ಜಲಾವೃತಗೊಳ್ಳುತ್ತಿರುವ ಮನೆಯಿಂದಾಗಿ, ಮನೆ ಕಳೆದುಕೊಂಡು ಮುಂದೇನು ಎಂಬ ಆತಂಕದಲ್ಲಿ ನಿರಾಶ್ರಿತರು..
✍️ವರದಿ :*ನರೇಂದ್ರಬಾಬು ಹುಳಿಯಾರು*
ಹುಳಿಯಾರು:ಹುಳಿಯಾರು ಶಂಕರಾಪುರದ ಕೆರೆ ಅಂಗಳದಲ್ಲಿ ಮನೆ ಕಟ್ಟಿ ಜೀವನ ಸಾಗಿಸುತ್ತಿರುವವರಿಗೆ ಕಳೆದ ಎರಡು ದಶಕಗಳಿಂದಲೂ ಉದ್ಭವವಾಗದ ನೀರಿನ ಸಮಸ್ಯೆ ಇದೀಗ ಉಲ್ಬಣಗೊಂಡಿದ್ದು, ಮಳೆಯಿಂದಾಗಿ ಹುಳಿಯಾರು ಕೆರೆ ತುಂಬಿದಂತೆಲ್ಲ,ಕೆರೆಅಂಗಳದಲ್ಲಿರುವ ಮನೆಗಳೆಲ್ಲ ಜಲಾವೃತಗೊಳ್ಳುತ್ತಿದೆ. ದಿನೇ ದಿನೇ ಜಲಾವೃತಗೊಳ್ಳುತ್ತಿರುವ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗದೆ, ಬೇರೆ ಸ್ಥಳವು ಇಲ್ಲದೆ, ಕೆರೆ ಅಂಗಳದ ನಿವಾಸಿಗಳ ಬದುಕು ಮೂರಾ ಬಟ್ಟೆಯಾಗಿದೆ.
ವಾಸ ಮಾಡಲು ಯೋಗ್ಯವಿಲ್ಲ : ಹುಳಿಯಾರು ಶಂಕರಾಪುರದ ಕೆರೆ ಅಂಗಳದಲ್ಲಿ ಹಲವಾರು ವರ್ಷಗಳಿಂದಲೂ ಸುಮಾರು ನೂರಕ್ಕೂ ಹೆಚ್ಚು ಬಡ ಹಾಗೂ ನಿರ್ಗತಿಕ ಕುಟುಂಬಗಳು ಯಾವುದೇ ಮೂಲಭೂತ ಸೌಕರ್ಯ ಇಲ್ಲದ, ವಾಸ ಮಾಡಲು ಯೋಗ್ಯವಲ್ಲದ ಸ್ಥಳದಲ್ಲಿ,ಹೀನಾಯ ಸ್ಥಿತಿಯಲ್ಲಿ ಗುಡಿಸಲು ಹಾಗೂ ತಗಡಿನ ಶೆಡ್ಡಿನ ಮನೆ ನಿರ್ಮಾಣ ಮಾಡಿಕೊಂಡಿದ್ದು, ಅಲ್ಲಿಯೇ ವಾಸವಾಗಿದ್ದುಕೊಂಡು ಹೇರ್ ಪಿನ್, ಕೂದಲು, ಛತ್ರಿ ರಿಪೇರಿ, ಬೀಗ ರಿಪೇರಿ ಹೀಗೆ ಸಣ್ಣ ಪುಟ್ಟ ವ್ಯಾಪಾರ ಮತ್ತು ಕೂಲಿ ನಾಲಿ ಮಾಡಿಕೊಂಡು, ಅದರಿಂದ ಬರುವ ಪುಡಿಗಾಸಿನಿಂದಲೇ ಕುಟುಂಬ ಪೋಷಿಸುತ್ತಿದ್ದಾರೆ.
ಇಲ್ಲಿರುವ ಯಾರೊಬ್ಬರಿಗೂ ಸ್ವಂತ ಜಮೀನಾಗಲಿ, ಕಾಯಂ ಕೆಲಸವಾಗಲಿ, ವರಮಾನ ಬರುವ ಯಾವುದೇ ಮೂಲವೂ ಇಲ್ಲದೆ ಗುಡಿಸಿಲಿನಲ್ಲಿ ವಾಸ ಮಾಡಿಕೊಂಡೆ ಹಾಗೂ ಹೀಗೂ ಜೀವನ ದೂಕುತ್ತಿದ್ದಾರೆ.ಶಂಕರಾಪುರ ನಿವಾಸಿಗಳೆಂದು ಪರಿಗಣಿಸಿರುವ ಇವರನ್ನು ಇಲ್ಲಿನ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆಯೇ ಹೊರತು ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಇವರ ಸಮಸ್ಯೆ ಮನಗೊಂಡಿದ್ದರು ಸಹ ಬೇರಡೆ ನಿವೇಶನ ನೀಡುವ ಕೆಲಸವಾಗಲಿ ಅಥವಾ ಯಾವುದೇ ಪರ್ಯಾಯ ವ್ಯವಸ್ಥೆಯನ್ನಾಗಲಿ ಕಲ್ಪಿಸಲಾಗಿಲ್ಲ.ಕೆರೆಗೆ ನೀರು ಬರಲು ಅಸಾಧ್ಯ: ಹುಳಿಯಾರು ಕೆರೆ ಯಾವತ್ತೂ ನೀರೇ ಕಾಣದೆ ಬರಡು ಭೂಮಿಯಾಗಿ ಬಳ್ಳಾರಿ ಜಾಲಿಗೆ ಆಶ್ರಯವಾಗಿತ್ತು. ಇಲ್ಲಿನ ಮಣ್ಣು ಇಟ್ಟಿಗೆ ಫ್ಯಾಕ್ಟರಿಗೆ ಅನುಕೂಲವಾಗಿದ್ದರಿಂದ ಸುತ್ತಮುತ್ತ ಹಲವಾರು ಇಟ್ಟಿಗೆ ಫ್ಯಾಕ್ಟರಿಗಳು ತಲೆ ಎತ್ತಲು ಕಾರಣವಾಗಿತ್ತು. ಹುಳಿಯರು ಕೆರೆಗೆ ನೀರು ಬರಲು ಅಸಾಧ್ಯ ಎನ್ನುವ ವಾತಾವರಣದಲ್ಲಿ ಮಾಜಿ ಹಾಲಿ ಜನಪ್ರತಿನಿಧಿಗಳ ನೀರು ಹರಿಸಲೇಬೇಕೆನ್ನುವ ಸಂಕಲ್ಪದಿಂದಾಗಿ ಹೇಮಾವತಿ ನೀರು ಹುಳಿಯಾರಿಗೆ ಕೆರೆಗೆ ಹರಿಯಲು ಕಾರಣವಾಯಿತು. ಕಳೆದ ವರ್ಷ ಹಾಗೂ ಹೀಗೂ ಹೇಮಾವತಿ ನೀರು ಹರಿಸಿದ ಪ್ರಯುಕ್ತ ಹುಳಿಯಾರು ಕೆರೆ ನೀರು ಕಂಡಂತಾಗಿತ್ತು. ಇದಕ್ಕೆ ಪೂರಕವಾಗಿ ಕಳದೊಂದು ತಿಂಗಳಿನಿಂದಲೂ ಹುಳಿಯಾರು ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ಕಳೆದ ಎರಡು ದಶಕಗಳಿಂದಲೂ ಬರಡಾಗಿದ್ದ ಹುಳಿಯಾರು ಕೆರೆಗೆ ನೀರು ಬರಲು ಕಾರಣವಾಯಿತು.ಹೀಗೇ ನೀರೆ ಕಾಣದಿದ್ದ ಕೆರೆಯ ಅಂಗಳದಲ್ಲಿ ಬಡಬಗ್ಗರು-ನಿರಾಶ್ರಿತರು ಜೋಪಡಿ ಹಾಕಿಕೊಳ್ಳುವ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳಲು ಮುಂದಾಗಿ ದಶಕಗಳೇ ಕಳೆದಿದ್ದು, ಇದೀಗ ನೀರಿನ ಸಮಸ್ಯೆಯಿಂದಾಗಿ ಕಂಗಾಲಾಗಿ ನಿರಾಶ್ರಿತರಾಗಿದ್ದಾರೆ.
ಮನೆಗಳು ಒಂದೊಂದಾಗಿ ಜಲಾವೃತ :ದಿನೇ ದಿನೇ ನೀರಿನ ಮಟ್ಟ ಏರಿಕೆಯಾಗಿ, ಮನೆಗಳು ಒಂದೊಂದಾಗಿ ಜಲಾವೃತಗೊಳ್ಳುತ್ತಿದೆ. ಮಣ್ಣಿನ ಗೋಡೆಗಳು ಕುಸಿಯುತ್ತಿವೆ. ಮನೆಯಿದ್ದೂ ನಿರಾಶ್ರಿತರಾದ ಇವರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸರ್ಕಾರ ಮೀನಾ ಮೇಷ ಏಣಿಸಿದ್ದರಿಂದ ಬದುಕು ನರಕ ಸದೃಶ್ಯವಾಗಿದೆ.ಇದೀಗ ಪರ್ಯಾಯ ವ್ಯವಸ್ಥೆಗೆ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಮುಂದಾಗಿದ್ದರೂ ಸಹ,ಧಿಡೀರ್ ವಸತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ದಾರಿ ಕಾಣದ ನಿರಾಶ್ರಿತರು ಹೋರಾಟದ ಹಾದಿ ಹಿಡಿದಿದ್ದಾರೆ.
ಕಳೆದ 18 ದಿನಗಳಿಂದಲೂ ನಾಡಕಚೇರಿ ಮುಂದೆ ಧರಣಿ ಕೂತಿದ್ದಾರೆ. ಅಧಿಕಾರಿಗಳು ಇವರಿಗೆ ವಸತಿ ಸೌಕರ್ಯ ಕಲ್ಪಿಸಲು ಶ್ರಮಿಸುತ್ತಿದ್ದರು ಸಹ ಎಲ್ಲರಿಗೂ ಪುನರ್ ವಸತಿ ಕಲ್ಪಿಸುವುದು ಅಸಾಧ್ಯವಾಗಿದೆ. ಈಗಷ್ಟೇ ನಿದ್ದೆಯಿಂದ ಎಚ್ಚೆತ್ತಿರುವ ಪಟ್ಟಣ ಪಂಚಾಯಿತಿ ಇಲ್ಲಿನ ವಸತಿರಹಿತರ ಸಮೀಕ್ಷೆ ನಡೆಸಿ ಪಟ್ಟಿ ತಯಾರು ಮಾಡಿದೆ. ಹುಳಿಯಾರು ಸಮೀಪದ ಗೌಡಗೆರೆ ಸರ್ವೇ ನಂಬರ್ ನಲ್ಲಿ ನಿವೇಶನ ಗುರುತಿಸಿ ಅಲ್ಲಿ ವಸತಿ ಸೌಕರ್ಯ ಕಲ್ಪಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ.ಆದರೆ ಮೊದಲ ಹಂತದಲ್ಲಿ ಸದ್ಯಕ್ಕೆ 34 ಜನ ಅಲೆಮಾರಿಗಳಿಗೆ ಮಾತ್ರ ನಿವೇಶನ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿರುವುದರಿಂದ ಉಳಿದ ನೂರಕ್ಕೂ ಹೆಚ್ಚು ಜನರಿಗೆ ಮುಂದೇನು ಎಂಬ ಆತಂಕ ಕಾಡುತ್ತಿದೆ. ಸರ್ಕಾರ ಕೆಲವರಿಗೆ ಮಾತ್ರ ಸೂರು ಕಲ್ಪಿಸುತ್ತಿದ್ದು ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ನಮ್ಮೆಲ್ಲರಿಗೂ ಸೂರಿನ ವ್ಯವಸ್ಥೆ ಮಾಡಲಿ.ಬರೀ ಕಾನೂನು ರೀತ್ಯ ಮಾತನಾಡುವ ಬದಲು ಮಾನವೀಯತೆ ದೃಷ್ಟಿಯಿಂದ ನೋಡಿ, ನಮ್ಮ ಸಂಕಷ್ಟದ ಸಮಯದಲ್ಲಿ ಒತ್ತಾಸೆಯಾಗಿ ನಿಲ್ಲಲಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ
--------------------------
ಕೆರೆ ತುಂಬುತ್ತಿರುವ ಕಾರಣದಿಂದ ಶಂಕರಪುರದ ಕೆರೆ ಅಂಗಳದಲ್ಲಿನ ನಿರಾಶ್ರಿತರಿಗೆ ಸಮಸ್ಯೆಯಾಗಿದೆ. ವಿಸ್ತಾರವಾಗಿದ್ದ ಕೆರೆಯನ್ನು ಬಸ್ ನಿಲ್ದಾಣ-ಟ್ಯಾಕ್ಸಿ ಸ್ಟಾಂಡ್ ಬಳಿ ಹತ್ತಾರು ಅಡಿ ಎತ್ತರಕ್ಕೆ ಲೋಡುಗಟ್ಟಲೆ ಮಣ್ಣು ತುಂಬಿದ್ದರಿಂದ, ಹಿನ್ನಿರು ಹೆಚ್ಚಾಗಿ ಶಂಕರಪುರದ ರಸ್ತೆಯ ಮೇಲೆಲ್ಲ ನಿಲ್ಲಲ್ಲು ಕಾರಣವಾಗಿ ಸಮಸ್ಯೆಯಾಗಿದೆ.: ಏಜೆಂಟ್ ಕುಮಾರ್ ,ಮಾಜಿ ತಾಲೂಕು ಪಂಚಾಯತಿ ಸದಸ್ಯ
-------------------------
ಕೆರೆ ಅಂಗಳದಲ್ಲಿನ ವಸತಿರಹಿತರಿಗೆ ಸ್ಪಂದಿಸಬೇಕಾಗಿರುವುದು ಸರಕಾರದ ಆದ್ಯ ಕರ್ತವ್ಯ. ಅಧಿಕಾರಿಗಳಿಗೆ ಕಳೆದೆರಡು ವರ್ಷಗಳಿಂದಲೂ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡುತ್ತಿದ್ದರು ಸಹ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಮಸ್ಯೆ ಉಲ್ಬಣಗೊಂಡಿದೆ. ಜಲಾವೃತಗೊಳ್ಳುತ್ತಿರುವ ಮನೆಯವರು, ಅನಿವಾರ್ಯವಾಗಿ ಸ್ಥಳಾಂತರವಾಗುವಂತಾಗಿದೆ.ನಮ್ಮಗಳ ಸ್ಥಿತಿಯನ್ನು ಸರಕಾರ ಕೂಡಲೇ ಗಮನಹರಿಸಿ ಬಗೆಹರಿಸಬೇಕು: ಜಯಲಕ್ಷ್ಮಮ್ಮ, ಅಧ್ಯಕ್ಷರು-ಸೃಜನ ಮಹಿಳಾ ವೇದಿಕೆv
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ