ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನಾರ್ಹವಾದುದು ಎಂದು ಸಾಹಿತಿ ಹಾಗೂ ಬಿಎಂಎಸ್ ಕಾಲೇಜಿನ ಪ್ರಾಂಶುಪಾಲ ಪ್ರೋ ಬಿಳಿಗೆರೆ ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹುಳಿಯಾರು ಹೋಬಳಿ ಪತ್ರಕರ್ತರ ಸಂಘ ಹಾಗೂ ಚಿಂತನಶೀಲರಿಂದ ನಡೆದ ಸಾಂಕೇತಿಕ ಪ್ರತಿಭಟನೆ. |
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹುಳಿಯಾರು ಹೋಬಳಿ ಪತ್ರಕರ್ತರ ಸಂಘ ಹಾಗೂ ಚಿಂತನಶೀಲರಿಂದ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಗಾಂಧೀಜಿಯ ಜಾತ್ಯಾತೀತತೆ, ಬಸವಣ್ಣನವರ ಸಮಾನತೆಯ ಸಮಾಜ , ಅಂಬೇಡ್ಕರ್ ಸಮಾನತೆಯ ತಳಹದಿಯಲ್ಲಿ ತಮ್ಮ ವಿಚಾರಧಾರೆಗಳನ್ನು ಮಂಡಿಸುತ್ತಿದ್ದ ಗೌರಿಯವರ ಹತ್ಯೆ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ.
ತಮ್ಮ ಪ್ರಗತಿಪರ ವಿಚಾರಧಾರೆ ಹಾಗೂ ಚಿಂತನೆಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಗೌರಿ ಅವರನ್ನು ಹತ್ಯೆ ಮಾಡುವ ಮೂಲಕ ಯಾವುದೇ ವಿಚಾರ ಅಂತ್ಯಗೊಳಿಸಲು ಸಾಧ್ಯವಿಲ್ಲ.ಹತ್ಯೆಯಿಂದ ಆತಂಕ ಸೃಷ್ಟಿಸಬಹುದು ಅಷ್ಟೇ.ಗೌರಿಯನ್ನು ಹತ್ಯೆ ಮಾಡಿದಾಕ್ಷಣ ಅವರು ಪ್ರತಿಪಾದಿಸಿದ ವಿಚಾರಧಾರೆಗಳ ಮುಗಿಸಿದ್ದೇವೆ ಎಂದು ಭಾವಿಸಿದಲ್ಲಿ ಅದು ಮೂರ್ಖತನ. ವಿಚಾರವಂತರ ಹತ್ಯೆಯ ಬಗ್ಗೆ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿಪರ ಹೋರಾಟಗಾರರ ಹತ್ಯೆಗಳಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.
ರೈತಸಂಘದ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್ ಮಾತನಾಡಿ ಹತ್ಯೆಗೈದವರನ್ನು ಶೀಘ್ರ ಬಂಧಿಸುವ ಮೂಲಕ ಸರ್ಕಾರ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಈ ಹಿಂದೆ ಕೂಡ ವಿಚಾರವಾದಿ ಕಲಬುರ್ಗಿ ಅವರ ಹತ್ಯೆ ಕೂಡ ಇದೇರೀತಿ ನಡೆದಿದ್ದು ಇಲ್ಲಿಗೆ ಮೂರು ವರ್ಷಗಳಾದರೂ ಸಹ ಸೂಕ್ತ ತನಿಖೆ ಮಾಡಿ ಹತ್ಯೆ ಮಾಡಿದವರನ್ನು ಇದುವರೆಗೂ ಬಂಧಿಸದಿರುವುದು ನಾಚಿಕೆಗೇಡಿನ ವಿಚಾರ ಎಂದರು .
ಹುಳಿಯಾರಿನ ವರದಿಗಾರರಾದ ನರೇಂದ್ರಬಾಬು,ಎಚ್.ಬಿ.ಕಿರಣ್ ಕುಮಾರ್,ಯೋಗೇಶ್,ರಂಗನಕೆರೆ ಮಹೇಶ್ ,ಯುವ ಮುಖಂಡ ಇಮ್ರಾಜ್,ರೈತಸಂಘದ ಕಂಪನಹಳ್ಳಿ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ