ಹುಳಿಯಾರು: ಹೋಬಳಿಯ ಕಾರೆಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಮೂಲಸ್ಥಾನದಲ್ಲಿ ದನಗಳ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಾ.14ರ ಶುಕ್ರವಾರದಂದು ಸಂಭ್ರಮ ಹಾಗೂ ವೈಭವಯುತವಾಗಿ ಭಕ್ತರ ಹರ್ಷೋದ್ಘಾರದೊಂದಿಗೆ ಜರುಗಿತು.
ಕಳೆದ ಮೂರುದಿನಗಳಿಂದ ಜಾತ್ರೆ ಅಂಗವಾಗಿ ಕಂಕಣ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ, ಗಜಾರೋಹಣ, ಗರುಡ ವಾಹನೋತ್ಸವ, ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಭಕ್ತಿಯೊಂದಿಗೆ ವಿಧಿವತ್ತಾಗಿ ನಡೆದಿದ್ದು ಇಂದು ಮುಂಜಾನೆಯಿಂದಲೆ ರಥೋತ್ಸವದ ಪೂಜಾ ಕೈಂಕರ್ಯ ನಡೆದು, ವಿಪ್ರರುಗಳು ಸ್ವಾಮಿಯನ್ನು ಮೂಲ ದೇವಸ್ಥಾನದಿಂದ ಮಂಗಳವಾಧ್ಯ ಹಾಗೂ ಪೂರ್ಣಕುಂಭದೊಂದಿಗೆ ಸಹಸ್ರಾರು ಭಕ್ತರು ಉದ್ಘೋಷದೊಂದಿಗೆ ಕರೆತಂದು ವೈಭವಯುತವಾಗಿ ಅಲಂಕರಿಸಿದ್ದ ರಥದಲ್ಲಿ ಶ್ರೀ ಸ್ವಾಮಿಯವರನ್ನು ಕುಳ್ಳಿರಿಸಿ, ರಥದ ಮುಂದಿನ ಅಂಬನ್ನು ತುಂಡರಿಸುವ ಮೂಲಕ ಭಕ್ತರ ಜೈಕಾರದೊಂದಿಗೆ,ಬೆನಕನಹಳ್ಳಿ ರಂಗನಾಥಸ್ವಾಮಿ,ಹೊಯ್ಸಲಕಟ್ಟೆ ಕರಿಯಮ್ಮ ಯರೆಹಳ್ಳಿ ಕರಿಯಮ್ಮ ಹಾಗೂ ಇತರ ದೇವರುಗಳ ಸಮ್ಮುಖದಲ್ಲಿ ರಥವನ್ನು ಎಳೆಯುವ ಮೂಲಕ ರಥೋತ್ಸವ ನೆರವೇರಿಸಲಾಯಿತು.
ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕಿಕ್ಕಿರಿದು ನೆರೆದಿದ್ದ ಭಕ್ತರು ರಥದ ಮೇಲೆ ಸರ್ವಾಲಂಕೃತಗೊಂಡಿದ್ದ ಸ್ವಾಮಿಯನ್ನು ಕಂಡು ಕೈಮುಗಿದು ತಮ್ಮ ಭಕ್ತಿಯನ್ನು ಸಮರ್ಪಿಸಿದರೆ ಕೆಲವರು ತೇರಿಗೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿಕೊಂಡರು. ರಥೋತ್ಸವದ ನಂತರ ಮಹಿಳೆಯರು ಸ್ವಾಮಿಯವರಿಗೆ ಹಣ್ಣುಕಾಯಿ ಮಾಡಿಸಿಕೊಂಡು ಆಶಿರ್ವಾದ ಪಡೆದುಕೊಂಡರು.
ದಸೂಡಿಯ ದಿ.ಕೊಟ್ಟಿಗೆ ರಂಗೇಗೌಡರ ಸಹೋದರರು ಮತ್ತು ಮಕ್ಕಳಿಂದ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ನಡೆಯಿತು.ಜಿ.ಎಂ.ಸೀನಪ್ಪ ಶಟ್ಟರು ಮತ್ತು ಜಿ.ಎಸ್.ಸತ್ಯನಾರಾಯಣ ಶೆಟ್ಟರು ಇವರುಗಳಿಂದ ಆರ್ಯವೈಶ್ಯ ಮಂಡಳಿ ಹಾಗೂ ದೇವಾಲಯ ಸಮಿತಿಯಿಂದ ಮಹಾಜನತೆಗೆ ಅನ್ನ ದಾಸೋಹ ನಡೆಯಿತು.
ಪ್ರತಿವರ್ಷದ ಪ್ರತೀತಿ ಎಂಬತ್ತೆ ಈ ಬಾರಿಯೂ ಸಹ ದನಗಳ ಜಾತ್ರೆ ಕೂಡಿದ್ದು, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರೈತರು ರಾಸುಗಳನ್ನು ಕೊಳ್ಳಲು,ಮಾರಾಟ ಮಾಡಲು ಆಗಮಿಸಿದ್ದು, ತಮ್ಮ ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾದ ರಾಸುಗಳನ್ನು ಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಸುಮಾರು ಎರಡು ಸಾವಿರಕ್ಕೂ ಅಧಿಕ ರಾಸುಗಳು ಸೇರಿದ್ದು ರಾಸುಗಳ ಬೆಲೆಯಲ್ಲಿ ಹೆಚ್ಚಳವಾಗಿತ್ತು. ರಥೋತ್ಸವದ ನಂತರ ದನಗಳ ಜಾತ್ರೆ ಕಳೆಗಟ್ಟುತ್ತದ್ದೆ ಎಂಬಂತೆ ಸುತ್ತಮುತ್ತಲ ಗ್ರಾಮಗಳ ರೈತರು ಇನ್ನಷ್ಟು ದನಗಳು ಮಾರಾಟ ಮಾಡಲು ಬರುವುದಿದ್ದು ಮಾ.21ರ ಶುಕ್ರವಾರದವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಜಾತ್ರೆ ನಡೆಯಲಿದೆ.
ಹುಳಿಯಾರು ಹೋಬಳಿ ಕಾರೇಹಳ್ಳಿ ಶ್ರೀರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ರೈತರು ತಮ್ಮ ರಾಸುಗಳಿಗೆ ಪರಿಕರಗಳನ್ನು ಕೊಂಡುಕೊಳ್ಳುತ್ತಿರುವುದು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ