ಸರ್ಕಾರದ ಶೌಚಾಲಯದ ಆಂದೋಲನ ಈ ಗ್ರಾಮಕ್ಕೆ ತಲುಪಿಲ್ಲ.
೫೦ ಮನೆಗಳ ಈ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಜೀವಂತ
ವರದಿ: ಡಿ.ಆರ್.ನರೇಂದ್ರಬಾಬು
ಹುಳಿಯಾರು:ಬಯಲು ಬಹಿರ್ದೆಸೆ ಮುಕ್ತ ಆರೋಗ್ಯವಂತ ಕರ್ನಾಟಕ ಮಾಡಲು ಸರ್ಕಾರ ಶೌಚಾಲಯದ ಆಂದೋಲನವನ್ನೇ ಹುಟ್ಟು ಹಾಕಿದರೂ ಕೂಡ ಇದರ ಅರಿವೇ ಇಲ್ಲದಂತೆ ಬಯಲಿನಲ್ಲಿಯೇ ಬಹಿರ್ದೆಸೆಗೆ ಗುವ ಗ್ರಾಮ ಇಂದಿಗೂ ಇರುವುದು ಯೋಜನೆಯ ಸಫಲತೆಯನ್ನು ಪ್ರಶ್ನಿಸುವಂತಾಗಿದೆ.
ಶೌಚಾಲಯವಿಲ್ಲದ ಹುಳಿಯಾರಿನ ಕೂಗಳತೆಯಲ್ಲಿರುವ ಸೈಯದ್ ಸಾಬ್ ಪಾಳ್ಯದ ನೋಟ. |
ಗ್ರಾಮೀಣ ಭಾಗದಲ್ಲಿ ಹೆಚ್ಚು ಕಡಿಮೆ ಎಲ್ಲರೂ ಶೌಚಾಲಯ ಹೊಂದಿ ಸಂಪೂರ್ಣ ಬಯಲು ಮುಕ್ತ ಕರ್ನಾಟಕ ಎನ್ನುವ ಹೊತ್ತಿನಲ್ಲೇ,ಸರ್ಕಾರದ ನೈರ್ಮಲ್ಯೀಕರಣ ಯೋಜನೆಯ ಫಲ ಇವರಿಗೆ ದೊರೆಯದ ಕಾರಣ ಶೌಚಾಲಯ ಹೊಂದಿರದ ಈ ಗ್ರಾಮ ಇದೀಗ ಬೆಳಕಿಗೆ ಬಂದಿದೆ.
ಹೌದು, ಹುಳಿಯಾರಿನ ಕೂಗಳತೆಯಲ್ಲಿರುವ ಸೈಯದ್ ಸಾಬ್ ಪಾಳ್ಯದಲ್ಲಿ ಐವತ್ತು ಕುಟುಂಬಗಳಿದ್ದು,ಶೌಚಾಲಯದ ಬಗ್ಗೆ ಅರಿವಿದ್ದರೂ ಕೂಡ ಅನುದಾನ ಬರುವುದಿಲ್ಲ,ಬಂದರೂ ತಡವಾಗುತ್ತದೆ ಎಂಬ ನೆಪವೊಡ್ಡಿ ಶೌಚಾಲಯದ ಉಸಾಬರಿಯೇ ಬೇಡವೆಂದು ಸುಮ್ಮನಾಗಿದ್ದಾರೆ.
ಶೌಚಾಲಯದ ಯೋಜನೆಗಳ ಬಗ್ಗೆ ಹಾಗೂ ಕೊಡಮಾಡುವ ಅನುದಾನದ ಬಗ್ಗೆ ಗ್ರಾಮಸ್ಥರನ್ನು ಭೇಟಿ ಮಾಡಿ ಅರಿವು ಮೂಡಿಸುತ್ತಿರುವ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಎನ್.ಕುಮಾರ್. |
ಈ ಊರಿನಲ್ಲಿ ಇಂದಿಗೂ ಇರುವುದು ಒಂದೇ ಶೌಚಾಲಯ.ಮಿಕ್ಕ ಐವತ್ತು ಹೆಚ್ಚು ಮನೆಗಳಿಗೆ ಶೌಚಾಲಯದ ಭಾಗ್ಯವಿಲ್ಲ.ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಹೆಣ್ಣು ಮಕ್ಕಳು ಬಯಲು,ಗದ್ದೆ,ಹೊಲಗಳನ್ನು ಆಶ್ರಯಿಸಬೇಕಾಗಿದೆ.
ಹಾಗಾದರೆ ಇದು ಎಲ್ಲೋ ಇರುವ ಗುಡ್ಡಗಾಡಿನಲ್ಲಿರುವ ಪ್ರದೇಶವಲ್ಲ.ಹುಳಿಯಾರಿನಿಂದ ತೊರೆಸೂರಗನಹಳ್ಳಿ ಮಾರ್ಗವಾಗಿ ಮೂರು ಕಿಲೋ ತೆರಳಿದರೆ ಸಿಗುವ ಗ್ರಾಮವೇ ಸೈಯದ್ ಸಾಬ್ ಪಾಳ್ಯ.ಇಲ್ಲಿ ಬರೋಬ್ಬರಿ ಐವತ್ತು ಮನೆಗಳಿದ್ದು 200ಮೀ ದೂರದ ಎರಡು ಸಿಮೆಂಟ್ ರಸ್ತೆಯ ಭಾಗ್ಯ ಕಂಡಿದೆ.ಇತ್ತೀಚೆಗಷ್ಟೇ ನಿರಂತರ ಜ್ಯೋತಿ ಭಾಗ್ಯ ಲಭಿಸಿದೆ.ನೀರಿಗಾಗಿ ಸಿಸ್ಟನ್ ಕೂಡಾ ಇಡಲಾಗಿದೆ ಸಮುದಾಯದವರ ಪ್ರಾರ್ಥನೆಗೆ ಮಸೀದಿ ಕೂಡ ಇದೆ. ಇಷ್ಟೆಲ್ಲಾ ಇದ್ದರೂ ಸಹ ಶೌಚಾಲಯದ ಭಾಗ್ಯವಿಲ್ಲದಿರುವುದೇಕೆಂಬುದೇ ಯಕ್ಷಪ್ರಶ್ನೆಯಾಗಿದೆ.
ಶೌಚಾಲಯ ನಿರ್ಮಿಸಲು ನೆರವು ನೀಡುವ ನಿಟ್ಟಿನಲ್ಲಿ ಯುವಮುಖಂಡ ಇಮ್ರಾಜ್ ನೇತೃತ್ವದ ತಂಡ ಗ್ರಾಮದಲ್ಲಿನ ಜನರ ಮನವೊಲಿಕೆಯಲ್ಲಿ ತೊಡಗಿರುವುದು. |
ಹಾಗಂತ ಶೌಚಾಲಯದ ಬಗ್ಗೆ ಇಲ್ಲಿನ ಜನಕ್ಕೆ ಅರಿವಿಲ್ಲವೇ ಎಂದರೆ ಅದು ಕೂಡ ಸುಳ್ಳು.ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರೇ ಇರುವ ಈ ಊರಿನಲ್ಲಿ ಹೆಚ್ಚಿನ ಜನ ಇತರೆಡೆಗೆ ಕೆಲಸಕ್ಕೆ ಹೋಗಿದ್ದಾರೆ.ಶೌಚಾಲಯದ ಅವಶ್ಯಕತೆ,ಅನಿವಾರ್ಯತೆ ಬಗ್ಗೆ ಇವರಿಗೆ ತಿಳಿದಿದೆ.ಆದರೆ ಈ ಪ್ರಶ್ನೆ ಹುಡುಕಿಕೊಂಡು ಹೊರಟರೆ ಹಿಂದೆ ನಿರ್ಮಿಸಿದ್ದ ಶೌಚಾಲಯಕ್ಕೆ ಇದುವರೆಗೂ ದುಡ್ಡು ಕೊಡದಿರುವುದು ಹಾಗೂ ತೆಗೆಯಲಾಗಿದ್ದ ಎರಡು ಶೌಚದ ಗುಂಡಿಗೆ ಕಾರ್ಯಾದೇಶ ನೀಡದೆ ಸತಾಯಿಸಿರುವುದು ಕಾರಣ ಎನ್ನಲಾಗಿದೆ.
ಸ್ವಚ್ಛತೆ ಸ್ವಾತಂತ್ರ್ಯದಷ್ಟೇ ಮುಖ್ಯ ಎಂಬುದು ಗಾಂಧೀಜಿಯ ಆಶಯವಾಗಿದ್ದು,ಸ್ವಚ್ಛ ಭಾರತ್ ಮಿಷನ್ ಅಡಿ ಶೌಚಾಲಯದ ಜಾಗೃತಿ ಮೂಡಿಸುವ ಕೆಲಸ ಗ್ರಾಮ ಪಂಚಾಯಿತಿ ಪಿಡಿಒ,ಕಾರ್ಯದರ್ಶಿಗಳು ಹಾಗೂ ಆ ಭಾಗದ ಸದಸ್ಯರುಗಳ ಹೊಣೆಗಾರಿಕೆಯಾಗಿದೆ.ಶೌಚಾಲಯದ ಬಗ್ಗೆ ನಿರ್ಲಕ್ಷ್ಯ ವಹಿಸಿ,ನಿರೀಕ್ಷಿತ ಸಾಧನೆ ತೋರದ ಪಿಡಿಓಗಳಿಗೆ ಚುರುಕು ಮುಟ್ಟುವ ಕೆಲಸ ಅಧ್ಯಕ್ಷರು ಮಾಡಬೇಕಿದ್ದು,ಗಾಂಧಿ ಜಯಂತಿಯ ಈ ದಿನವಾದರೂ ಈ ಗ್ರಾಮಕ್ಕೆ ಶೌಚಾಲಯದ ಭಾಗ್ಯ ಕಲ್ಪಿಸುವರೇ ಕಾದು ನೋಡಬೇಕಿದೆ.
--------------------------------
ತಿಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ,ಶೌಚಾಲಯದ ಯೋಜನೆಗಳ ಬಗ್ಗೆ ಹಾಗೂ ಕೊಡಮಾಡುವ ಅನುದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಇಲ್ಲಿನ ಗ್ರಾಮ ಪಂಚಾಯಿತಿಯವರು ಮಾಡಬೇಕಿದೆ.ಆರೋಗ್ಯ ಇಲಾಖೆಯವರು ಮನೆ ಮನೆಗೆ ತೆರಳಿ ಬಯಲು ಮಲ ವಿಸರ್ಜನೆಯಿಂದ ಆಗುವ ಆರೋಗ್ಯ ಅನಾಹುತದ ಬಗ್ಗೆ ತಿಳಿ ಹೇಳಬೇಕಾಗಿದೆ: ಎಚ್.ಎನ್. ಕುಮಾರ್,ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು.
----------------------------------
ನೈರ್ಮಲ್ಯದ ಕಡೆಗೆ ನಮ್ಮ ನಡಿಗೆ ಎಂಬ ಘೋಷಣಾ ವಾಕ್ಯದೊಂದಿಗೆ ಪ್ರಾರಂಭಗೊಂಡಿರುವ ಸರಕಾರದ ಯೋಜನೆ ಅನುಷ್ಠಾನಗೊಳಿಸಲು ತಿಮ್ಲಾಪುರ ಗ್ರಾಮ ಪಂಚಾಯಿತಿ ವಿಫಲವಾಗಿದೆ.ಇಂತಿಷ್ಟು ಟಾರ್ಗೆಟ್ ಅಂತ ಪ್ರತಿ ಪಂಚಾಯಿತಿಗೂ ನಿಗದಿ ಮಾಡಿದ್ದರೂ ಸಹ ಪಿಡಿಒ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತದೆ.ಇದರ ಬಗ್ಗೆ ಅಧ್ಯಕ್ಷರು ತುರ್ತಾಗಿ ಗಮನ ಹರಿಸಬೇಕಿದೆ. : ಭಟ್ಟರಹಳ್ಳಿ ಮಲ್ಲಿಕಾರ್ಜುನ್,ಜಿಲ್ಲಾ ಸಂಘಟನ ಕಾರ್ಯದರ್ಶಿ,ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ.
-----------------------------------
ಶೌಚಾಲಯ ಇಲ್ಲದಿರುವ ವಿಷಯ ಗಮನಕ್ಕೆ ಬಂದಿದೆ.ಎಷ್ಟು ಜನಕ್ಕೆ ಶೌಚಾಲಯವಿಲ್ಲ,ಆಗಬೇಕಾಗಿರುವ ಕೆಲಸ ಏನೇನಿದೆ ಎಂದು ಫಲಾನುಭವಿಗಳನ್ನು ಹುಡುಕಿಕೊಂಡು ಹೋಗಲು ಪಿಡಿಒ ಅವರಿಗೆ ಆದೇಶಿಸಿರುವೆ.ಪಿಡಿಒ ವರದಿ ತರಿಸಿ ಶೌಚಾಲಯ ನಿರ್ಮಿಸಿಕೊಳ್ಳಲು ಕಾರ್ಯಾದೇಶವನ್ನು ಸ್ಥಳದಲ್ಲೇ ಕೊಡಲು ಅನುವು ಮಾಡಿಕೊಡುವೆ. :ದೇವರಾಜು,ತಿಮ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು.
---------------------------
ಸೈಯದ್ ಸಾಬ್ ಪಾಳ್ಯಕ್ಕೆ ಸಂಬಂಧಿಸಿದಂತೆ ಶೌಚಾಲಯದ ಅವಶ್ಯಕತೆಯ ಮನವರಿಕೆ ಮಾಡಿಕೊಡಲು ಹಾಗೂ ಹಣಕಾಸಿನ ತೊಂದರೆ ಇದ್ದಲ್ಲಿ ನಮ್ಮ ಸಮುದಾಯದ್ದೆ ಆದ ಟಿಪ್ಪು ಸುಲ್ತಾನ್ ಪತ್ತಿನ ಸಹಕಾರ ಸಂಘದಲ್ಲಿ ಹತ್ತು ಸಾವಿರ ರೂಪಾಯಿ ಸಾಲದ ರೂಪದಲ್ಲಿ ಹಣ ನೀಡಲಾಗುವುದರ ಬಗ್ಗೆ ಸಮುದಾಯದ ಯುವಕರುಗಳು ಸ್ಥಳಕ್ಕೆ ತೆರಳಿ ಮನವರಿಕೆ ಮಾಡಿಕೊಡಲಾಗಿದೆ.: ಇಮ್ರಾಜ್, ಯುವ ಮುಖಂಡ
----------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ