ಬೀದಿಬದಿಯ ವ್ಯಾಪಾರಿಗಳು ಎಂಬ ಗುರುತಿನ ಚೀಟಿಯನ್ನು ಪಡೆಯಲು ಸಲಹೆ
ಹುಳಿಯಾರು:ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ಸಹಾಯ ಒದಗಿಸಲು ಪ್ರಧಾನಮಂತ್ರಿ ಬೀದಿ ಬದಿ ಆತ್ಮನಿರ್ಭರ್ ಯೋಜನೆಯನ್ನು ಜಾರಿಗೆ ತಂದಿದ್ದು ಅರ್ಹ ಫಲಾನುಭವಿಗಳು ಇದರ ಉಪಯೋಗ ಪಡೆಯುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ ಅಭಿಯಾನ ವ್ಯವಸ್ಥಾಪಕರಾದ ದೊಡ್ಡವಲಪ್ಪ ತಿಳಿಸಿದರು.
ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿಯ ಯೋಜನೆಯ ಬಗ್ಗೆ ಹುಳಿಯಾರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಲ್.ವಿ.ಮಂಜುನಾಥ್ ಅವರೊಂದಿಗೆ ಪಟ್ಟಣದ ಬೀದಿ ಬದಿ ವ್ಯಾಪಾರ ಮಾಡುವ ಸ್ಥಳಗಳಿಗೆ ಖುದ್ದಾಗಿ ತೆರಳಿ ಮಾಹಿತಿ ನೀಡಿದರು.ಹೂ, ಹಣ್ಣು, ಎಳನೀರು, ಮೀನು, ಗೃಹೋಪಯೋಗಿ ವಸ್ತುಗಳು, ತರಕಾರಿ ಮುಂತಾದವುಗಳನ್ನು ತಲೆಹೊರೆ, ತಳ್ಳುಗಾಡಿ, ಸೈಕಲ್, ಮೋಟಾರ್ ಸೈಕಲ್ ಮೂಲಕ ಮನೆಮನೆಗೆ ತೆರಳಿ ಅಥವಾ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಿರುವವರನ್ನು ಭೇಟಿಯಾಗಿ ಸಾಲ ಸೌಲಭ್ಯದ ಬಗ್ಗೆ ಅರಿವು ಮೂಡಿಸಿದರು.
ಈ ಯೋಜನೆಡಿ ಪ್ರತೀ ಅರ್ಹ ಫಲಾನುಭವಿಗಳಿಗೆ ರೂ.10,000 ಬ್ಯಾಂಕ್ ಸಾಲವನ್ನು ನೀಡಲಾಗುತ್ತಿದ್ದು ಇದರ ಮರುಪಾವತಿಯನ್ನು 12 ಮಾಸಿಕ ಕಂತುಗಳಲ್ಲಿ ಪಾವತಿ ಮಾಡಬಹುದಾಗಿದೆ ಎಂದರು.
ಬೀದಿಬದಿಯ ವ್ಯಾಪಾರಿಗಳಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದ್ದು ಈ ಯೋಜನೆಯ ಅನುಕೂಲ ಹೊಂದಬೇಕಾದರೆ ಮೊದಲು ಬೀದಿಬದಿಯ ವ್ಯಾಪಾರಿಗಳು ಎಂಬ ಗುರುತಿನ ಚೀಟಿಯನ್ನು ಪಡೆದಿರಬೇಕು.ಇದಕ್ಕಾಗಿ ತಾವು ವ್ಯಾಪಾರ ಮಾಡುತ್ತಿರುವ ಸ್ಥಳದ ಪೋಟೋ,ಆಧಾರ್ ಕಾರ್ಡ,ಪಡಿತರ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಮತ್ತಿತರ ಅಗತ್ಯ ದಾಖಲೆಗಳನ್ನು ಭರ್ತಿಮಾಡಿದ ಅರ್ಜಿಯೊಂದಿಗೆ ಸ್ಥಳಿಯ ಪಟ್ಟಣ ಪಂಚಾಯ್ತಿಗೆ ನೀಡುವಂತೆ ತಿಳಿಸಿದರು.
ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ಅದಿನಿಯಮ 2014 ರ ಅನ್ವಯ ಬೀದಿಬದಿ ವ್ಯಾಪಾರಿಗಳನ್ನು ಸರ್ವೇ ಕಾರ್ಯದ ಮೂಲಕ ಗುರುತಿಸಿ ವ್ಯಾಪಾರ ಪ್ರಮಾಣಪತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಗಿದೆ ಎಂದ ಅವರು ಸದ್ಯ ಜನಸಂಖ್ಯೆಯ ಆಧಾರದ ಮೇಲೆ ಹುಳಿಯಾರು ಪಟ್ಟಣ ಪಂಚಾಯಿತಿಗೆ ಒಟ್ಟು 154 ಬೀದಿಬದಿ ವ್ಯಾಪಾರಿಗಳ ಕಾರ್ಡ್ ಗುರಿ ನಿಗದಿಪಡಿಸಲಾಗಿದ್ದು ಪ್ರಸ್ತುತ 50 ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದು 27 ಬೀದಿ ವ್ಯಾಪಾರಿಗಳಿಗೆ ಸಾಲ ಮಂಜೂರಾತಿ ಆಗಿದೆ ಎಂದು ಮಾಹಿತಿ ನೀಡಿದರು.
ಸ್ಥಳಿಯ ಪಟ್ಟಣ ಪಂಚಾಯ್ತಿಯು ಅರ್ಹ ಫಲಾನುಭವಿಗಳಿಂದ ಅರ್ಜಿ ಪಡೆದು ಅವರುಗಳನ್ನು ಫಲಾನುಭವಿಗಳನ್ನಾಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ