ಪಟ್ಟಣದ ಮಾರುತಿ ನಗರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ದೇವಾಲಯ ಜಿರ್ಣೋದ್ದಾರ ಸಮಿತಿ ಹಾಗೂ ಭಕ್ತಾಧಿಗಳಿಂದ ಸ್ವಾಮಿಯ ಐದನೇ ವರ್ಷದ ಅದ್ದೂರಿ ಹನುಮಜಯಂತಿ ಮಹೋತ್ಸವ ಹಾಗೂ ಪ್ರಥಮ ವರ್ಷದ ಆಂಜನೇಯಸ್ವಾಮಿ ಮಹಾರಥೋತ್ಸವ ಶನಿವಾರದಂದುವಿಜೃಂಭಣೆಯಿಂದ ನಡೆಯಿತು.
ಇದರಂಗವಾಗಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ರಾಮಚಮ್ದ್ರ ಭಟ್ಟರ ನೇತೃತ್ವದಲ್ಲಿ ಪ್ರಾರಂಭಗೊಂಡು ಗಣಪತಿ ಪೂಜೆ,ನವಗ್ರಹ ಪೂಜೆ,ಆಂಜನೇಯಸ್ವಾಮಿಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಆಂಜನೇಯ ಮಹಾಮಂತ್ರ ಜಪ ನಡೆದು ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಸರ್ವಾಲಂಕೃತಗೊಡಿದ್ದ ಆಂಜನೇಯಸ್ವಾಮಿಯವರನ್ನು ಗ್ರಾಮದೇವತೆಗಳಾದ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಸಾನಿಧ್ಯದಲ್ಲಿ ನೂತನ ರಥಕ್ಕೇರಿಸಲಾಯಿತು.ಸಡಗರ ಮತ್ತು ಸಂಭ್ರಮಗಳಿಂದ ಪಾಲ್ಗೊಂಡಿದ್ದ ಅಪಾರ ಭಕ್ತರು ಜಯಘೋಷದೊಂದಿಗೆ ರಥಕ್ಕೆ ಪೂಜೆ ಸಲ್ಲಿಸಿ, ಹಣ್ಣು ದವನ ಎಸೆದು ಪುನೀತ ಭಾವ ಹೊಂದಿದರು. ಅಲಂಕೃತ ರಥವನ್ನು ದೇವಾಲಯದ ಮುಂಭಾಗ ದಿಂದ ರಾಮಗೋಪಾಲ್ ಸರ್ಕಲ್ ವರೆಗೆ ಎಳೆದು ತಂದರು. ಹನುಮನ ಮೂರ್ತಿಗೆ ಮಾಡಲಾಗಿದ್ದ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು. ದೇವಾಲಯದ ಆವರಣದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು
ಸಂಜೆ ದೇವಾಲಯದ ಆವರಣದಿಂದ ರಾಜಬೀದಿಯಲ್ಲಿ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. ದಾವಣಗೆರೆಯ ಬಸವಕಲಾ ತಂಡದವರಿಂದ ನಂದಿಧ್ವಜಕುಣಿತ,ಬೆಳ್ತಂಗಡಿ ಗಿರಿಧರ ಶೆಟ್ಟಿ ಬೊಂಬೆ ಬಳಗದವರಿಂದ ಹಾಲಕ್ಕಿ ಕುಣಿತ,ಹುಲಿವೇಷ,ಮಂಡ್ಯದ ಸವಿತಾ ಮಹಿಳಾ ಕಲಾತಂಡದಿಂದ ಮಹಿಳಾ ಪೂಜಾ ಕುಣಿತ,ಹುಲಿಹಳ್ಳಿ ಬಸವಜ್ಯೋತಿ ಕಲಾತಂಡದವರಿಂದ ಮಹಿಳಾ ವೀರಗಾಸೆ , ಮೈಸೂರು-ಚಾಮರಾಜನಗರದ ಕಲಾತಂಡದವರಿಂದ ತಮಟೆ, ನಗಾರಿ ವಾದ್ಯ,ಬೆಂಗಳೂರಿನ ಅಣ್ಣಮ್ಮನ ತಮಟೆ ವಾದ್ಯ,ಸಾಗರದ ಐಸಿರಿ ಕಲಾತಂಡದವ ರಿಂದ ಮಹಿಳಾಡೊಳ್ಳುಕುಣಿತ,ಮಹಿಳಾ ಕೋಲಾಟ, ಲಂಬಾಣಿನೃತ್ಯ,ಹುಳಿಯಾರಿನ ತಂಡದವರಿಂದ ನಾದಸ್ವರ ಸೇರಿದಂತೆ ವಿವಿಧ ಜನಪದ ಕಲಾಪ್ರಕಾರಗಳು ರಥೋತ್ಸವಕ್ಕೆ ಮೆರಗು ನೀಡಿದವು. ಉತ್ಸವದುದ್ದಕ್ಕೂ ನಡೆದ ಮದ್ದಿನ ಪ್ರದರ್ಶನ ಮೈನವಿರೇಳಿಸಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ