ಪಂಚಾಯ್ತಿಯಲ್ಲಿ ಆಪರೇಟರ್ ಹುದ್ದೆ ನೀಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವೆ
----------------------------------------
ಕಳೆದ ಮೂರು ವರ್ಷಗಳಿಂದಲೂ ಉದ್ಯೋಗಕ್ಕಾಗಿ ಅಲೆದ ಲಕ್ಷ್ಮೀಯ ಗೋಳಾಟ
--------------------------------------
ಜಿಲ್ಲಾ ಉಸ್ತುವಾರಿ ಸಚಿವರ ಆದೇಶಕ್ಕೂ ಕಿಮ್ಮತ್ತು ನೀಡದ ಅಧಿಕಾರಿಗಳು
----------------------------------------
ಹುಳಿಯಾರು:ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಕಳೆದ ಮೂರು ವರ್ಷದ ಹಿಂದೆ ನಾನು ನಿರ್ವಹಿಸಿದ್ದು ನನ್ನನ್ನು ವಿನಾಕಾರಣ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದು ಆ ಹುದ್ದೆಯನ್ನು ನನಗೆ ನೀಡಲೇಬೇಕು.ಇಲ್ಲದಿದ್ದಲ್ಲಿ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಲಕ್ಷ್ಮೀ ಎಂಬಾಕೆ ತನ್ನ ಅಳಲು ತೋಡಿಕೊಂಡು ಎಲ್ಲರೆದುರಿಗೂ ಕಣ್ಣೀರಿಟ್ಟ ಪ್ರಸಂಗ ಇಂದಿನ ಗ್ರಾಮಸಭೆಯಲ್ಲಿ ಜರುಗಿತು.
ಹುಳಿಯಾರು ಪಂಚಾಯ್ತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಉದ್ಯೊಗಕ್ಕಾಗಿ ಒತ್ತಾಯಿಸಿದ ಲಕ್ಷ್ಮೀ. |
ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಬಂದಿರುವ ಒಂದು ಕೋಟಿರೂ ಹಣದ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಕರೆಯಲಾಗಿದ್ದ ಗ್ರಾಮಸಭೆಯಲ್ಲಿ ತನ್ನ ತಾಯಿಯೊಂದಿಗೆ ಆಗಮಿಸಿದ್ದ ಈಕೆ ಜಿಲ್ಲಾ ಪಂಚಾಯಿತಿ ಸದಸ್ಯ,ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ತನ್ನ ಸಮಸ್ಯೆ ಹೇಳಿಕೊಂಡಿದ್ದಲ್ಲದೆ ಸಮಸ್ಯೆ ಪರಿಹರಿಸದಿದ್ದಲ್ಲಿ ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದಳು.
ಹುಳಿಯಾರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈ ಹಿಂದೆ ಮೂರು ವರ್ಷ ಕೆಲಸ ಮಾಡಿದ್ದು ಅವರು ಸಂಬಳವೆಂದು ಬಿಡುಗಾಸು ನೀಡದಿದ್ದರೂ ಸಹ ಮುಂದೆ ಉದ್ಯೋಗ ದೊರೆಯಬಹುದೆಂಬ ನಿರೀಕ್ಷೆಯಿಂದ ಕೆಲಸ ನಿರ್ವಹಿಸಿದ್ದೆ. ಆದರೆ ಯಾವುದೇ ಕಾರಣ ನೀಡದೆ ನನ್ನನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿ ಬೇರೆ ತಾಲ್ಲೂಕಿನ ವ್ಯಕ್ತಿಯನ್ನು ಇದೇ ಕೆಲಸಕ್ಕೆ ತೆಗೆದುಕೊಂಡು ಇರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕಂಪ್ಯೂಟರ್ ಕೋರ್ಸ್ ಮಾಡಿರುವ ನಾನು ಪರಿಶಿಷ್ಟ ಜಾತಿಯ ದೊಂಬರು ಅಲೆಮಾರಿ ಜನಾಂಗಕ್ಕೆ ಸೇರಿದ್ದು ಕೂಲಿ ನಾಲಿಯಿಂದಲೇ ಜೀವನ ಸಾಗಿಸಬೇಕಾಗಿದ ದುಸ್ಥಿತಿ ಇದೆ.ಪಂಚಾಯಿತಿಯಲ್ಲಿ ಉದ್ಯೋಗವಾಗಬಹುದೆಂಬ ನಿರೀಕ್ಷೆಯಲ್ಲಿ ನಾನು ಬೇರೆಲ್ಲೂ ಕೆಲಸಕ್ಕೆ ಹೋಗದೆ ಇದೇ ಪಂಚಾಯಿತಿಯಲ್ಲಿ ಮೂರು ವರ್ಷ ಕಾರ್ಯ ನಿರ್ವಹಿಸಿ ಇದೀಗ ಪಂಚಾಯಿತಿಯಲ್ಲೂ ಕೆಲಸ ಸಿಗದೆ ಬೇರೆಡೆಯೂ ಕೆಲಸವಿಲ್ಲದೆ ನಿರುದ್ಯೋಗಿಯಾಗಿ ಜೀವನ ನಡೆಸುವುದು ಸಮಸ್ಯೆಯಾಗಿದೆ.
ನನ್ನ ಸಮಸ್ಯೆ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸಕರು,ಸಂಸದರು,ಜಿಲ್ಲಾ ಉಸ್ತುವಾರಿ ಸಚಿವರು,ಮುಖ್ಯಮಂತ್ರಿಗಳು ಕಡೆಗೆ ಪ್ರಧಾನ ಮಂತ್ರಿಗಳವರೆಗೂ ಪತ್ರ ಬರೆದು ಎಲ್ಲರ ಗಮನಕ್ಕೂ ತಂದು ನನ್ನ ಅಳಲು ತೋಡಿಕೊಂಡಿರುವ.ಎಲ್ಲೆಡೆಯಿಂದಲೂ ಇವರನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿ ಪತ್ರ ಬಂದಿದ್ದರೂ ಸಹ ನೀವು ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳದಿರಲು ಕಾರಣವೇನೆಂದು ಪ್ರಶ್ನಿಸಿ ಎಲ್ಲೆಡೆಯಿಂದ ಬಂದಿದ್ದ ಪತ್ರ ಪ್ರದರ್ಶನ ಮಾಡಿದರು.
ಸಂಸದರ,ಮುಖ್ಯಮಂತ್ರಿಗಳ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ನನ್ನನ್ನು ಸತಾಯಿಸಿತಿರುವುದಲ್ಲದೇ ಇಲ್ಲ ಸಲ್ಲದ ಕಾನೂನು ನೆಪ ಹೇಳಿ ನುಣುಚಿಕೊಳ್ಳುತ್ತಿರುವುದು ಸರಿಯಲ್ಲ. ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಾರೊಬ್ಬರೂ ಸಹ ಸರ್ಕಾರದ ನೀತಿ ನಿಯಮ ಹಾಗೂ ಆಯ್ಕೆ ಪ್ರಕ್ರಿಯೆಯಂತೆ ಆಯ್ಕೆಯಾಗದೇ ಕೇವಲ ಸದಸ್ಯರ ಶಿಫಾರಸ್ಸು ಮೇಲೆಯೇ ಕಾರ್ಯನಿರ್ವಹಿಸುತ್ತಿದ್ದಾರೆ.ಅಂತಹದರಲ್ಲಿ ಅವರು ಯಾರಿಗೂ ಇಲ್ಲದ ಕಾನೂನು ನನಗೆ ಮಾತ್ರ ಏಕೆಂದು ಪ್ರಶ್ನಿಸಿದ್ದಲ್ಲದೆ ಪರಿಶಿಷ್ಟರು ಎಂದು ನನ್ನನ್ನು ತೆಗೆದುಕೊಳ್ಳದೆ ಅಲೆದಾಡಿಸುತ್ತಿರುವುದು ಅಮಾನವೀಯ ಎಂದರು.
ಇಂದು ಎಲ್ಲರೂ ಸೇರಿದ್ದು ನನ್ನ ಸಮಸ್ಯೆಯನ್ನು ಸ್ಥಳದಲ್ಲೇ ಬಗೆಹರಿಸಬೇಕೆಂದು ಪಟ್ಟು ಹಿಡಿದ ಅವರು ಇಲ್ಲದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.ಸ್ಥಳದಲ್ಲೇ ಇದ್ದ ಪೊಲೀಸರು ವಿಷದ ಬಾಟಲ್ ಎತ್ತಿಕೊಂಡು ಸಮಾಧಾನ ಮಾಡಿದರು.ಇದೇ ವೇಳೆ ಜಿಲ್ಲಾ ಪಂಚಾಯಿತಿ ಸಿದ್ದರಾಮಣ್ಣ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಹೆಚ್.ಎನ್.ಕುಮಾರ್ ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡಿ ಸಮಸ್ಯೆಯನ್ನು ಅವರ ಗಮನಕ್ಕೆ ತಂದು ಉದ್ಯೋಗ ನೀಡುವಂತೆ ಆಗ್ರಹಿಸಿದರು.
ಜಿಲ್ಲಾಉಸ್ತುವಾರಿ ಸಚಿವರ ಪತ್ರ. |
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಾಹಕ ಅಧಿಕಾರಿ ಆಕೆಯ ಸಲ್ಲಿಸಿರುವ ದಾಖಲೆಗಳು ಹಾಗೂ ಮನವಿ ಪತ್ರಗಳನ್ನು ತೆಗೆದುಕೊಂಡು ಬಂದಲ್ಲಿ ಪರಿಶೀಲಿಸುವುದಾಗಿ ಹೇಳಿದರು.
ಒಟ್ಟಾರೆ ಅಧಿಕಾರಿಗಳು ಈಗಲಾದರೂ ಜಿಲ್ಲಾಉಸ್ತುವಾರಿ ಸಚಿವರ ಆದೇಶಕ್ಕೆ ಬೆಲೆಕೊಟ್ಟು ಆಕೆಯ ಉದ್ಯೋಗಕ್ಕೊಂದು ದಾರಿಮಾಡಿಕೊಡುವರಾ ಕಾದುನೋಡಬೇಕು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ