ಮುಂದಿನ ಶೈಕ್ಷಣಿಕ ವರ್ಷದಿಂದ ಹುಳಿಯಾರಿನಲ್ಲಿ ನಾರಾಯಣ ಕಾಲೇಜು ಆರಂಭ
--------------------------------
ಹುಳಿಯಾರು:ಪ್ರತಿಭೆ ಯಾರ ಸ್ವತ್ತೂ ಅಲ್ಲ,ಅದನ್ನು ಅನಾವರಣಗೊಳಿಸುವ ಕೆಲಸ ಮಾಡಬೇಕಷ್ಟೇ.ಪ್ರತಿಭೆ ಒಂದೇ ದಿನದಲ್ಲಿ ಹೊರ ಬರಲು ಸಾಧ್ಯವಿಲ್ಲ.ಸತತ ಪರಿಶ್ರಮದಿಂದ ಮಾತ್ರವೇ ಯಶಸ್ಸು ಗಳಿಸಲು ಸಾಧ್ಯ ಎಂದು ಮಾಜಿ ಶಾಸಕರು ಹಾಗೂ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯ ಟ್ರಸ್ಟಿನ ಅಧ್ಯಕ್ಷರೂ ಆದ ಕೆ.ಎಸ್.ಕಿರಣ್ ಕುಮಾರ್ ಹೇಳಿದರು.
ಹುಳಿಯಾರಿನ ಧ್ಯಾನ ನಗರಿಯಲ್ಲಿರುವ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ವಿದ್ಯಾವಾರಧಿ ಇಂಟರ್ ನ್ಯಾಷನಲ್ ಶಾಲೆಯವತಿಯಿಂದ ನಡೆದ ಅನ್ವೇಷಣಾ ಸ್ಪರ್ಧಾ ಪರೀಕ್ಷೆಯ ಬಹುಮಾನ ವಿತರಣೆ,ನಾರಾಯಣ ಶಾಲೆಯ ಬಗ್ಗೆ ಮಾಹಿತಿ ಹಾಗೂ ಪೋಷಕರಿಗೆ ಆಟೋಟ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣ ಪ್ರದೇಶದ ಶೈಕ್ಷಣಿಕ ವಾತಾವರಣವನ್ನು ಗ್ರಾಮೀಣ ಭಾಗದಲ್ಲಿ ಸಹ ಕಲ್ಪಿಸುವ ಉದ್ದೇಶದಿಂದ ಹತ್ತು ವರ್ಷಗಳ ಹಿಂದೆ ಬಸಪ್ಪ ಮರಳಪ್ಪ ಟ್ರಸ್ಟ್ ವತಿಯಿಂದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯನ್ನು ಆರಂಭಿಸಲಾಗಿದ್ದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶಾಲೆಯನ್ನು ಮುಡಿಪಾಗಿಟ್ಟು ಉತ್ತಮ ಶಿಕ್ಷಣ ಕೊಡುತ್ತಾ ಬಂದ ಹಿನ್ನೆಲೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಯಾಗಿದ್ದ ತೀರಾ ಹಳ್ಳಿಯಿಂದ ಬಂದ ತಿಮ್ಮನಹಳ್ಳಿಯ ಯಶಸ್ ಕಳೆದ ಸಾಲಿನಲ್ಲಿ ಹತ್ತನೇ ತರಗತಿಯ ಸಿಬಿಎಸ್ಸಿ ಪರೀಕ್ಷೆಯಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಥಮನಾಗಿದ್ದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಹುಳಿಯಾರು ಭಾಗದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲು ವಿದ್ಯಾವಾರಧಿ ಇಂಟರ್ ನ್ಯಾಷನಲ್ ಶಾಲೆಯು ಭಾರತದ ಪ್ರತಿಷ್ಠಿತ ಸಂಸ್ಥೆಯಾದ ನಾರಾಯಣ ಸಮೂಹ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಬರುವ ಶೈಕ್ಷಣಿಕ ವರ್ಷದಿಂದಲೇ ಪಿಯು ಕಾಲೇಜು ಆರಂಭಿಸಲಾಗುತ್ತಿದೆ.ಹೀಗಾಗಿ ನೀಟ್ ಮತ್ತು ಜೆಇಇ ಯಂಥ ಪರೀಕ್ಷೆ ಎದುರಿಸಲು ನಮ್ಮ ಭಾಗದ ವಿದ್ಯಾರ್ಥಿಗಳಿಗೂ ಸಹ ಅನುಕೂಲವಾಗಲಿದೆ ಎಂದರು.
ಕೆಎ ಕನ್ಸೂಮರ್ ಮತ್ತು ಡಿಜಿಟಲ್ ಬಿಸಿನೆಸ್ ವ್ಯವಸ್ಥಾಪಕರಾದ ಸತೀಶ್ ನಾಯಕ್ ಎಸ್.ಜಿ ಮಾತನಾಡಿ ದೇಶದ ೧೯ ರಾಜ್ಯಗಳಲ್ಲಿ ೬೫೦ ಶಿಕ್ಷಣ ಸಂಸ್ಥೆ ಹೊಂದಿರುವ ನಾರಾಯಣ ಸಮೂಹ ಸಂಸ್ಥೆ ಮುಂದಿನ ಶೈಕ್ಷಣಿಕ ವರ್ಷದಿಂದ ಹುಳಿಯಾರಿನಲ್ಲಿ ಕಾಲೇಜು ಆರಂಭಿಸುತ್ತಿರುವುದು ಸಂತಸದ ವಿಚಾರ.ಬೆಂಗಳೂರಿನಂಥ ಮೆಟ್ರೊಪಾಲಿಟಿನ್ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಯು ಕೆ.ಎಸ್.ಕಿರಣ್ ಕುಮಾರ್ ಅವರ ವಿದ್ಯಾವಾರಿಧಿ ಶಾಲೆಯ ಅಭಿವೃದ್ಧಿಯನ್ನು ಗಮನಿಸಿ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಕಾಲೇಜು ತೆರೆಯುತ್ತಿದ್ದು ಇದು ತುಮಕೂರು ಜಿಲ್ಲೆಯ ಪ್ರಥಮ ಕಾಲೇಜಾಗಲಿದೆ ಎಂದರು.ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ತರಬೇತಿ ಸಹ ನೀಡಲಾಗುವುದು.ಈ ಭಾಗದ ಜನರು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ನಾರಾಯಣ ಸಮೂಹ ಸಂಸ್ಥೆಯ ಮುಖ್ಯಸ್ಥ ಪ್ರತಾಪ್ ಟಿ.ಸಿ. ನಾರಾಯಣ ಕಾಲೇಜು ಬೆಳೆದು ಬಂದ ರೀತಿ,ಇದೀಗ ಸಾಧಿಸಿರುವ ಯಶೋಗಾಥೆಯ ಬಗ್ಗೆ ವಿವರಿಸಿದರು.ಹುಳಿಯಾರಿನಲ್ಲಿ ಆರರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ನೀಟ್ ಐಐಟಿ ತರಬೇತಿಯನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಲಾಗುವುದು ಎಂದರು.
ಅನ್ವೇಷಣ ಪ್ರತಿಭಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹತ್ತು ವಿದ್ಯಾರ್ಥಿಗಳಿಗೆ ಬೈಜೂಸ್ ಟ್ಯಾಬ್ ಉಚಿತವಾಗಿ ವಿತರಿಸಲಾಯಿತು.
ಶರಣ ಸಾಹಿತಿಗಳಾದ ಶ್ಯಾಮಸುಂದರ್ ದಿಬ್ಬದಹಳ್ಳಿ,ಕಾರ್ಯದರ್ಶಿ ಕವಿತಾ ಕಿರಣ್,ವಿದ್ಯಾವಾರಿಧಿ ಶಾಲೆಯ ಪ್ರಾಂಶುಪಾಲ ಕೃಷ್ಣನ್ ಕೌಶಿಕ್, ಈ ಸಂದರ್ಭದಲ್ಲಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ