅನುಭಸಿದ್ದನ್ನು ಹೇಳಿಕೊಂಡು ಮುಂದೇನು ಎಂದು ಅವರಿವರಿಗೆ ಫೋನ್ ಮಾಡುತ್ತಿದ್ದ ದೃಶ್ಯ ಕಂಡುಬಂತು.ಒಟ್ಟಾರೆ ಎಲ್ಲೆಡೆಯೂ ಭೂಕಂಪನದ್ದೆ ಮಾತಾಗಿದ್ದು .ಭೂಕಂಪನದಿಂದಾಗಿ ಹೋಬಳಿಯಲ್ಲಿ ಯಾವುದೇ ಸಾವು ನೋವು,ಮತ್ತಿತರ ಅವಘಡಗಳು ಸಂಭವಿಸಿರುವುದು ವರದಿಯಾಗಿಲ್ಲ.
ಹುಳಿಯಾರು,ಕಂಪನಹಳ್ಳಿ,ಯಗಚೀಹಳ್ಳಿ,ಗಾಣಧಾಳು,ಹೊಯ್ಸಳಕಟ್ಟೆ,ಕಲ್ಲೇನಹಳ್ಳಿ,ಬೆಳ್ಳಾರ,ದಸೂಡಿ, ದಬ್ಬಗುಂಟೆ,ಮರೆನಾಡುಪಾಳ್ಯ,ರಂಗನಕೆರೆ,ಸೋಮನಹಳ್ಳಿ,ಮೇಲನಹಳ್ಳಿ,ಹನುಮಂತನಪಾಳ್ಯ,ಕೆಂಕೆರೆ, ತಮ್ಮಡಿಹಳ್ಳಿ, ಮರಾಟಿಪಾಳ್ಯ,ಹೊಸಹಳ್ಳಿ, ಲಿಂಗಪ್ಪನಪಾಳ್ಯ, ಸೋಮಜ್ಜನಪಾಳ್ಯದಲ್ಲೂ ಇದೇ ಅನುಭವವಾಗಿದ್ದು ಎಲ್ಲಡೆಯೂ ಇದೇ ಸಮಯದಲ್ಲಿ ಭೂ ಕಂಪನವಾಗಿದೆ.ಅಲ್ಲದೆ ಹುಳಿಯಾರಿನಿಂದ ಹದಿನೈದು ಕಿಮೀ ವ್ಯಾಪ್ತಿಯ ಹೊಸದುರ್ಗ ತಾಲ್ಲೂಕಿಗೆ ಸೇರುವ ಕಂಚೀಪುರ, ಚಿಕ್ಕಬ್ಯಾಲದಕೆರೆ,ದೊಡ್ದಬ್ಯಾಲದಕೆರೆ,ಅರಿಶಿನಗುಂಡಿ, ಬ್ಯಾರಮಡು, ಹಾಲುಮಾದೇನಹಳ್ಳಿ, ಪಿಲಾಜಹಳ್ಳಿ ಸೇರಿದಂತೆ ಕೆಲ ಗ್ರಾಮದಲ್ಲಿ ಕಂಪನದ ಅನುಭವವಾಗಿರುವುದಾಗಿ ತಿಳಿದುಬಂದಿದೆ.
ಭೂಕಂಪನದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲವಾದರೂ ಹುಳಿಯಾರು ಸುತ್ತಮುತ್ತ ಕೆಲ ಮನೆಗಳಲ್ಲಿ ಪಾತ್ರೆಗಳು ಬಿದ್ದುದಾಗಿ,ಮಲಗಿದ್ದ ಮಂಚ ಅಲುಗಾಡಿದ್ದಾಗಿ,ತೀರು ಬಿದ್ದಿದ್ದಾಗಿ,ಮನೆಗಳ ಶೀಟು ಅದಿರಿದ್ದಾಗಿ,ಮಣ್ಣಿನ ಮನೆಯ ಗೋಡೆಗಳಿಂದ ಮಣ್ಣು ಉದುರಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಆದರೆ ಹುಳಿಯಾರಿಗೆ ೨೦ ಕಿಮೀ ದೂರವಿರುವ ಹೊಸದುರ್ಗ ತಾಲ್ಲೂಕಿನ ಕಂಚೀಪುರ, ಚಿಕ್ಕಬ್ಯಾಲದಕೆರೆ,ದೊಡ್ದಬ್ಯಾಲದಕೆರೆ ಮುಂತಾದೆಡೆ ಇಲ್ಲಿಗಿಂತ ಸ್ವಲ್ಪ ಹೆಚ್ಚಿನ ತೀವ್ರತೆಯ ಭೂಕಂಪವಾಗಿದ್ದು ಕೆಲವು ಮನೆ ಹಾಗು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಇದುವರೆಗೂ ಹುಳಿಯಾರು ಭಾಗಕ್ಕೆ ಭೂಕಂಪನ ಮಾಪಕ ಕೇಂದ್ರದ ಅಧಿಕಾರಿಗಳ್ಯಾರು ಭೇಟಿ ನೀಡಿಲ್ಲ. ಭೂಮಿ ಕಂಪಿಸಿದ್ದಕ್ಕೆ ಪ್ರಮುಖ ಕಾರಣ ತಿಳಿದುಬಂದಿಲ್ಲ
---------------------------
ಮುಂಜಾನೆ ಎದ್ದುಕೂತಿದ್ದವನಿಗೆ ಬಾಗಿಲು,ಕಿಟಕಿಯೆಲ್ಲ ಅಲ್ಲಾಡಿದ್ದ ಅನುಭವವಾಯ್ತು.ಜೋರಾಗಿ ಶಬ್ಧವಾಯ್ತು.ತಕ್ಷಣ ಆಚೆ ಬಂದು ಮನೆ ಸುತ್ತಾ ಏನಾಯ್ತೆಂದು ನೋಡಿದೆ.ತಕ್ಷಣವೇ ಮನೆಯಲ್ಲಿದ್ದವರನೆಲ್ಲಾ ಆಚೆ ಕರೆದೆ.ನನ್ನಹಾಗೆಯೇ ಎಲ್ಲಾ ಮನೆಯವರು ಆಚೆ ಬಂದಿದ್ದರಿಂದ ಇದು ಭೂಕಂಪ ಅಂತ ಗೊತ್ತಾಯ್ತು.-ಹುಳಿಯಾರು ಕುಮಾರ್-ಟೌನ್ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ.
------------
ಬೆಳಿಗ್ಗೆ ಎದ್ದವನೇ ತೋಟಕ್ಕೆ ಹೋಗಿದ್ದೆ.೬.೪೦ರ ಸಮಯದಲ್ಲಿ ನಿಂತಿದ್ದ ಜಾಗದಲ್ಲಿ ಗಡಗಡ ಶಬ್ಧಬಂತು.ಕೆಲವೊಮ್ಮೆ ದೊಡ್ಡಲಾರಿ ಹಾಗೂ ಟ್ರಾಕ್ಟರ್ ವೇಗವಾಗಿ ಹೋದಾಗ ಇದೇರೀತಿ ಶಬ್ದ ಬರ್ತಿತ್ತು.ಅದೇ ರೀತಿ ಇರಬೇಕು ಅಂದುಕೊಂಡು ಸುಮ್ಮನಾದೆ.ಅಲ್ಲೇ ಇರುವ ಮನೆಯವರೆಲ್ಲಾ ಆಚೆ ಓಡಿಬಂದು ಮನೆಯೆಲ್ಲಾ ಅದುರಿದ ಹಾಗಾಯ್ತು ಅಂದಾಗಲೇ ನನಗೆ ಭೂಕಂಪವಾಗಿದ್ದು ಗೊತ್ತಾಯ್ತು : ಪರಪ್ಪ-ಲಿಂಗಪ್ಪನಪಾಳ್ಯ.
-----------
ಮನೆಯಲ್ಲಿ ಮಲಗಿದ್ದೆ.ಮಂಚದಿಂದ ಎತ್ತಾಕಿದ್ದಂಗಾಯ್ತು.ನಮ್ಮ ಮನೆಯಾಕೆ ಬೇಗ ಆಚೆಗೆ ಬಾ ಅಂತ ಕೂಗಿದರು.ಗಾಬರಿಯಲ್ಲಿ ಎದ್ದು ಆಚೆಗೆ ಬಂದೆ.ನಮ್ಮ ಮನೆ ಸುತ್ತಮುತ್ತ ಜನ ಭೂಕಂಪ ಆಯ್ತು ಅಂದ್ರು.ಇದೇನು ಕೇಡುಗಾಲ ಬಂತಪ್ಪ ಅಂದುಕೊಂಡೆ : ಬಳ್ಳಾರಿ ವೀರಭದ್ರಯ್ಯ-ಕೆಂಕೆರೆ
----------------
ಭೂಕಂಪನ ಅನ್ನುವುದು ಭೂಮಿಯಡಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ.ಭೂಪದರದಲ್ಲಿ ಸಂವಹನ ಅಲೆಗಳ ಒತ್ತಡ(ಸಿಸ್ಮಿಕ್ ವೇವ್) ಜಾಸ್ತಿಯಾದಾಗ ಒಂದು ಹಂತದಲ್ಲಿ ಕಂಪನವಾಗುತ್ತದೆ.ಆಗ ಭೂಮಿ ನಡುಗುತ್ತದೆ. ತೀವ್ರತೆ ಜಾಸ್ತಿಯಾದಾಗ ಮಾತ್ರ ನಮ್ಮ ಅನುಭವಕ್ಕೆ ಬರುತ್ತದೆ.ಭೂಮಿಯನ್ನು ನೀರಿಗಾಗಿ ಸಾವಿರಾರು ಅಡಿ ಆಳಕ್ಕೆ ಬೋರ್ ಹಾಕುತ್ತಿರುವುದು ,ಗಣಿಗಾರಿಕೆಯಿಂದ ನಾಶ ಮಾಡುತ್ತಿರುವುದು ಸಹ ಇದಕ್ಕೆ ಕಾರಣವಾಗಿದೆ. :ಯಗಚೀಹಳ್ಳಿ ರಾಮಕೃಷ್ಣಪ್ಪ,ಮಧುಗಿರಿ ವಿಜ್ಞಾನ ಕೇಂದ್ರದ ಅಧ್ಯಕ್ಷರು.
-----------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ