ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರನ್ನು ಸಂಘಟಿಸಿ ಅವರಿಗೆ ಉತ್ತಮ ಜೀವನ ನಡೆಸಲು ಸಹಕಾರ ನೀಡಲಾಗುತ್ತಿದೆ: ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ||ಎಲ್.ಹೆಚ್. ಮಂಜುನಾಥ್
---------------------
ಹುಳಿಯಾರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ದುರ್ಬಲರನ್ನು ಹಾಗೂ ಮಹಿಳೆಯರನ್ನು ಸಂಘಟಿಸಿ ಅವರಿಗೆ ಉತ್ತಮ ಜೀವನ ನಡೆಸಲು ಸಹಕಾರ ನೀಡಲಾಗುತ್ತಿದೆ.ದುರ್ಬಲ ವರ್ಗದ ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಿಸಿ ಆರ್ಥಿಕವಾಗಿ ಸಬಲೀಕರಣರನ್ನಾಗಿ ಮಾಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಸಂಘದಿಂದ ಯಶಸ್ವಿಯಾಗಿ ಸಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ||ಎಲ್.ಹೆಚ್. ಮಂಜುನಾಥ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ)ವತಿಯಿಂದ ಹುಳಿಯಾರಿನಲ್ಲಿ ನೂತನವಾಗಿ ಆರಂಭಿಸಲಾದ "ಚಿಕ್ಕನಾಯಕನಹಳ್ಳಿ-2 ನೂತನ ಯೋಜನಾ ಕಛೇರಿಯ" ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಸಹಾಯ ಸಂಘಗಳ ಮೂಲಕ ಸರಕಾರದ ಹಾಗೂ ಬ್ಯಾಂಕಿನ ಸಹಭಾಗಿತ್ವದೊಂದಿಗೆ ಹತ್ತು ಹಲವಾರು ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಿಸುತ್ತಿದ್ದು, ದುರ್ಬಲ ವರ್ಗದವರ ಸಬಲೀಕರಣ ಉದ್ದೇಶದಿಂದ ರಾಜ್ಯ ವ್ಯಾಪಿ ತನ್ನ ಕಾರ್ಯಚಟುವಟಿಕೆ ವಿಸ್ತರಿಸಿದ್ದು ಇಂದು ತುಮಕೂರು-2 ಜಿಲ್ಲೆಯಲ್ಲಿ ರಚನೆಯಾದ 33451ನೇ ಸಂಘದ ಉದ್ಘಾಟನೆ ನೆರವೇರಿಸಿರುವುದು ಯೋಜನೆಯ ಕಾರ್ಯ ವ್ಯಾಪಿಗೆ ಉದಾಹರಣೆಯಾಗಿದೆ ಎಂದರು.
ನಮ್ಮೂರು ನಮ್ಮ ಕೆರೆ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ 49 ಕೆರೆಗಳನ್ನು ಸರಿಸುಮಾರು ಆರು ಕೋಟಿ ವೆಚ್ಚದಡಿ ಅಭಿವೃದ್ಧಿ ಪಡಿಸಲಾಗಿದೆ, ಶುದ್ಧ ನೀರು ಒದಗಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಟ್ಟು 75 ಶುದ್ಧಗಂಗಾ ಘಟಕಗಳನ್ನು ಸ್ಥಾಪಿಸಲಾಗಿದೆ, ಜಿಲ್ಲೆಯ 15 ರುದ್ರ ಭೂಮಿಗಳಿಗೆ 17.5 ಲಕ್ಷ ಅನುದಾನ ನೀಡಲಾಗಿದೆ,ಧಾರ್ಮಿಕ ಕ್ಷೇತ್ರದ ಪುನಶ್ಚೇತನಕ್ಕೆ ಜಿಲ್ಲೆಯಲ್ಲಿ 12 ಕೋಟಿ ಅನುದಾನ ನೀಡಲಾಗಿದೆ,ಜಿಲ್ಲೆಯ 4,245 ಸದಸ್ಯರಿಗೆ ಉದ್ಯೋಗ ತರಬೇತಿ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ 1985 ನಿರ್ಗತಿಕರಿಗೆ 166 ಲಕ್ಷ ಮಾಶಾಸನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು..
ಜಿಲ್ಲೆಯಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿದ್ದು ಜಿಲ್ಲೆಯನ್ನು ಎರಡು ಭಾಗಗಳನ್ನಾಗಿ ಮಾಡಿ ಅಭಿವೃದ್ಧಿ ಮಾಡಿದ್ದೇವೆ ಎಂದ ಅವರು ತಾಲೂಕಿನಲ್ಲಿ 3 ವರ್ಷದ ಹಿಂದೆ ರೈತ ಉತ್ಪಾದನೆ ಕಂಪನಿ ಶುರು ಮಾಡಲಾಗಿದ್ದು ಇದೀಗ ಯಶಸ್ವಿಯಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತೆಂಗು ಉತ್ಪಾದನಾ ಕಂಪನಿ ಸಹ ಮಾಡುವ ಯೋಜನೆ ರೂಪಿಸಲಾಗಿದ್ದು ರೈತರು ಇದಕ್ಕೆ ಸಹಕರಿಸಿದಲ್ಲಿ ತೆಂಗು ಉತ್ಪಾದನಾ ಕಂಪನಿ ಸ್ಥಾಪಿಸಲು ಸಾಧ್ಯವಾಗಲಿದೆ ಎಂದರು.
ನಮ್ಮೂರು ನಮ್ಮ ಕೆರೆ ಯೋಜನೆ ಅಡಿ ಕೆರೆಗಳ ಅಭಿವೃದ್ಧಿ ದೇವಸ್ಥಾನಗಳ ಜೀರ್ಣದ್ದಾರ, ಹಿಂದೂ ರುದ್ರ ಭೂಮಿಗಳಿಗೆ ಅನುದಾನ, ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅನುದಾನ, ಶಾಲೆಗಳಿಗೆ ಪೀಠೋಪಕರಣ, ಜನಮಂಗಲ ಕಾರ್ಯಕ್ರಮದಡಿ ವಿಕಲಚೇತನರಿಗೆ ವೀಲ್ ಚೇರ್-ವಾಟರ್ ಬೆಡ್ ಮತ್ತಿತರ ಸಲಕರಣೆಗಳ ವಿತರಣೆ, ಜ್ಞಾನತಾಣ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಟ್ಯಾಬ್ ಮತ್ತು ಲ್ಯಾಪ್ಟಾಪ್ ವಿತರಣೆ, ಸುಜ್ಞಾನ ನಿಧಿ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ನಿರ್ಗತಿಗರಿಗೆ ಮಾಸಾಶನ, ಗ್ರಾಮಗಳನ್ನು ಪಾನಮುಕ್ತ ಮಾಡುವ ಉದ್ದೇಶದಿಂದ ನಡೆಸುವ ಮಧ್ಯವರ್ಜನ ಶಿಬಿರ, ದೇವಸ್ಥಾನಗಳ ಹಾಗೂ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ, ಸ್ವಉದ್ಯೋಗ ತರಬೇತಿ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಂತರ ಯೋಜನೆ ನಿರ್ವಹಿಸುತ್ತಿದೆ ಎಂದರು.
ತುಮಕೂರು-2 ಜಿಲ್ಲೆಯಲ್ಲಿ ರಚನೆಯಾದ 33451ನೇ ಸ್ವ-ಸಹಾಯ ಸಂಘ ಉದ್ಘಾಟನೆ ನೆರವೇರಿಸಿ ಮಾತನಾಡಿದ ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಿರಣ್ ಕುಮಾರ್ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಲು ಮದ್ಯವ್ಯಸನಿಗಳಿಗೆ ಮಧ್ಯವರ್ಜನ ಶಿಬಿರ ಸೇರಿದಂತೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು, ದೇವಸ್ಥಾನದ ಜೀರ್ಣೋದ್ಧಾರ ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಧರ್ಮಸ್ಥಳ ಸಂಘದ ಸೇವಾ ಕಾರ್ಯ ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ ಜಿಲ್ಲೆಯಲ್ಲಿ ಇದುವರೆಗೂ 50 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದ್ದು ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಸಂಘ ಮಾಡುತ್ತಿರುವುದು ಶ್ಲಾಘನೀಯ. ನೊಂದವರಿಗೆ ದಾರಿದೀಪವಾಗಿರುವ ಧರ್ಮಸ್ಥಳ ಸಂಘವು ಮಹಿಳೆಯರಿಗೆ ಉದ್ಯೋಗ ಹಾಗೂ ಆರ್ಥಿಕ ಸಹಾಯ ನೀಡುವುದರ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದು, ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂಳಗೊಂಡು ಅಭಿವೃದ್ಧಿ ಕೆಲಸಗಳು ಧರ್ಮಸ್ಥಳ ಸಂಘದಿಂದ ನಡೆಯುತ್ತಿದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಯೋಗೇಶ್ ಮಾತನಾಡಿ ಸದಾ ಜನರ ಹಿತಕ್ಕೆ ಎಲ್ಲಾ ರಂಗಗಳಲ್ಲೂ ಶ್ರಮಿಸುತ್ತಿರುವ ಧರ್ಮಸ್ಥಳದ ಸಂಘ ಹಾಗೂ ಅಲ್ಲಿನ ಧರ್ಮಧಿಕಾರಿಗಳ ಹೆಗ್ಗಡೆಯವರ ಸಮಾಜಮುಖಿ ಸೇವಾ ಕಾರ್ಯ ಎಲ್ಲರಿಗೂ ಪ್ರೇರಣೆ ಎಂದರು.
ಆಂಜನೇಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಡಗಿ ರಾಮಣ್ಣ ಮಾತನಾಡಿ ಈ ಭಾಗದಲ್ಲಿನ ಬಡಜನತೆಯ ಜೀವನೋಪಾಯಕ್ಕೆ ಸಂಘ ದಾರಿ ಮಾಡಿ ಕೊಟ್ಟಿದ್ದು ನೆಮ್ಮದಿಯಾಗಿ ಜೀವನ ಮಾಡುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕರಾದ ಕೆ.ಎಸ್.ಕಿರಣ್ ಕುಮಾರ್,ಬೆಂಗಳೂರು ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ, ಜನ ಜಾಗೃತಿ ವೇದಿಕೆಯ ಸೌಜನ್ಯ,ಪಟ್ಟಣ ಪಂಚಾಯಿತಿ ಸದಸ್ಯರಾದ ಬಡಗೀರಾಜು,ಚಂದ್ರಶೇಖರ್,ಕನಕದಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಿವಕುಮಾರ್, ಚಿತ್ರ ನಿರ್ಮಾಪಕ ನಂದಿಹಳ್ಳಿ ಶಿವಣ್ಣ, ಟ್ರಸ್ಟಿನ ಚಿಕ್ಕನಾಯಕನಹಳ್ಳಿ-1 ಕ್ಷೇತ್ರದ ಯೋಜನಾಧಿಕಾರಿ ಪ್ರೇಮಾನಂದ್,ಚಿಕ್ಕನಾಯಕನಹಳ್ಳಿ-2 ಕ್ಷೇತ್ರದ ಯೋಜನಾಧಿಕಾರಿ ರಾಮಚಂದ್ರ, ಹುಳಿಯಾರು ಮೇಲ್ವಿಚಾರಕಿ ಶ್ರೀಮತಿ ಚೈತ್ರ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮನ್ವಯಾಧಿಕಾರಿಗಳು, ಮೇಲ್ವಿಚಾರಕರು,ಸೇವಾ ಪ್ರತಿನಿಧಿಗಳು,ಪ್ರಗತಿ ಬಂದು ಸ್ವಸಹಾಯ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ