ಹುಳಿಯಾರು: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಶಾಲಾ ಆವರಣದಲ್ಲಿ ಕೈಗೊಂಡಿರುವ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಪರಿಗಣಿಸಿ ತುಮಕೂರು ಜಿಲ್ಲೆಯ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಈ ಶಾಲೆಯನ್ನು 2013-14 ನೇ ಸಾಲೀನ ಜಿಲ್ಲಾ ಮಟ್ಟದ "ಪರಿಸರ ಮಿತ್ರಶಾಲೆ" ಎಂದು ಗುರ್ತಿಸಿ 10 ಸಾವಿರ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಿದ್ದಾರೆ.
ವಿಜ್ಞಾನ ಶಿಕ್ಷಕಿ ವಿದ್ಯಾಕುಂಚನೂರು ಅವರ ಮಾರ್ಗದರ್ಶನದಲ್ಲಿ ಶಾಲೆಯ ಹತ್ತು ಮಂದಿ ವಿದ್ಯಾರ್ಥಿಗಳನ್ನೊಳಗೊಂಡ ತಂಡ ಶಾಲೆಯ ಕೈತೋಟದಲ್ಲಿ ಕಾಡುಕೃಷಿ ಯೋಜನೆಯಡಿ ವಿವಿಧ ಪ್ರಕಾರದಲ್ಲಿ ಶಾಲಾಮಟ್ಟದಲ್ಲಿ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡು ತರಕಾರಿ ಸೇರಿದಂತೆ ಇತರೆ ಪದಾರ್ಥಗಳನ್ನು ಬೆಳೆದಿರುವುದಲ್ಲದೆ, ಹೆಚ್ಚುತ್ತಿರುವ ಮಾಲಿನ್ಯವನ್ನು ಯಾವ ರೀತಿ ನಿಯಂತ್ರಣ ಮಾಡಬಹುದು ಎಂಬ ಅರಿವನ್ನು ಮೂಡಿಸುವ ಕಾರ್ಯದಲ್ಲಿ ಈ ತಂಡ ತೊಡಗಿದ್ದು ಪ್ರಶಸ್ತಿಗೆ ಭಾಜನವಾಗಿದೆ.
![]() |
ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯನ್ನು 2013-14 ನೇ ಸಾಲೀನ ಜಿಲ್ಲಾ ಮಟ್ಟದ "ಪರಿಸರ ಮಿತ್ರಶಾಲೆ" ಎಂದು ಗುರ್ತಿಸಿ ಪ್ರಶಸ್ತಿಪತ್ರ ವಿತರಿಸಿರುವುದು. |
ಕಳೆದ ಕೆಲ ತಿಂಗಳುಗಳಿಂದ ನಾವುಗಳು ಶಾಲಾ ಕೈತೋಟದಲ್ಲಿ ಪರಿಸರಕ್ಕೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡಿದ್ದು, ನಿತ್ಯ ಶಾಲಾ ಆವರಣದಲ್ಲಿ ಸೃಷ್ಠಿಯಾಗುವ ತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸುವುದು, ನೀರನ್ನು ಪೋಲು ಮಾಡದೆ ಅವಶ್ಯಕತೆಗೆ ತಕ್ಕಂತೆ ಪೂರಕವಾಗಿ ಬಳಸುವುದರ ಜೊತೆಗೆ ಸಸ್ಯಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಹಾಯಿಸುವುದು, ಮಕ್ಕಳು ಸ್ವತಃ ತಾವೇ ಮಣ್ಣನ್ನು ಹದಗೊಳಿಸಿ ಸಣ್ಣ ಪುಟ್ಟ ಸಸಿಗಳನ್ನು ನಾಟಿ ಮಾಡುವುದು. ಒಂದೆಡೆ ತೊಟ್ಟಿಯಲ್ಲಿ ಸಂಗ್ರಹಿಸಿದ ತ್ಯಾಜ್ಯದಿಂದ ಎರೆಹುಳು ಗೊಬ್ಬರದ ತಯಾರಿಕೆ ಸೇರಿದಂತೆ ಅನೇಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಿದ್ದು ಅದನ್ನು ಗುರ್ತಿಸಿದ ಮಾಲಿನ್ಯ ನಿಯಂತ್ರಣ ಮಂಡಳಿಯವರು ನಮ್ಮ ಶಾಲೆಗೆ ಪರಿಸರ ಮಿತ್ರ ಶಾಲೆ ಎಂದು ಪ್ರಶಸ್ತಿ ನೀಡಿರುವುದು ನಾವುಗಳು ಕೈಗೊಂಡ ಶ್ರಮಕ್ಕೆ ತಕ್ಕ ಪ್ರತಿಫಲವಾಗಿದೆ ಎಂದು ವಿದ್ಯಾಕುಂಚನೂರು ಅವರು ತಿಳಿಸಿದರು. ಈಗ ಬಂದಿರುವ ನಗದು ಹಣವನ್ನು ಹನಿನೀರಾವರಿ ವ್ಯವಸ್ಥೆ ಅಥವಾ ಮಳೆ ನೀರು ಕೋಯಿಲು ಮಾಡುವ ಯೋಜನೆಗೆ ಬಳಸುವುದಾಗಿ ತಿಳಿಸಿದರು. ತಂಡದ ವಿದ್ಯಾರ್ಥಿಗಳಾದ ಚಂದ್ರಕಲಾ,ಲಕ್ಷ್ಮಿ,ರಮ್ಯ,ಕಲ್ಲೇಶ್,ನವೀನ್,ಪ್ರಮೋದ್,ಪ್ರವೀಣ್,ಗೀರೀಶ್,ಗೌತಮ್,ಹೇಮಂತ್ ಅವರುಗಳನ್ನು ವಿದ್ಯಾಕುಂಚನೂರು ಸೇರಿದಂತೆ ಶಾಲಾ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ