ಮೊದಲು ಪೊಲೀಸರೊಂದಿಗೆ ಕಿರಿಕ್, ಆಮೇಲೆ ಸಾರ್ವಜನಿಕರಿಗೆ ಅವೇರ್ನೆಸ್: ಸವಾರನ ವಿಡಿಯೋ ವೈರಲ್!
ಹುಳಿಯಾರು : ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಸವಾರನೊಬ್ಬನನ್ನು ಪೊಲೀಸರು ತಡೆದು ದಂಡ ಹಾಕಿದಾಗ, ಮೊದಲಿಗೆ ಪೊಲೀಸರ ವಿರುದ್ಧವೇ ಆಕ್ರೋಶ ಹೊರಹಾಕಿ, ತದನಂತರ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಘಟನೆಯ ಹಿನ್ನೆಲೆ: ಜಿಲ್ಲೆಯ ತಿಪಟೂರು ಉಪವಿಭಾಗದ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈಮರ ಗೇಟ್ ಬಳಿ ದ್ವಿಚಕ್ರ ವಾಹನ ಸವಾರನೊಬ್ಬ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದಾಗ ಕರ್ತವ್ಯದಲ್ಲಿದ್ದ ಪೊಲೀಸರು ಆತನನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಸಿಟ್ಟಾದ ಸವಾರ, "ಇಲ್ಲಿ ಏಕಾಗಿ ವಾಹನ ತಡೆಯುತ್ತಿದ್ದೀರಿ? ಕ್ರೈಂ ಡಿಪಾರ್ಟ್‌ಮೆಂಟ್‌ನವರು ಹೆಲ್ಮೆಟ್ ಹಿಡಿಯಬಹುದೇ? ಇಲ್ಲಿ ಗಾಡಿ ಹಿಡಿಯಲು ಅವಕಾಶವಿದೆಯೇ?" ಎಂದು ಪೊಲೀಸರ ಜೊತೆ ತೀವ್ರ ವಾಗ್ವಾದಕ್ಕಿಳಿದಿದ್ದಾನೆ. ಅಲ್ಲದೆ, ಪೊಲೀಸರು ಟೀ ಶರ್ಟ್ ಧರಿಸಿದ್ದಾರೆ ಎಂದು ಆರೋಪಿಸಿ, ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಬದಲಾದ ಸವಾರ: ಸವಾರ ವಾಗ್ವಾದ ನಡೆಸಿದರೂ ತಾಳ್ಮೆ ಕಳೆದುಕೊಳ್ಳದ ಪೊಲೀಸರು, ಆತನಿಗೆ ₹500 ದಂಡ ವಿಧಿಸಿದ್ದಲ್ಲದೆ, ಸಂಚಾರಿ ನಿಯಮಗಳ ಮಹತ್ವ ಹಾಗೂ ಕಾನೂನಿನ ಅರಿವು ಮೂಡಿಸಿದ್ದಾರೆ. ಪೊಲೀಸರ ಜವಾಬ್ದಾರಿಯುತ ಮಾತಿಗೆ ಮನಪರಿವರ್ತನೆಗೊಂಡ ಸವಾರ, ನಂತರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಬಳಿಕ ಸವಾರ ಸಾರ್ವಜನಿಕರಲ್ಲಿ ಮನವಿ ಮಾಡುತ್ತಾ: ಕೈಮರ ಗೇಟ್ ಬಳಿ ಹೆಲ್ಮೆಟ್ ಧರಿಸದಿದ್ದಕ್ಕೆ ಪೊಲೀಸರು ನನಗೆ ದಂಡ ಹಾಕಿದ್ದರು. ಈ ವೇಳೆ ಸಂಚಾರಿ ನಿಯಮಗಳ ಬಗ್ಗೆ ತಪ್ಪು ತಿಳುವಳಿಕೆಯಿಂದ ನಾನು ಪೊಲೀಸರನ್ನು ಪ್ರಶ್ನಿಸಿ ವಿಡಿಯೋ ಮಾಡಿದ್ದೆ. ಆದರೆ ಪೊಲೀಸರು ನನಗೆ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರೇ, ದಯವಿಟ್ಟು ಎಲ್ಲರೂ ಹೆಲ್ಮೆಟ್ ಧರಿಸಿ, ಅಗತ್ಯ ದಾಖಲೆಗಳನ್ನು ಜೊತೆಯಲ್ಲಿಟ್ಟುಕೊಳ್ಳಿ. ಅದರಲ್ಲೂ ಮುಖ್ಯವಾಗಿ 18 ವರ್ಷದೊಳಗಿನ ಮಕ್ಕಳಿಗೆ ಗಾಡಿ ನೀಡಬೇಡಿ. ಮಕ್ಕಳಿಗೆ ಗಾಡಿ ಕೊಟ್ಟರೆ ₹25,000 ದಂಡ ಮತ್ತು ವಾಹನ ಮಾಲೀಕರಿಗೆ 2 ವರ್ಷ ಜೈಲು ಶಿಕ್ಷೆಯಾಗಲಿದೆ. ದಯವಿಟ್ಟು ನಿಯಮ ಪಾಲಿಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾನೆ.
ಮೊದಲಿಗೆ ಕಾನೂನು ಉಲ್ಲಂಘಿಸಿ ಪೊಲೀಸರ ಮೇಲೆಯೇ ರೇಗಾಡಿ, ನಂತರ ತಪ್ಪು ತಿದ್ದಿಕೊಂಡು ಜಾಗೃತಿ ಮೂಡಿಸಿರುವ ಸವಾರನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು, ಪೊಲೀಸರ ತಾಳ್ಮೆಯ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ