ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕಾ ಮಹೋತ್ಸವವು ಸ್ವಾಮಿಯ ಮೂಲಸ್ಥಾನವಾದ ಪುರದಮಠದಲ್ಲಿ ಸೋಮವಾರ ಗ್ರಾಮದೇವತೆ ಶ್ರೀಕಾಳಿಕಾಂಭ ದೇವಿ ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ,ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ವೈಭವಯುತವಾಗಿ ನಡೆಯಿತು.
16ನೇ ಶತಮಾನದ ಸಂತ ಗೋಸಲ ಚನ್ನಬಸವಣ್ಣನವರ ತಪೋಕ್ಷೇತ್ರವೆಂದೇ ಖ್ಯಾತವಾಗಿರುವ ಪುರದ ಮಠದಲ್ಲಿ ಪ್ರತಿವರ್ಷದ ಕಾರ್ತಿಕ ಮಾಸದ ಪೂರ್ಣಿಮದಂದು ಈ ಕಾರ್ತಿಕ ಮಹೋತ್ಸವ ನಡೆಯುತ್ತದೆ. ಅದರಂತೆ ಸೋಮವಾರ ಬೆಳಿಗ್ಗೆ ಕೆಂಕೆರೆ ಗ್ರಾಮದಲ್ಲಿರುವ ಸ್ವಾಮಿಗೆ ವಿಶೇಷ ಪೂಜೆ ನಡೆಸಿ,ನಂತರ ಗ್ರಾಮದೇವತೆ ಕಾಳಮ್ಮ ಹಾಗೂ ಸ್ವಾಮಿಯವರನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದಲ್ಲದೆ, ಬಸವನ ಉತ್ಸವದೊಂದಿಗೆ ಮೂಲಸ್ಥಾನ ಪುರದಮಠಕ್ಕೆ ಕರೆದ್ಯೊಯಲಾಯಿತು. ಮೂಲಸ್ಥಾನದಲ್ಲಿರುವ ಸ್ವಾಮಿಯ ಮೂಲವಿಗ್ರಹಕ್ಕೆ ನಟರಾಜ್ ಪೌರೋಹಿತ್ಯದಲ್ಲಿ ಅಭಿಷೇಕ, ಮಾಡಿ ನಂತರ ಬಗೆಬಗೆ ಹೂಗಳಿಂದ ಸಿಂಗರಿಸಿ,ಮಧ್ಯಾಹ್ನ 1 ಗಂಟೆಗೆ ಪುರದಮಠದಲ್ಲಿ ಬಸವನ ಉತ್ಸವ ನಡೆಸಿ, ತಯಾರಿಸಿದ್ದ ಪ್ರಸಾದವನ್ನು ಸ್ವಾಮಿಯ ಗದ್ದಿಗೆ ಇರುವ ಪುರಾತನ ಗುಹೆಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ನೆರವೇರಿಸಿ ಬಂದ ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ನಡೆಯಿತು.
ರಾಗಿಮುದ್ದೆಸಾರಿನ ಊಟ : ಇಲ್ಲಿನ ವಿಶೇಷವೆಂದರೆ ಮಹೊತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ರಾಗಿಮುದ್ದೆ ಸಂತರ್ಪಣೆ.ಸುತ್ತಮುತ್ತಲ ಗ್ರಾಮಗಳ ಭಕ್ತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಒಂದು ಭಾಗವನ್ನು ಇಲ್ಲಿ ನಡೆಯುವ ಮಹಾ ದಾಸೋಹಕ್ಕೆ ಕೊಟ್ಟು ಸಹಕರಿಸುವುದು ಹಿಂದಿನಿಂದ ನಡೆದು ಬಂದಿದೆ. ಮಹಾ ದಾಸೋಹದಲ್ಲಿ ‘ಮುದ್ದೆ-ಸಾರು’ ರುಚಿ ಸವಿಯುವುದು ವಿಶೇಷ.ಎಲ್ಲಾ ಭಕ್ತಾಧಿಗಳೂ ಸ್ವಾಮಿಯ ಪ್ರಸಾದವಾದ ರಾಗಿ ಮುದ್ದೆ ಊಟವನ್ನು ಸವಿಯದೇ ಹೋಗುವುದಿಲ್ಲ,ಇಲ್ಲಿಗೆ ಆಗಮಿಸುವ ಸುಮಾರು 8 ರಿಂದ 10 ಸಾವಿರ ಭಕ್ತಾಧಿಗಳಿಗಾಗಿ ಬೆಳಗಿನಿಂದಲೇ ಗ್ರಾಮದಲ್ಲಿನ ಅಡುಗೆಭಟ್ಟರು,ಗ್ರಾಮದ ಹಿರಿಯರು,ಯುವಕರು ಅಡುಗೆ ಮಾಡುವ ಕಾರ್ಯದಲ್ಲಿ ತೊಡಗಿದರೆ,ಮಹಿಳೆಯರು ಮುದ್ದೆ ಕಟ್ಟುವ ಕಾರ್ಯದಲ್ಲಿ ತೊಡಗಿರುತ್ತಾರೆ.ಇಲ್ಲಿಗೆ ತುಮಕೂರು ಜಿಲ್ಲೆಯ ನಾನಾ ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ಈ ಪ್ರಸಾದವನ್ನು ಪಡೆಯುತ್ತಾರೆ.ಅಲ್ಲದೆ ಇಲ್ಲಿ ತಯಾರಿಸಲಾಗಿದ್ದ ಸಾಂಬಾರನ್ನು ನಂತರ ತಮ್ಮ ಮನೆಗಳಿಗೆ ಕೊಂಡೈಯುವುದು ವಿಶೇಷ. ಊಟ ವಿತರಿಸುವ ಸಲುವಾಗಿ ಕೌಂಟರ್ ವ್ಯವಸ್ಥೆ ಮಾಡಿದ್ದು,ಭಕ್ತಾಧಿಗಳಿಗೆ ರಾಗಿ ಮುದ್ದೆ ಊಟವನ್ನು ಉಣಬಡಿಸಿದರು.
ಮಹೋತ್ಸವದ ನೇತೃತ್ವವನ್ನು ಸಂತೋಷ್, ಬಾಬುರಾಜ್, ದರ್ಶನ್, ಉಮೇಶ್, ಶರತ್, ಮಹೇಶ್, ದೇವರಾಜು,ಮಧು,ಅನಿಲ್,ವಿಶ್ವನಾಥ್,ಶ್ರೀಧರ ಸೇರಿದಂತೆ ಚನ್ನಬಸವೇಶ್ವರಯುವಕ ಸಂಘದವರು ವಹಿಸಿದ್ದರು. ತಾ.ಪಂ.ಸದಸ್ಯ ನವೀನ್, ಗ್ರಾ.ಪಂ.ಸದಸ್ಯರಾದ ಯು.ಸಿ.ಗೌಡ,ಬೆಂಕಿ ಬಸವರಾಜು ಸೇರಿದಂತೆ ಅಪಾರ ಸಂಖ್ಯೆಯ ಗ್ರಾಮಸ್ಥರು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ