ಹುಳಿಯಾರು-ಕೆಂಕೆರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೨ರ ಜೂನ್-೨೧ರಂದು "ಅಂತರ ರಾಷ್ಟ್ರೀಯ ಯೋಗ ದಿನ"ದ ಪ್ರಯುಕ್ತ ಯೋಗದ ಮಹತ್ವ ಕುರಿತ ಉಪನ್ಯಾಸ ಮತ್ತು ಯೋಗಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ತುಮಕೂರು, ಇಲ್ಲಿನ ಹುಳಿಯಾರು ಶಾಖೆಯ ಯೋಗ ಶಿಕ್ಷಕರಾದ ಶ್ರೀ ದುರ್ಗರಾಜು ಹಾಗೂ ಶ್ರೀಮತಿ ಆಶಾ ಅವರು ಯೋಗ ಮಾರ್ಗದರ್ಶಕರಾಗಿ ಭಾಗವಹಿಸಿದ್ದರು. ಇವರು ಮೊದಲಿಗೆ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ಕುರಿತು ಉಪನ್ಯಾಸ ನೀಡಿ, ನಂತರ ಪ್ರಾಯೋಗಿಕವಾಗಿ ಯೋಗದ ಕೆಲವು ಆಸನಗಳನ್ನು ಪರಿಚಯಿಸಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಉಪನ್ಯಾಸಕಿ ಪ್ರೊ.ಸುಷ್ಮಾ ಎಲ್. ಬಿರಾದಾರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ "ಜೂನ್ 21ನೆಯ ದಿನ ಭೂಮಿಯ ಉತ್ತರಾರ್ಧಗೋಳದಲ್ಲಿ ಅತಿ ದೀರ್ಘ ಹಗಲು ಇರುತ್ತದೆ. ಆದ್ದರಿಂದ ಜೀವನದ ಚೈತನ್ಯಕ್ಕೆ ಕಾರಣವಾಗುವ ಸೂರ್ಯ ದೇವನಿಗೆ ನಮಿಸುವ ಭಾರತೀಯರ ಪರಂಪರೆಯ ಭಾಗವಾಗಿ ನಮ್ಮ ಋಷಿ ಮುನಿಗಳ ಕಾಲದಿಂದ ಬೆಳೆದುಬಂದ ಯೋಗ ವಿಜ್ಞಾನ ಇಡೀ ಜಗತ್ತಿನ ಮಾನವ ಕುಲಕ್ಕೆ ಬೆಳಕಾಗಲಿ ಎಂಬ ಉದ್ದೇಶದಿಂದ ಇದೇ ದಿನ ಯೋಗ ದಿನವನ್ನು ಆಚರಿಸಲು ನಿರ್ಧರಿಸಲಾಯಿತು" ಎಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿಯರಾದ ಸಹನ ಮತ್ತು ರಾಧ ಕನಕದಾಸರ ಕೀರ್ತನೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರಂಥಪಾಲಕರಾದ ಡಾ. ಲೋಕೇಶ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ-೧ರ ಕಾರ್ಯಕ್ರಮಾಧಿಕಾರಿ ಡಾ. ಮೋಹನ್ ಕುಮಾರ್ ಎಂ.ಜೆ. ಕಾರ್ಯಕ್ರಮವನ್ನು ನಿರೂಪಿಸಿದರು. ಉದ್ಯೋಗ ಭರವಸಾ ಕೋಶದ ಸಂಚಾಲಕರಾದ ಪ್ರೊ. ಮಲ್ಲಿಕಾರ್ಜುನ ಅವರು ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಮಂಜುನಾಥ ಕೆ.ಎಸ್. ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ