ಹುಳಿಯಾರು ಸಮೀಪದ ಬರಗೂರಿನಲ್ಲಿ ನಡೆದ ರೈತರ ಸಮಾವೇಶದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
|
ಮುಂಬರುವ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಈ ಬಾರಿ ರೈತ ಸಂಘ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸಲಿದ್ದು ಮತದಾರರು ರೈತಸಂಘದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಅಧಿಕಾರದ ಗದ್ದುಗೆ ಏರಿಸಿದರೆ ರಾಜ್ಯದ ಎಲ್ಲಾ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಭರವಸೆ ನೀಡಿದರು.
ಹುಳಿಯಾರು ಸಮೀಪದ ಬರಗೂರಿನಲ್ಲಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ರೈತರ 25 ಸಾವಿರ ರೂ. ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿರುವುದು ಇನ್ನೂ ಘೋಷಣೆಯಾಗಿಯೇ ಉಳಿದಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಈ ಘೋಷಣೆ ಕಾರ್ಯರೂಪಕ್ಕೆ ಬರಬೇಕೆಂದರೆ ರಾಜ್ಯದ ಬಜೆಟ್ ಮಂಡನೆ ಯಾಗಬೇಕು. ಅಷ್ಟರಲ್ಲಿ ಜಗದೀಶ್ ಶೆಟ್ಟರ್ ಸರ್ಕಾರ ಪತನವಾದರೆ ಸಾಲ ಮನ್ನವಾಗುವುದು ಅನುಮಾನದ ಮಾತು ಎಂದರು. ಚುನಾವಣೆಯಲ್ಲಿ ರೈತ ಸಂಘ ಅಧಿಕಾರಕ್ಕೆ ಬಂದರೆ ಮೊಟ್ಟ ಮೊದಲನೆಯದಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ನೀರಾವರಿ ಯೋಜನೆ ಜಾರಿಗೆ ತರುವ ಉದ್ದೇಶಗಳನ್ನು ಹೊಂದಿದ್ದು ಅವುಗಳನ್ನು ಜಾರಿಗೊಳಿಸಿಸುವುದಾಗಿ ಘೋಷಿಸಿದರು.
2012ನೇ ವರ್ಷ ಅತ್ಯಾಚಾರಿಗಳ ಹಾಗೂ ಭ್ರಷ್ಟಚಾರಿಗಳ ವರ್ಷವೆಂದರೆ ತಪ್ಪಾಗಲಾರದು. ಕಾರಣ ದೇಶದ ಸಮಾಜವೆಂಬ ದೇಹಕ್ಕೆ ಹೊಕ್ಕ ಈ ಎರಡು ಮಹಾ ಮಾರಿ ರೋಗವನ್ನು ಕಿತ್ತೊಗೆಯಲು ಕಾನೂನು ಎಂಬ ಔಷಧಿಯನ್ನು ಮಾರ್ಪಾಡು ಮಾಡಬೇಕಿದೆ ಎಂದರು.
ಕೈಗಾರಿಕಾ ಉತ್ಪನ್ನಗಳಿಗೆ ಮಾರಾಟಗಾರ ಬೆಲೆ ನಿಗಧಿ ಮಾಡುತ್ತಾನೆ, ಕೃಷಿ ಉತ್ಪನ್ನಗಳಿಗೆ ಗ್ರಾಹಕ ಬೆಲೆ ಕಟ್ಟುತ್ತಾನೆ. ಈ ಧ್ವಂದ ನೀತಿಯಿಂದ ರೈತರಿಗೆ ವೈಜ್ಞಾನಿಕ ಬೆಲೆ ಸಿಗದೆ ರೈತನ ಬದುಕು ದುಸ್ತರವಾಗಿದ್ದು, ರೈತ ಭೂಮಿ ಉಳಿಮೆ ಮಾಡುವುದರಿಂದ ಹಿಡಿದು ಬೀಜ, ಗೊಬ್ಬರ, ಕೂಯ್ಲು, ಕೂಲಿ ಎಲ್ಲಾ ಲೆಕ್ಕಾ ಹಾಕಿದರೆ ರೈತನಿಗೆ ಹಾಕಿದ ಬಂಡವಾಳವೇ ಸಿಗುತ್ತಿಲ್ಲ. ದೇಶದ ಜನರನ್ನು ಸಾಕಲು ರೈತ ಶ್ರಮವಹಿಸಿ ದುಡಿಯುತ್ತಿದ್ದಾನೆ.ಇದರಿಂದಾಗಿ ಎಂದಿಗೂ ರೈತ ಸಾಲಗಾರನಲ್ಲ ಬದಲಿಗೆ ಸರ್ಕಾರದ ಮೇಲೆ ರೈತನ ಹಣ ಇದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಈಚಗಟ್ಟೆ ಸಿದ್ಧವೀರಪ್ಪ ಅವರು ತಿಳಿಸಿದರು.
ರಾಜ್ಯ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರಣ್ಣ,ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್.ದೇವರಾಜು, ತಾಲೂಕು ಅಧ್ಯಕ್ಷ ಕೆ.ಪಿ.ಮಲ್ಲೇಶ್, ತಿಪಟೂರು ಅಧ್ಯಕ್ಷ ಯೋಗೀಶ್ ಸ್ವಾಮಿ, ನಂಜುಂಡಪ್ಪ, ವಿರೂಪಾಕ್ಷಪ್ಪ, ಮಲ್ಲಿಕಾರ್ಜುನಯ್ಯ, ತಿಮ್ಮನಹಳ್ಳಿ ಲೋಕೇಶ್ ಸೇರಿದಂತೆ ಗ್ರಾಮದ ಸುತ್ತಲಿನ ರೈತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ