ಹುಳಿಯಾರು -ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ "ವಿಶ್ವ ರಕ್ತದಾನಿಗಳ ದಿನಾಚರಣೆ" ಪ್ರಯುಕ್ತ "ರಕ್ತದಾನ ಕುರಿತು ಜಾಗೃತಿ ವಿಶೇಷ ಉಪನ್ಯಾಸ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಮಂಜುನಾಥ್ ಕೆ.ಎಸ್. ಅವರು “ರಕ್ತದಾನ ಜೀವದಾನ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ರಕ್ತದಾನದ ಉಪಯೋಗ, ರಕ್ತದ ಗುಂಪುಗಳ ವರ್ಗೀಕರಣ ಕುರಿತು, ರಕ್ತ ಪರೀಕ್ಷೆ ಹಾಗೂ ರಕ್ತ ನಿಧಿಯಲ್ಲಿ ರಕ್ತ ಸಂಗ್ರಹಿಸುವ ಪ್ರಕ್ರಿಯೆ ಕುರಿತು ಸವಿವರವಾದ ಮಾಹಿತಿಯನ್ನು ನೀಡಿದರು. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋಗಳನ್ನು ತೋರಿಸಿ ವಿಷಯಗಳು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
"ತಲೆಕೂದಲು ನೀಡಿದರೆ ಮತ್ತೆ ಚಿಗುರುವಂತೆ, ರಕ್ತದಾನ ಮಾಡಿದರೆ ಮತ್ತೆ ಹೊಸ ರಕ್ತ ಕಣಗಳು ಶರೀರದಲ್ಲಿ ಉತ್ಪತ್ತಿಯಾಗುತ್ತವೆ. ರಕ್ತ ನೀಡುವುದು ದಾನವೇ ಹೊರತು ದುಡ್ಡಿಗಾಗಿ ಅಲ್ಲ, ಆರೋಗ್ಯವಂತ ಯುವಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಸಲಹೆ ನೀಡಿದ ಅವರು ಆಪರೇಷನ್ ಗಳು, ರಕ್ತ ಸಂಬಂಧಿ ಕಾಯಿಲೆಗಳು ಹಾಗೂ ಅಪಘಾತದ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಪುರುಷರಾದರೆ ಮೂರು ತಿಂಗಳಿಗೊಮ್ಮೆ, ಮಹಿಳೆಯರಾದರೆ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು, ರಕ್ತದಾನ ಮಾಡಲು ಯಾವುದೇ ಹಿಂಜರಿಕೆ ಅಥವಾ ಭಯ ಬೇಕಾಗಿಲ್ಲ" ಎಂದರು. ಈ ಸಂದರ್ಭದಲ್ಲಿ ಅವರು ತಾವು ಕೂಡ ಹಿಂದೆ ರೆಡ್ ಕ್ರಾಸ್ ಘಟಕದ ಸಂಚಾಲಕರಾಗಿದ್ದಾಗ ರಕ್ತದಾನ ಮಾಡಿದ ತಮ್ಮ ಅನುಭವವನ್ನು ಹಂಚಿಕೊಂಡರು.
ಗ್ರಂಥಪಾಲಕರಾದ ಡಾ. ಲೋಕೇಶ ನಾಯಕ್ ಅವರು ಮಾತನಾಡಿ "ಯುವಶಕ್ತಿ ರಕ್ತದಾನ ಮಾಡಲು ಮುಂದೆ ಬರಬೇಕು, ಆ ಮೂಲಕ ಎಲ್ಲರಿಗೂ ಮಾದರಿಯಾಗಬೇಕು" ಎಂದು ಸಲಹೆ ನೀಡಿದರು.
ಐಕ್ಯೂಎಸಿ ಸಂಚಾಲಕರಾದ ಡಾ. ಸುಷ್ಮಾ ಎಲ್. ಬಿರಾದಾರ್ ಅವರು ಮಾತನಾಡಿ "ಎಲ್ಲರೂ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ, ಒಬ್ಬ ವ್ಯಕ್ತಿಯಿಂದ ರಕ್ತ ಪಡೆದುಕೊಳ್ಳುವ ಮೊದಲು ರಕ್ತ ಪರೀಕ್ಷೆ ನಡೆಸಿ ರಕ್ತದ ಗುಂಪು, ಏಡ್ಸ್ ಕಾಯಿಲೆ, ಹೆಪಟೈಟಿಸ್ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ವರದಿಗಳನ್ನು ಆಧರಿಸಿ ವ್ಯಕ್ತಿಯಿಂದ ರಕ್ತವನ್ನು ದಾನವಾಗಿ ಪಡೆದುಕೊಳ್ಳಲಾಗುತ್ತದೆ. ಹೀಗಾಗಿ ನಾವು ಆರೋಗ್ಯವಾಗಿದ್ದರೆ ಮಾತ್ರ ರಕ್ತ ಕೊಡಬಹುದು. ಆದ್ದರಿಂದ ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿನಿಯರು ತಮ್ಮ ಆಹಾರ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು" ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್. ಸಿ. ಅವರು ಮಾತನಾಡಿ "ರಕ್ತವನ್ನು ಯಾವುದೇ ಕಾರ್ಖಾನೆಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಅದನ್ನು ಜೀವಂತ ವ್ಯಕ್ತಿಯಿಂದ ಪಡೆದು ಮತ್ತೊಂದು ಜೀವವನ್ನು ಉಳಿಸಲು ಸಾಧ್ಯವಿದೆ. ಇದರಲ್ಲಿ ಆರೋಗ್ಯವಂತ ಜನತೆಯ ಪಾತ್ರ ಬಹಳ ಮಹತ್ವದ್ದಾಗಿದೆ" ಎಂದರು. ಮುಂದುವರಿದು "‘ಬಲಿಷ್ಠರು, ಉಕ್ಕಿನಂತಹ ನರಗಳು, ಕಬ್ಬಿಣದಂತಹ ಮಾಂಸಖಂಡಗಳು, ಮಿಂಚಿನಂತಹ ಇಚ್ಛಾಶಕ್ತಿಯುಳ್ಳ ನೂರು ಮಂದಿ ಯುವಕರನ್ನು ನನಗೆ ಕೊಡಿ, ಭವ್ಯ ಭಾರತವನ್ನು ಕಟ್ಟುತ್ತೇನೆ’ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ನೆನಪಿಸಿಕೊಳ್ಳುತ್ತಾ, ಇಂದು ನಮ್ಮಲ್ಲಿ ಅಂತಹ ಎಷ್ಟು ಆರೋಗ್ಯವಂತ ಯುವಕ-ಯುವತಿಯರಿದ್ದಾರೆ ಎಂಬುದನ್ನು ಆಲೋಚಿಸಬೇಕಿದೆ" ಎಂದರು. "ಎಲ್ಲರೂ ಆರೋಗ್ಯದ ಕಡೆ ಗಮನ ಕೊಟ್ಟು ಆರೋಗ್ಯವಂತ ರಕ್ತವನ್ನು ದಾನ ಮಾಡಬೇಕು" ಎಂದು ಆಶಿಸಿದರು.
ಭಾಗವಹಿಸಿದ ವಿದ್ಯಾರ್ಥಿಗಳ ಪರವಾಗಿ ರಾಧಿಕಾ ಕೆ. ಪ್ರಥಮ ಬಿ.ಕಾಂ. ಇವರು ರಕ್ತದಾನದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿನಿ ಪುಷ್ಪ ಕೆ.ಯು. ಪ್ರಥಮ ಬಿ.ಕಾಂ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಕೋಮಲ ರಕ್ತದಾನದ ಮಹತ್ವವನ್ನು ಕುರಿತ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಶ್ರೀಮತಿ ಸಂಗೀತಾ ಪಿ. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಕುಸುಮ ಎಲ್. ಅವರು ಸ್ವಾಗತಿಸಿದರು ಮತ್ತು ರಕ್ಷಿತಾ ಕೆ. ಅವರು ವಂದಿಸಿದರು.
ಕಾಲೇಜಿನ ಎನ್.ಎಸ್.ಎಸ್. ಘಟಕ-1ರ ಕಾರ್ಯಕ್ರಮಾಧಿಕಾರಿಗಳಾದ ಡಾ. ಮೋಹನ್ ಕುಮಾರ್ ಎಂ.ಜೆ. ಹಾಗೂ ಎನ್.ಎಸ್.ಎಸ್. ಘಟಕ-2ರ ಕಾರ್ಯಕ್ರಮಾಧಿಕಾರಿಗಳಾದ ಡಾ. ಜಯಶ್ರೀ ಬಿ. ಅವರು ಭಾಗವಹಿಸಿದ್ದರು. ಹಾಗೆಯೇ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ