ಹುಳಿಯಾರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಅಂಗವಾಗಿ ಇಂದು ಮಂಗಳವಾರ ಸ್ವಾಮಿಗೆ ವಿಶೇಷ ಅಲಂಕಾರ,ಅಭಿಷೇಕ,ಪೂಜೆ ಹಾಗೂ ಹೋಮ ಹವನಾದಿಗಳು ನಡೆಯಿತು.
ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಗಣಪತಿಗೆ ಬಾದಾಮಿ ಹಾಗೂ ಗೋಡುಂಬಿಯಿಂದ ಮಾಡಲಾಗಿದ್ದ ಅಲಂಕಾರ |
ಸಂಕಷ್ಟಹರ ಚತುರ್ಥಿ ಮಂಗಳವಾರದಂದು ಬರುವುದು ವಿಶೇಷವಾಗಿದ್ದು, ಈ ನಿಮಿತ್ತ ವಿಶೇಷ ಹೋಮ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ ರಾಮಚಂದ್ರಭಟ್ಟರ ನೇತೃತ್ವದಲ್ಲಿ ಮಹಾ ಗಣಪತಿ ಪೂಜೆ, ಪುಣ್ಯಾಹ, ಕಳಸಸ್ಥಾಪನೆ, ದೇವನಾಂದಿ, ಪಂಚಾಮೃತಾಭಿಷೇಕ, ನವಗ್ರಹ ಹೋಮ, ಸಂಕಷ್ಟಹರ ಗಣಪತಿ ಹೋಮ ನಡೆದು ಪುರ್ಣಾಹುತಿ ಹಾಗೂ ಮಹಾಮಂಗಳಾರತಿ ಸಮರ್ಪಿಸಿದ ನಂತರ ಅಮೃತಾನ್ನ ಪ್ರಸಾದ ವಿತರಿಸಲಾಯಿತು.
ಸಂಕಷ್ಟಹರ ಚತುರ್ಥಿ ಪ್ರತಿ ತಿಂಗಳು ಚತುರ್ದಶಿಯಂದು ಬರುವುದಿದ್ದು ಮಂಗಳವಾರ ಬರುವುದು ಕೆಲವೊಮ್ಮೆ ಮಾತ್ರ.ಅಂದು ಸಂಕಷ್ಟಹರ ವ್ರತ ಮಾಡಿದರೆ ಕುಟುಂಬದವರಿಗೆ ಆಯುಷ್ಯಾರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಮಹಿಳೆಯರು ಉಪವಾಸವಿದ್ದು ಸಂಕಷ್ಟ ವ್ರತಆಚರಿಸುತ್ತಾರೆ.ಅಂತೆಯೇ ಸಂಜೆ ಗಣಪತಿ ದರ್ಶನಕ್ಕೆ ಭಕ್ತರು ಸಾಗರದಂತೆ ಹರಿದು ಬಂದರು.
ಸಂಕಷ್ಟ ಚತುರ್ಥಿ ಅಂಗವಾಗಿ ಅರ್ಚಕ ರಾಜಣ್ಣ ಹಾಗೂ ಚೇತನ್ ಗಣಪತಿಗೆ ಬಾದಾಮಿ-ಗೋಡುಂಬಿಯ ವಿಶೇಷ ಅಲಂಕಾರ ಮಾಡಿದ್ದರು. ಸಂಜೆ ಗಣೇಶನಿಗೆ ವ್ರತದ ಅಂಗವಾಗಿ ಪೂಜಿಸಲಾಯಿತು.
ದೇವಾಲಯ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್,ಹೂವಿನ ಬಸವರಾಜ್,ವೆಂಕಟರಾಯ,ಕಲಾವಿದ ಗೌಡಿ,ರಾಜೇಂದ್ರ,ಮೆಡಿಕಲ್ ಚನ್ನಬಸವಯ್ಯ,ತಾಪಂ ಸದಸ್ಯ ಏಜೆಂಟ್ ಕುಮಾರ್,ಗುಜರಿ ನಾಗಣ್ಣ,ತಮ್ಮಯ್ಯ ಮೊದಲಾದವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದು, ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದರು.
ಪಟ್ಟಣದ ಕೋಡಿಪಾಳ್ಯದಲ್ಲಿನ ಕಂಕಾಳಿ ದೇವಾಲಯದಲ್ಲಿನ ಬಲಮುರಿ ಗಣಪತಿಗೆ ಕೂಡ ಮಂಗಳವಾರದಂದು ವಿಶೇಷಪೂಜೆ ಹಾಗೂ ಭಜನೆ ನಡೆಯಿತು.ಬಾಲಾಜಿ ಟಾಕೀಸ್ ಹಿಂಭಾಗದಲ್ಲಿನ ಬೆಂಕಿ ಗಣಪತಿ ದೇವಾಲಯದಲ್ಲೂ ಕೂಡ ಹೋಮ ಹಾಗೂ ಅನ್ನಸಂತರ್ಪಣೆ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ