ಕೆಟ್ಟುಹೋಗಿ ವಾರವಾದರೂ ದುರಸ್ತಿಯಾಗದ ಶುದ್ದ ಕುಡಿಯುವ ನೀರಿನ ಘಟಕಗಳು
ವರದಿ:ಡಿ.ಆರ್..ನರೇಂದ್ರಬಾಬು
ಹುಳಿಯಾರು:ಹುಳಿಯಾರು ಸೇರಿದಂತೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕಗಳ ನಿರ್ವಹಣೆ ಸಂಪೂರ್ಣ ವಿಫಲವಾಗಿದ್ದು ಇವರುಗಳ ನಿರ್ಲಕ್ಷ್ಯದಿಂದ ಅನೇಕ ಘಟಕಗಳು ಶೀಘ್ರ ದುರಸ್ತಿ ಕಾಣದೆ ಸ್ಥಗಿತಗೊಳ್ಳುತ್ತಿರುವುದರಿಂದ ಜನ ಫ್ಲೋರೈಡ್ ಯುಕ್ತ ನೀರನ್ನೆ ಕುಡಿಯುವ ಪರಿಸ್ಥಿತಿ ತಲೆದೋರಿದೆ.
ಹುಳಿಯಾರಿನಲ್ಲಿ ಸ್ಥಾಪಿಸಲಾಗಿರುವ ಘಟಕಗಳಂತೂ ಮೂರು ದಿನ ಸರಿಯಿದ್ದರೆ ನಾಲ್ಕುದಿನ ಕೆಟ್ಟು ನಿಲ್ಲುತ್ತದೆ.ಹುಳಿಯಾರೊಂದೆ ಅಲ್ಲದೆ ಎಲ್ಲಾಹಳ್ಳಿಗಳಲ್ಲೂ ಇದೇ ಸಮಸ್ಯೆಯಾಗಿದ್ದು ಈ ಬಗ್ಗೆ ಇಲಾಖಾ ಅಧಿಕಾರಿಗಳು ಗಮನ ಮಾಡುವ ಅಗತ್ಯವಿದೆ.
ಸಮೀಪದ ತಿರುಮಲಾಪುರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತು ವಾರವಾದರೂ ನಿರ್ವಹಣೆ ಮಾಡುವವರ ನಿರ್ಲಕ್ಷ್ಯದಿಂದ ದುರಸ್ತಿಯಾಗದೆ ಗ್ರಾಮಸ್ಥರು ಕುಡಿಯುವ ನೀರಿಗೆ ಯಥಾಪ್ರಕಾರ ಟ್ಯಾಂಕ್ ನೀರಿಗೆ ಮೊರೆಹೋಗುವಂತಾಗಿದೆ.
ತಿರುಮಲಾಪುರದಲ್ಲಿನ ನೀರಿನ ಘಟಕ ಸ್ಥಗಿತಗೊಂಡಿದ್ದು ನೀರಿಗಾಗಿ ಖಾಲಿಕೊಡ ಹಿಡಿದುನಿಂತಿರುವ ಮಹಿಳೆಯರು. |
ಈ ಗ್ರಾಮದಲ್ಲಿ ಕಳೆದ ಹದಿನೈದು ದಿನದ ಹಿಂದಷ್ಟೆ ಶುದ್ಧನೀರಿನ ಘಟಕ ಸ್ಥಾಪಿಸಲಾಗಿದ್ದು ತರಾತುರಿಯಲ್ಲಿ ಚಾಲನೆ ಮಾಡಲಾಯಿತು.ಕೇವಲ ಎರಡೇ ದಿನ ನಡೆದ ಇದು ಕೆಟ್ಟುನಿಂತಿದ್ದು ಇದುವರೆಗೂ ದುರಸ್ತಿಯಾಗಿಲ್ಲ.ಅಲ್ಲದೆ ಇದರ ಕಾಮಗಾರಿಯೂ ತೀರ ಕಳಪೆಯಾಗಿದ್ದು ಘಟಕದ ಕಿಟಕಿಗಳು ಕೈಗೆ ಕಿತ್ತುಬರುವಂತಿದೆ.ಟ್ಯಾಂಕಿನ ಕಂಬಗಳು ಅಲ್ಲಾಡುತ್ತಿದೆ.ಫಿಲ್ಟರ್ ಆದ ನೀರು ಹೊರಗೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದೆ ಅಲ್ಲೆ ಬಿಟ್ಟಿರುವುದರಿಂದ ಪುರಾಣ ಪ್ರಸಿದ್ದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮುಂಭಾಗ ನೀರು ನಿಲ್ಲುವಂತಾಗಿದೆ.
ಇದನ್ನು ಲ್ಯಾಂಡ್ ಆರ್ಮಿಯಿಂದ ನಿರ್ಮಿಸಲಾಗಿದ್ದು ಇದರ ಸ್ಥಾಪನೆ ಸಮಯದಲ್ಲೇ ಅಚ್ಚುಕಟ್ಟಾಗಿ ಮಾಡಿ ಎಂದು ಗೋಗರೆದರೂ ನಮಗೆ ಬಂದಿರುವ ಹಣ ಇಷ್ಟೆ.ಇದರಲ್ಲೆ ನಾವೆಲ್ಲಾ ಮಾಡಬೇಕಿದೆ ಎಂದು ತೀರಾ ಕಳಪೆಯಾಗಿ ಕಾಮಗಾರಿ ಮಾಡಿ ಮುಗಿಸಿದ್ದಾರೆ.ಕೆಟ್ಟುನಿಂತು ಹತ್ತುದಿನವಾದರೂ ಸಹ ನಿರ್ವಹಣೆ ಮಾಡುವವರು ಇದವರೆಗೂ ಬಾರದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಜಟಿಲವಾಗುತ್ತಿದೆ. ಯಥಾಪ್ರಕಾರ ಫ್ಲೋರೈಡ್ ಯುಕ್ತ ಟ್ಯಾಂಕಿನ ನೀರನ್ನು ಕುಡಿಯುವ ಪರಿಸ್ಥಿತಿ ಬಂದೊದಗಿದೆ ಎನ್ನುತ್ತಾರೆ ಇಲ್ಲಿನ ಡಿಶ್ ಬಸವರಾಜು.
ಅದೇ ರೀತಿ ಹೋಬಳಿಯ ದೊಡ್ಡಬಿದರೆ ಗ್ರಾಮದಲ್ಲೂ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ವಾರವಾಗಿದ್ದು ಬೆಂಗಳೂರಿನ ಕಂಪನಿಯವರಿಗೆ ದಿನಾ ಫೋನ್ ಮಾಡುತ್ತಿದ್ದರೂ ಇನ್ನೂ ದುರಸ್ತಿಯಾಗಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿ ಯೋಗೇಶ್.
ಹುಳಿಯಾರಿನ ಬಿಎಂಎಸ್ ಕಾಲೇಜು ಪಕ್ಕದ,ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿರುವ ಘಟಕದ ನಿರ್ವಹಣೆಯೂ ಅಷ್ಟಕಷ್ಟೆ ಆಗಿದ್ದು ಆಗಾಗ್ಗೆ ಸ್ಥಗಿತಗೊಳ್ಳುತ್ತಲೆ ಇರುತ್ತದೆ.
ಹುಳಿಯಾರಿನ ಬಿಎಂಎಸ್ ಕಾಲೇಜು ಪಕ್ಕ ನಿರ್ವಹಣೆಯಿಲ್ಲದೆ ನೀರಿನ ಘಟಕದ ಗಾಜು ಒಡೆದಿರುವುದು,ನಲ್ಲಿ ಮುರಿದಿರುವುದು |
ಗ್ರಾಮಸ್ಥರಿಗೆ ಶುದ್ದ ಕುಡಿಯುವ ಸರಬರಾಜು ಮಾಡುವ ಉದ್ದೇಶದಿಂದ ಸರಕಾರ ಲಕ್ಷಾಂತರರೂಗಳ ಅನುದಾನ ಬಿಡುಗಡೆ ಮಾಡಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದೆ.ಆದರೆ ನಿರ್ವಹಣೆ ಕೊರತೆಯಿಂದ ಕುಡಿಯುವ ನೀರಿನ ಘಟಕಗಳು ಕೈಕೊಡುತ್ತಿದೆ.ವಾರಗಟ್ಟಲೆ ಸಮಯವಾದರೂ ದುರಸ್ತಿ ಮಾದಲು ಮುಂದಾಗುವುದಿಲ್ಲ.ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಕುಡಿಯುವ ನೀರಿನ ಘಟಕದ ನಿರ್ವಹಣೆಗಾರರಿಗೆ ಎಚ್ಚರಿಕೆ ನೀಡಬೇಕು.ಅವರುಗಳ ಮೊಬೈಲ್ ಸಂಖ್ಯೆ ಎಲ್ಲಾ ಘಟಕದ ಮುಂದೆ ಪ್ರದರ್ಶಿಸಬೇಕು.ನಿರ್ಲಕ್ಷ್ಯ ತೋರುವವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.ಆಗಲಾದರೂ ಎಚ್ಚೆತ್ತುಕೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.
-------------------------
ಶುದ್ದ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋದರೆ ದುರಸ್ತಿ ಮಾಡಲು ಮೊಬೈಲ್ ಸಂಚಾರಿ ದುರಸ್ತಿ ವಾಹನ ಇಡುವಂತೆ ನಿರ್ವಹಣಾಗಾರರಿಗೆ ಸೂಚಿಸಬೇಕು.ಇಲ್ಲದಿದ್ದಲ್ಲಿ ಘಟಕಗಳು ತಾಂತ್ರಿಕ ಸಮಸ್ಯೆಗಳಿಂದ ಕೆಟ್ಟು ಹೋದರೆ ಅವುಗಳ ರಿಪೇರಿಗೆ ಬೆಂಗಳೂರಿನಿಂದ ಬಂದು ಸರಿಪಡಿಸುವವರೆಗೆ ಸ್ಥಗಿತಗೊಂಡಿರುತ್ತದೆ.ತಾಲ್ಲೂಕಿನಲ್ಲಿ ನೂರಾರು ಘಟಕಗಳು ಸ್ಥಾಪಿಸಿರುವುದರಿಂದ ಸಂಚಾರಿ ಘಟಕದ ಅವಶ್ಯಕತೆಯಿದೆ: ಹೆಚ್.ಎನ್.ಕುಮಾರ್,ತಾಲ್ಲೂಕ್ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷರು.
-------------------
ಈ ಭಾಗದಲ್ಲಿ ಹೆಚ್ಚುಕಡಿಮೆ ಎಲ್ಲಾ ಘಟಕಗಳ ಹೊಣೆಹೊತ್ತಿರುವುದು ಪೆಂಟಾಪ್ಯೂರ್ ಕಂಪನಿ.ಇಲ್ಲಿ ಘಟಕ ಕೆಟ್ಟರೆ ಅಥವಾ ತಾಂತ್ರಿಕ ಸಮಸ್ಯೆ ತಲೆದೋರಿದರೆ ರಿಪೇರಿ ಮಾಡಲು ನಾವು ಯಾರಿಗೆ ತಿಳಿಸಬೇಕೆನ್ನುವುದೇ ತಿಳಿಯುವುದಿಲ್ಲ.ಪ್ರತಿಘಟಕಕ್ಕೂ ನಿರ್ವಹಣೆಗಾರರ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಿದಲ್ಲಿ ಅವರಿಗೆ ಕೂಡಲೇ ತಿಳಿಸಬಹುದು.ಸದ್ಯ ಯಾವೊಂದು ಘಟಕಗಳ ಮೇಲೂ ಇವರುಗಳ ನಂಬರ್ ಇಲ್ಲದಿರುವುದರಿಂದ ದುರಸ್ತಿಯಾಗಲೂ ತಡವಾಗುತ್ತಿದೆ.: ಡಿ.ಕೆ.ರಮೇಶ್, ದೊಡ್ಡಬಿದರೆ ಗ್ರಾಮಸ್ಥ
--------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ