ವರದಿ:ಡಿ.ಆರ್.ನರೇಂದ್ರಬಾಬು
ದಶಕಗಳಿಂದಲೂ ಮಳೆಯಿಲ್ಲದೆ ಬರಪೀಡಿತ ಪ್ರದೇಶವಾಗಿರುವ ಹುಳಿಯಾರಿನಲ್ಲಿ ನೀರಿನ ಸಮಸ್ಯೆ ತೀವ್ರ ಉಲ್ಬಣವಾಗಿದ್ದು ಇಂತಹ ಸಮಯದಲ್ಲಿ ಹೇಮಾವತಿ ನೀರು ಹರಿದು ಜನರ ಸಂಕಷ್ಟಕ್ಕೆ ಇತಿಶ್ರೀ ಹಾಡಲಿರುವುದು ಇಲ್ಲಿನ ಜನಗಳ ಸಂತಸಕ್ಕೆ ಕಾರಣವಾಗಲಿದೆ.
ತಾಲೂಕಿನ 24 ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನೀರು ಹರಿಸಲು ಅಲೊಕೇಶನ್ ಸದ್ಯ ಶೆಟ್ಟಿಕೆರೆ ಕೆರೆಗೆ ನೀರು ತುಂಬುತ್ತಿದೆ. ಅಲ್ಲಿಂದ ಜೋಡಿ ತಿರುಮಲಾಪುರದ ಕೆರೆಗೆ ನೀರು ಬರಲಿದ್ದು,ಅದು ತುಂಬಿದ ನಂತರ ತಿರುಮಲಾಪುರದ ಕೆರೆ ಕೋಡಿಯಿಂದ ಒಣ ಕಾಲುವೆ ಮೂಲಕ ಹುಳಿಯಾರು ಕೆರೆಗೆ ನೀರು ತಲುಪಲಿದೆ.
ನಾನಾ ಕಾರಣಗಳಿಂದಾಗಿ ವಿಳಂಬಗೊಂಡಿದ್ದ ಹೇಮಾವತಿ ನಾಳೆಯ ಕಾಮಗಾರಿ ಇದೀಗ ಚುರುಕಾಗಿ ನಡೆಯುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ಆದೇಶದಂತೆ ಇಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರವಿ ಸೂರನ್ ಹಾಗೂ ಶಿರಾ ಭಾಗದ ಸಹಾಯಕ ಇಂಜಿನಿಯರ್ ಪ್ರಭಾಕರ್ ತಿಮ್ಲಾಪುರ ಕೆರೆ ಕೋಡಿ ಹಾಗೂ ಹುಳಿಯಾರು ಒಣಕಾಲುವೆ ಜಾಗ ಪರಿಶೀಲಿಸಿದರು.
ಹುಳಿಯಾರು ಕೆರೆಗೆ ನೈಸರ್ಗಿಕವಾಗಿ ನೀರು : ನೀರಿನ ಹರಿವಿನ ಬಗ್ಗೆ ಮಾತನಾಡಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ರವಿ ಸೂರನ್ ಸಧ್ಯ ತಾಲ್ಲೂಕಿನ ಶೆಟ್ಟಿಕೆರೆಯ ಕೆರೆಗೆ ನೀರು ಹರಿದು ಬರುತ್ತಿದ್ದು ಅದು ತುಂಬುತ್ತಿದ್ದಂತೆಯೇ ನೈಸರ್ಗಿಕವಾಗಿ ತಿಮ್ಲಾಪುರ ಕೆರೆಗೆ ಹರಿದು ಬರಲಿದೆ.ಶೆಟ್ಟಿಕೆರೆ ಕೆರೆ ತುಂಬಲು ಇನ್ನೂ ಒಂದು ವಾರ ಬೇಕಿದ್ದು ಅಲ್ಲಿಂದ ತಿಮ್ಲಾಪುರಕ್ಕೆ ಬರುವ ಮಾರ್ಗಮಧ್ಯೆ ಅಲ್ಲಲ್ಲಿ ಸ್ಟೋರೇಜ್,ಚೆಕ್ ಡ್ಯಾಮ್ ಗಳಿದ್ದು ಅವುಗಳೆಲ್ಲಾ ತುಂಬಿ ತಿಮ್ಲಾಪುರ ಕೆರೆ ತುಂಬಲು ಇನ್ನು 15 ದಿನಗಳಾದರೂ ಬೇಕಾಗಲಿದೆ.ತಿಮ್ಲಾಪುರ ಕೆರೆ ಸಹ ದೊಡ್ಡ ಕೆರೆಯಾಗಿದೆ.ತಿಮ್ಮಲಾಪುರ ಕೆರೆ ತುಂಬಿದ ನಂತರ ಫೀಡರ್ ಚಾನಲ್ ಮುಖಾಂತರ ಹುಳಿಯಾರು ಕೆರೆ ತಲುಪಲಿದೆ ಎಂದರು.
ಸದ್ಯಕ್ಕೆ ತಾಲೂಕಿನ 24 ಕೆರೆಗಳಿಗೆ ಹೇಮಾವತಿಯಿಂದ ನೀರು ತುಂಬಿಸಲು ಅಲೊಕೇಶನ್ ಇದ್ದು ಹೇಮಾವತಿ ಭಾಗದಲ್ಲೂ ಸಹ ಉತ್ತಮ ಮಳೆಯಾಗಿರುವುದರಿಂದ ನೀರಿನ ಹರಿವಿಗೆ ಸಮಸ್ಯೆ ಎದುರಾಗುವುದಿಲ್ಲ ಎನ್ನಲಾಗುತ್ತಿದ್ದು ಎಲ್ಲಾ ಯೋಜನೆಯಂತೆ ನಡೆದಲ್ಲಿ ವರ್ಷಾಂತ್ಯದೊಳಗೆಯೇ ಹುಳಿಯಾರು ಕೆರೆಗೆ ಹೇಮಾವತಿ ನೀರು ಹರಿದು ತುಂಬಲಿದೆ.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೆಂಕೆರೆ ನವೀನ್ ಹಾಗೂ ಹುಳಿಯಾರು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಹೇಮಂತ್ ಕುಮಾರ್ ಇದ್ದರು.
----------------------------------------------
ಈಗ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ನೀರು ಹರಿದಲ್ಲಿ ತಿಮ್ಲಾಪುರ ಕೆರೆ ತುಂಬಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ.ಕೋಡಿಯಿಂದ ಹುಳಿಯಾರಿಗೆ ಒಣಕಾಲುವೆ ಮೂಲಕ ನೀರು ಬರಲಿದೆ.ಅಷ್ಟರೊಳಗೆ ಜಂಗಲ್ ಹಾಗೂ ಶಿಲ್ಟ್ ನಿಂದ ತುಂಬಿರುವ ಫೀಡರ್ ಚಾನೆಲ್ ಸ್ವಚ್ಛಗೊಳಿಸುವ ಕಾರ್ಯ ನಡೆಯಲಿದೆ.ಡಿಶಿಲ್ಟಿಂಗ್ ಮಾಡಿದ ನಂತರ ನೀರು ಸರಾಗವಾಗಿ ಹರಿಯಲಿದೆ. ಹುಳಿಯಾರು ಕೆರೆಯ ಸ್ಟೋರೇಜ್ ಪ್ರಮಾಣ ಹೆಚ್ಚಿದ್ದು ಸದ್ಯಕ್ಕೆ ಚಾನಲ್ ಸ್ವಚ್ಛ ಮಾಡುವ ಕಾರ್ಯ ನಾಳೆಯಿಂದಲೇ ಜರುಗಲಿದೆ:ಪ್ರಭಾಕರ್,ಸಹಾಯಕ ಇಂಜಿನಿಯರ್
-------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ