ವರದಿ:ನರೇಂದ್ರಬಾಬು ಹುಳಿಯಾರು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದ ಎಸ್.ಎನ್.ಲೋಕೇಶ್ ನಾಯ್ಕ ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ಯುವ ರೈತ ಕೃಷಿ ಪ್ರಶಸ್ತಿಗೆ ಭಾಜನರಾಗಿದ್ದು ಇಂದು ಬುಧವಾರ ಜಿಕೆವಿಕೆಯಲ್ಲಿ ಆವರಣದಲ್ಲಿ ನಡೆದ 2020ರ ಕೃಷಿಮೇಳದಲ್ಲಿ ನಡೆದ ಸಮಾರಂಭದಲ್ಲಿ ಅತ್ಯುತ್ತಮ ಯುವ ರೈತ ಪ್ರಶಸ್ತಿ ಸ್ವೀಕರಿಸಿದರು.
ಸಾಸಲು ಗ್ರಾಮದ ಲೋಕೇಶ್ ನಾಯ್ಕ ಡಿಎಡ್ ವರೆಗೆ ವಿದ್ಯಾಭ್ಯಾಸ ಮಾಡಿದ್ದು ಇವರು ತಮ್ಮ 4 ಎಕರೆ ಜಮೀನಿನಲ್ಲಿ ಕೃಷಿ ಬೆಳೆಗಳಾದ ರಾಗಿ,ಹಾರಕ ಮತ್ತು ತೊಗರಿ ಬೆಳೆಗಳನ್ನು ಹಾಗೂ ತೋಟಗಾರಿಕೆ ಬೆಳೆಗಳಾದ ಅಡಿಕೆ,ಬಾಳೆ,ತೆಂಗು,ಚಕೋತ,ಮಾವು,ಹಲಸು,ನಿಂಬೆ,ನೇರಳೆ,ವೆಲ್ವೆಟ್ ಬೀನ್ಸ್ ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ.
ಕೃಷಿಗೆ ಪೂರಕವಾಗಿ ನಾಟಿ ಹಸು ಮತ್ತು ಹೆಚ್.ಎಫ್ ಹಸುಗಳನ್ನು ಸಾಕಾಣೆ ಮಾಡುತ್ತಿದ್ದು ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ.ಮೇವಿಗಾಗಿ ಜೋಳ,ಅಲಸಂದೆ,ನೇಪಿಯರ್ ಬೆಳೆಗಳನ್ನು ಬೆಳೆದಿದ್ದಾರೆ.
ಜೊತೆಗೆ ಅರಣ್ಯ ಕೃಷಿ ಕೈಗೊಂಡಿರುವ ಇವರು ತೇಗ,ಹೆಬ್ಬೇವನ್ನು ತಮ್ಮ ಜಮೀನಿನ ಸುತ್ತ ಬದುಗಳ ಮೇಲೆ ಬೆಳೆದಿದ್ದಾರೆ.ಕೃಷಿ ಜತೆಗೆ ಉಪಕಸುಬಾಗಿ ಜೇನುಸಾಕಣೆಯನ್ನು ಸಹ ಕೈಗೊಂಡಿದ್ದು ಮಣ್ಣಿನ ಸಂರಕ್ಷಣೆಗೆ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮತ್ತು ಜಮೀನಿನ ಸುತ್ತಲೂ ಬದುಗಳ ನಿರ್ಮಾಣ ವಿಧಾನಗಳನ್ನು ಅನುಸರಿಸಿದ್ದಾರೆ.
ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ನೀರನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.
ಹೆಚ್ಚಿನ ಓದು ಓದುಕೊಂಡಿದ್ದರು ಸಹ ಕೃಷಿಗೆ ಮರಳಿ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಂಡು ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ.ಕೃಷಿಯಲ್ಲಿ ಇವರ ಸಾಧನೆಯನ್ನು ಗುರುತಿಸಿ ಇಂದು ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಗ್ರಾಮದ ಪದವೀಧರ ಯುವಕ ಇರುವ ನಾಲ್ಕು ಎಕರೆ ಜಮೀನಿನಲ್ಲಿ ಕೃಷಿಗೆ ಕೈ ಹಾಕಿ ಅನೇಕ ಪ್ರಯೋಗಗಳ ಮೂಲಕ ಲಾಭದಾಯಕ ಕೃಷಿ ಮಾಡಿ ಯಶಸ್ಸು ಪಡೆದಿರುವ ಯುವ ರೈತ ಲೋಕೇಶ್ ನಾಯ್ಕ ಗ್ರಾಮದ ಎಲ್ಲಾ ರೈತರಿಗೂ ಮಾದರಿಯಾಗಿದ್ದಾರೆ.ಈತನ ಮೊಬೈಲ್ ಸಂಖ್ಯೆ 9164514911
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ