ಹುಳಿಯಾರಿನಲ್ಲಿ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ೯ ದಿನಗಳ ಕಾಲ "ಕನ್ನಡದ ಅಂತರಾಷ್ಟ್ರೀಯ ಕಲಾವಿದರಿಂದ ರಾಷ್ಟ್ರೀಯ ಉತ್ಸವ"
ಹುಳಿಯಾರು: ಜಾನಪದ ನಮ್ಮ ಬದುಕಿನ,ಸಮುದಾಯದ ಸಂಸ್ಕೃತಿಯಾಗಿದ್ದು ಇದನ್ನು ಉಳಿಸಿ ಬೆಳಸಿ ಮುಂದಿನ ತಲೆಮಾರುಗಳಿಗೆ ಜೀವಂತವಾಗಿರಿಸುವ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಸಮಾಜಮುಖಿಯಾಗಿ ಚಿಂತಿಸಿ ,ಜವಬ್ದಾರಿ ಹೊರಬೇಕಿದೆ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ತಿಳಿಸಿದರು.
ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ೯ ದಿನಗಳ ಕಾಲ ಆಯೋಜಿಸಲಾಗಿರುವ ಶ್ರೀ ಮಾತಾ ನವರಾತ್ರಿ ಸಾಂಸ್ಕೃತಿಕ ಉತ್ಸವದ ಆಹ್ವಾನಪತ್ರಿಕೆಯನ್ನು ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಭಾನುವಾರ ಬಿಡುಗಡೆ ಮಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು ಜಾನಪದ ನಮ್ಮ ಮಣ್ಣಿನ ಸಂಸ್ಕೃತಿಯಾಗಿದ್ದು, ಜಾನಪದವಿಲ್ಲದ ಕಲೆಯೇ ಇಲ್ಲ.೧೨ನೇ ಶತಮಾನದ ವಚನಗಳು ಆಗಲೇ ಇಂಗ್ಲೀಷಿಗೆ ಹೋಗಿದ್ದಲ್ಲಿ ವಚನಕಾರರು ವಿಶ್ವದ ಪ್ರಸಿದ್ಧ ವ್ಯಕ್ತಿಗಳಾಗುತ್ತಿದ್ದರು.ನಮ್ಮ ನಾಡಿನ ಮೂಲಕಲೆಯಾದ ಜಾನಪದ ಸಾಹಿತ್ಯ,ದಾಸಸಾಹಿತ್ಯ,ವಚನ ಸಾಹಿತ್ಯದ ಬಗ್ಗೆ ಅನಾದರ ತಳೆದಿರುವುದರಿಂದ ಅವುಗಳಿಗೆ ಸಿಗಬೇಕಾದ ಮನ್ನಣೆ ದೊರೆಯದೆ ಅವು ನಿರ್ಲಕ್ಷ್ಯಕೊಳ್ಳಪಟ್ಟಿವೆ ಎಂದು ಅಭಿಪ್ರಾಯಪಟ್ಟರು.
ನಾಡಿನ ವೈಶಿಷ್ಟಪೂರ್ಣ ಜಾನಪದ ಕಲೆಗಳಕಲೆಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ ಹಾಗೂ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪದ ಕಲೆಯ ಮೆರುಗು ಹೆಚ್ಚಿಸಬೇಕಿದೆ.ಆ ನಿಟ್ಟಿನಲ್ಲಿ ತಾವು ಕನ್ನಡದ ಸ್ಥಳಿಯ ಅಂತರಾಷ್ಟ್ರೀಯ ಮನ್ನಣೆಹೊಂದಿರುವ ಕಲಾವಿದರಿಂದ ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಮೂಲಕ ಕೋಡಿಪಾಳ್ಯದ ಧ್ಯಾನನಗರಿಯಲ್ಲಿ ೯ ದಿನಗಳ ಕಾಲ ರಾಷ್ಟ್ರೀಯ ಉತ್ಸವ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಇದೇ ಮೊದಲ ಬಾರಿಗೆ, ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಅಪರೂಪವಾದ ಸಾಂಸ್ಕೃತಿಕ ಉತ್ಸವ ಏರ್ಪಡಿಸಿದ್ದು ಈ ಉತ್ಸವದಲ್ಲಿ ಭಾಗವಹಿಸುತ್ತಿರುವ ಬಹುಪಾಲು ಕಲಾವಿದರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದವರು. ಯಕ್ಷಗಾನ ತಂಡ ಅಮೇರಿಕಾ, ಜರ್ಮನಿ,(೨ ಬಾರಿ) ಚೀನಾ, ದುಬೈ ಮತ್ತು ಕುವೈಯತ್ ದೇಶಗಳಲ್ಲಿ , ಶ್ರೀಮತಿ ಸವಿತ ಅಮೇರಿಕಾ ಮತ್ತು ಸಿಂಗಾಪುರ ದೇಶಗಳಲ್ಲಿ, ಶ್ರೀ ಸುಷ್ಮ ಮತ್ತು ಭ್ರಮರಿ ನೃತ್ಯ ತಂಡ ಅಮೇರಿಕಾ ದೇಶಗಳಲ್ಲಿ, ಶ್ರೀ ಪಂಡಿತ್ ಪರಮೇಶ್ವರ್ ಹೆಗಡೆ ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿರುವುದಲ್ಲದೇ ಅನೇಕ ವಿದೇಶಿ ವಿದ್ಯಾರ್ಥಿಗಳಿಗೆ ಗುರುಗಳಾಗಿದ್ದಾರೆ ಎಂದರು.
ಮೊದಲ ದಿನದಿಂದ ಕೊನೆಯವರೆಗಿನ ಇಲ್ಲಿ ಪ್ರದರ್ಶಿತವಾಗುವ ಎಲ್ಲಾ ಕಾರ್ಯಕ್ರಮಗಳು ಈ ನೆಲದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಾಗಿದ್ದು ಯಕ್ಷಗಾನ, ಜಾನಪದ, ರಂಗಭೂಮಿ, ಹರಿಕಥೆ, ವಚನ ಗಾಯನ, ಕರ್ನಾಟಕ ಸಂಗೀತ, ಸುಗಮ ಸಂಗೀತ, ಚಲನಚಿತ್ರ ಗೀತೆ, ಸಮೂಹ ನೃತ್ಯ, ಸಮೂಹ ಭರತನಾಟ್ಯ, ಅಂಧ ಕಲಾವಿದೆಯರಿಂದ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ ಮುಂತಾದ ಕಲೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.
ಖ್ಯಾತ ಅಂತರಾಷ್ಟ್ರೀಯ ನೃತ್ಯಗಾರ್ತಿ ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್ ಈ ಉತ್ಸವಕ್ಕೆ ಬರುತ್ತಿರುವುದು ಘನತೆಯ ವಿಷಯವಾಗಿದ್ದು ಒಟ್ಟಾರೆ ಈ ಉತ್ಸವ ಹುಳಿಯಾರಿನಲ್ಲಿ ನಡೆಯುತ್ತಿದ್ದರೂ ಇದು ಸ್ಥಳೀಯ ಕಾರ್ಯಕ್ರಮವಾಗದೆ ಕನ್ನಡದ ಅಂತರಾಷ್ಟ್ರೀಯ ಕಲಾವಿದರ ರಾಷ್ಟ್ರೀಯ ಉತ್ಸವವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತಾಛಾರಿಟಬಲ್ ಟ್ರಸ್ಟಿನ ಗಂಗಾಧರ್,ಮಾಜಿ ಜಿಪಂ ಅಧ್ಯಕ್ಷ ರಘುನಾಥ್, ಚಂದ್ರಶೇಖರ್,ಶ್ರೀನಿವಾಸ್, ಬಡಗಿರಾಮಣ್ಣ, ಹು.ಕೃ.ವಿಶ್ವನಾಥ್,ಎಂಎಸ್ ಆರ್ ನಟರಾಜು,ಕೆಂಕೆರೆ ಸತೀಶ್, ಉಮೇಶ್ ನಾಯಕ್,ಮೋತಿನಾಯ್ಕ್,ಲಕ್ಷ್ಮೀಭಾಯಿ,ನಂದಿಹಳ್ಳಿ ಶಿವಣ್ಣ ಮೊದಲಾದವರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ