ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ನೇಮಕ ಮಾಡದಿದ್ದಲ್ಲಿ ಜು.೧೫ ಕ್ಕೆ ಧರಣಿ
ಹುಳಿಯಾರು:ಜಿಲ್ಲೆಯ ಗಡಿಭಾಗದಲ್ಲಿರುವ ಹುಳಿಯಾರು ಹೋಬಳಿಗೆ ಸೇರಿರುವ ದಸೂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೩ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿಯಿದೆ .ಅಲ್ಲದೆ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಗೆ ಜರೂರಾಗಿ ಬೇಕಾಗಿರುವ ೧೦೮ ಅಂಬ್ಯೂಲೆನ್ಸ್ ಕೂಡ ಇಲ್ಲವಾಗಿದ್ದು ಸಾಕಷ್ಟು ಸಮಸ್ಯೆ ಎದುರಾಗಿದೆ.ಆರೋಗ್ಯಇಲಾಖೆ ಈ ಕೂಡಲೇ ಇಲ್ಲಿನ ಸಮಸ್ಯೆ ನಿವಾರಿಸದಿದ್ದಲ್ಲಿ ಜುಲೈ.೧೫ ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ದಸೂಡಿ ಮಾಜಿ ಗ್ರಾಪಂ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ದಬ್ಬಗುಂಟೆ ರವಿಕುಮಾರ್ ಎಚ್ಚರಿಸಿದರು.
ಹುಳಿಯಾರು ಹೋಬಳಿಯ ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ದಸೂಡಿ,ದಬ್ಬಗುಂಟೆ ಹಾಗೂ ಗಾಣಧಾಳು ಭಾಗಕ್ಕೆ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿಯಿದೆ.ಪಕ್ಕದ ಗ್ರಾಮದ ಹೊಯ್ಸಳಕಟ್ಟೆಯಲ್ಲಿ ವೈದ್ಯರ ಹುದ್ದೆ ಕೂಡ ಖಾಲಿಯಿದ್ದು ಇದರಿಂದಾಗಿ ಕೆಲವೊಮ್ಮೆ ಜೀವನ್ಮರಣದ ಪ್ರಶ್ನೆ ಎದುರಾಗಿದೆ.ಸರ್ಕಾರ ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ ರಕ್ತದಾನದಿಂದ ಒಬ್ಬರ ಜೀವ ಉಳಿಸಬಹುದಾಗಿದ್ದು ಮತ್ತೊಬ್ಬರಿಗೆ ರಕ್ತ ಕೊಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.ಪ್ರತಿಯೊಬ್ಬರೂ ಸ್ವಇಚ್ಚೆಯಿಂದ ಮೂರು ತಿಂಗಳಿಗೊಮ್ಮೆಯಾದರೂ ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದರು.
ತುಮಕೂರು ಬೆಳ್ಳಿ ರಕ್ತನಿಧಿ ಕೇಂದ್ರದ ಡಾ.ಪ್ರದೀಪ್ ಮಾತನಾಡಿ ಜೀವಉಳಿಸುವ ರಕ್ತದಾನ ಸರ್ವಶ್ರೇಷ್ಟವಾಗಿದ್ದು ಗ್ರಾಮಸ್ಥರು ಇಂದಿನ ಶಿಬಿರದಲ್ಲಿ ಸ್ವಇಚ್ಚೆಯಿಂದ ರಕ್ತದಾನ ಮಾಡಿದ್ದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರಲ್ಲದೆ ರಕ್ತದಾನದ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ದಸೂಡಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಜಯಪ್ರಕಾಶ್,ಆರೋಗ್ಯ ಸಹಾಯಕ ಚಂದ್ರಶೇಖರ್, ದಸೂಡಿ ಗ್ರಾಮಪಂಚಾಯ್ತಿ ಅಧ್ಯಕ್ಷೆ ಶೋಭಾ,ಸದಸ್ಯರುಗಳಾದ ಓಂಕಾರಪ್ಪ,ದಬ್ಬಗುಂಟೆ ಜಯಣ್ಣ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ