ಹುಳಿಯಾರು:ರಂಗಭೂಮಿ ಉಳಿಯಬೇಕು, ರಂಗಭೂಮಿಯ ಮುಖಾಂತರ ನಾಡು-ನುಡಿ- ಭಾಷೆ- ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ಅದಕ್ಕೂ ಮೀರಿ ಸ್ಥಳೀಯರ ರಂಗ ಕಲೆ ಗುರುತಿಸುವ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಈ ರಂಗಭೂಮಿ ಬಳಕೆಯಾಗಬೇಕು ಎಂದು ಖ್ಯಾತ ರಂಗಭೂಮಿ ಹಾಗೂ ಕಿರುತೆರೆ ಕಲಾವಿದ ಬಾಬು ಹಿರಣ್ಣಯ್ಯ ತಿಳಿಸಿದರು.
ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೀಪದ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕೃತಿಕ ಸದನದಲ್ಲಿ ಗುರುವಾರ ಸಂಜೆ ನಡೆದ ಶ್ರೀಮಾತ ನವರಾತ್ರಿ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವ್ಯಕ್ತಿ ಬೆಳೆದಂತೆಲ್ಲ ಸಾಧಕನಾಗಬೇಕು, ಸಮಾಜಮುಖಿಯಾಗಿ ಬದುಕಬೇಕು ಎಂದರು.
ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಅತ್ಯುತ್ತಮವಾದ ರಂಗಮಂದಿರವನ್ನು ಯಾವುದೇ ಫಲಾಪಲ ಅಪೇಕ್ಷೆಯಿಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಿಸಿರುವ ಗಂಗಾಧರ್ ಅವರ ಕಾರ್ಯ ಶ್ಲಾಘನೀಯ.ತನಗಾಗಿ ಏನನ್ನೂ ಬಯಸದೆ ಇಲ್ಲಿನ ಗ್ರಾಮದ ಸಂಸ್ಕೃತಿಗೆ, ಕಲೆಯ ಉಳಿವಿಗೆ ಭವ್ಯ ರಂಗಮಂದಿರ ನಿರ್ಮಿಸುವ ಮೂಲಕ ಹಾಗೂ ಅದನ್ನು ತಮ್ಮ ತಾಯಿಗೆ ಸಮರ್ಪಿಸುವ ಮೂಲಕ ಗಂಗಾಧರ್ ಅವರು ಯಾರೂ ತೀರಿಸದ ಮಾತೃ ಋಣ ಹಾಗೂ ಭೂ ಋಣವನ್ನು ತೀರಿಸಿದ್ದು, ಕಲೆಗೆ ಪ್ರೋತ್ಸಾಹಿಸುವ ,ಕಲಾವಿದರ ಬೆನ್ನು ತಟ್ಟುವ ಇವರ ಕಾರ್ಯ ಶ್ಲಾಘನೀಯವಾಗಿದ್ದು ಇದು ಎಲ್ಲರಿಗೆ ಮಾದರಿಯಾಗಬೇಕು ಎಂದರು.
ನವರಾತ್ರಿ ಸಾಂಸ್ಕೃತಿಕ ಉತ್ಸವದ ಉದ್ಘಾಟನೆ ನೆರವೇರಿಸಿದ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ ಮಾತನಾಡಿ ಕಲೆ ಎಲ್ಲರಲ್ಲೂ ಅಡಗಿರುತ್ತದೆ ಅದನ್ನು ಅಭಿವ್ಯಕ್ತಗೊಳಿಸಲು ವೇದಿಕೆ ಸಿಗಬೇಕು. ಅಂತಹ ವೇದಿಕೆ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಿಸಿ ಕಲಾವಿದರನ್ನು ಪ್ರೋತ್ಸಾಹಿಸಲು ಮುಂದಾಗಿರುವ ಗಂಗಾಧರ್ ಅವರ ವ್ಯಕ್ತಿತ್ವ ಶ್ಲಾಘನೀಯ ಎಂದರು. ವಿಧಾನಸೌಧ ಯಾರೊಬ್ಬರ ಆಸ್ತಿಯಲ್ಲ ,ಅದು ಸಾರ್ವಜನಿಕರ ಸ್ವತ್ತಾಗಿದ್ದು ಅಂತಹ ವಿಧಾನಸೌಧದ ಮುಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರತಿ ವಾರ ಜಾನಪದ ಜಾತ್ರೆ ನಡೆಸುತ್ತಿದ್ದಾಗಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.ಅಂತಹ ಜಾನಪದ ಜಾತ್ರೆ ಇಲ್ಲಿ ಸಾಂಸ್ಕೃತಿಕ ಹಬ್ಬವಾಗಿ ಒಂಬತ್ತು ದಿನಗಳ ಕಾಲ ಆಯೋಜಿಸಿರುವುದು ಹೆಚ್ಚುಗಾರಿಕೆಯ ವಿಚಾರ ಎಂದರು.
ಇದೇ ಸಂದರ್ಭದಲ್ಲಿ ಖ್ಯಾತ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ದಂಪತಿಗಳನ್ನು ಸನ್ಮಾನಿಸಲಾಯಿತು.
ಟ್ರಸ್ಟಿನ ಅಧ್ಯಕ್ಷ ಗಂಗಾಧರ್, ರಂಗಕರ್ಮಿ ಶ್ರೀನಿವಾಸ.ಜಿ.ಕಪ್ಪಣ್ಣ, ವರ್ತಕ ಕೆ.ಬಿ.ಮರುಳ ಸಿದ್ದಪ್ಪ,ಶಾಂತಾ ಮಾಸ್ಟರ್ ಹಿರಣ್ಣಯ್ಯ ಪಾಲ್ಗೊಂಡಿದ್ದರು.
ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ ತಂಡದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಮಾಡಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ