ಬೋರನಕಣಿವೆ ಸಾಯಿಧಾಮದಲ್ಲಿ ನರ್ಮದೋದ್ಭವ ಕಣಿವೆ ಶಂಕರನ ಪ್ರಾಣ ಪ್ರತಿಷ್ಠಾಪನೆ: ಹ್ಯಾಟ್ರಿಕ್ ಹಿರೋ ಶಿವಣ್ಣ ದಂಪತಿ ಭಾಗಿ
ಹುಳಿಯಾರು: ಹೋಬಳಿಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಬೋರನಕಣಿವೆಯ ಸಾಯಿಧಾಮದಲ್ಲಿ ಇಂದು ಭಕ್ತಿ ಸಂಭ್ರಮ ಮನೆಮಾಡಿತ್ತು. "ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೇಷನ್ ಹಾಗೂ ಸೇವಾ ಚೇತನ" ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನರ್ಮದೋದ್ಭವ ಕಣಿವೆ ಶಂಕರನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವು ಅತ್ಯಂತ ವೈಭವದಿಂದ ನೆರವೇರಿತು.
ಶಿವಣ್ಣ ದಂಪತಿಗಳ ಆಗಮನ:ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಧ್ರುವತಾರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ಅತಿಥಿಗಳನ್ನು ಟ್ರಸ್ಟಿನ ಕಾರ್ಯದರ್ಶಿ ವಿಟ್ಟಲ್ ಹಾಗೂ ಅವರ ಕುಟುಂಬದವರು ಗೌರವಪೂರ್ವಕವಾಗಿ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಶಿವರಾಜ್ ಕುಮಾರ್ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಸಾಯಿಬಾಬಾ ದರ್ಶನ :ಸಾಯಿ ಮಂದಿರಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ಅವರು ಸಾಯಿಬಾಬಾರ ದರ್ಶನ ಪಡೆದರು. ಬಾಬಾ ಅವರ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ, ಸಾಂಪ್ರದಾಯಿಕವಾಗಿ ಚಾದರವನ್ನು ಬದಲಿಸುವ ಮೂಲಕ ಭಕ್ತಿಪೂರ್ವಕ ನಮನ ಸಲ್ಲಿಸಿದರು.ತಮ್ಮ ನೆಚ್ಚಿನ ನಟ ಶಿವಣ್ಣ ಬೋರನಕಣಿವೆಗೆ ಆಗಮಿಸಿರುವ ವಿಷಯ ತಿಳಿದಿದ್ದ ಸುತ್ತಮುತ್ತಲ ಗ್ರಾಮಗಳ ನೂರಾರು ಅಭಿಮಾನಿಗಳು ಸಾಯಿಧಾಮಕ್ಕೆ ಆಗಮಿಸಿ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿ ಕೊಂಡರು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಪದಾಧಿಕಾರಿಗಳು, ಸ್ಥಳೀಯ ಗಣ್ಯರು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡು ಕಣಿವೆ ಶಂಕರನ ಕೃಪೆಗೆ ಪಾತ್ರರಾದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ