ಹುಳಿಯಾರು-ಕೆಂಕರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು ಘಟಕ-2ರ ವತಿಯಿಂದ ‘ವಿಶ್ವ ಪರಿಸರ ದಿನ’ ಆಚರಣೆ ಮತ್ತು ‘ಪರಿಸರ ಜಾಗೃತಿ ಕುರಿತು ವಿಶೇಷ ಉಪನ್ಯಾಸ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ರಾಮಕೃಷ್ಣಪ್ಪ, ಅಧ್ಯಕ್ಷರು, ಸುವರ್ಣ ವಿದ್ಯಾ ಚೇತನ, ಬೋರನ ಕಣಿವೆ, ಇವರು “ಇರುವುದೊಂದೇ ಭೂಮಿ – ಉಳಿಸಿಕೊಳ್ಳೋಣ”ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ‘ಪರಿಸರ ದಿನ’ ಎನ್ನುವುದು ಆಚರಣೆಯಲ್ಲ, ನಮ್ಮ ಜೀವನದುದ್ದಕ್ಕೂ ಮಾಡುವ ಕಾರ್ಯಾಚರಣೆ. ಆದ್ದರಿಂದ ನಾವು ವೇದಿಕೆ ಶೂರರಾಗದೆ ಕಾರ್ಯಾಚರಣೆಯಲ್ಲಿ ಶೂರರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಇಂದು ವಾತಾವರಣದ ಉಷ್ಣತೆ ದೇಹದ ಉಷ್ಣತೆಗಿಂತ ಹೆಚ್ಚಿದ್ದು ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇಂದು ಮಳೆಯ ಪ್ರಮಾಣ ಕಡಿಮೆಯಾಗಿಲ್ಲದಿದ್ದರೂ ಮಳೆಯ ದಿನ ಕಡಿಮೆ ಆಗಿದೆ. ಅಲ್ಲದೆ ಬೀಳುವ ಮಳೆ ಕೂಡಾ ಅಕಾಲಿಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಕಳೆದ ಮೂರು ವರ್ಷಗಳಲ್ಲಿ ದೇಶದಲ್ಲಿ ಒಂದು ಕೋಟಿ ಮರ ಕಡಿದಿದ್ದು, ಹತ್ತು ಲಕ್ಷ ಸಸಿಗಳನ್ನು ಮಾತ್ರ ನೆಟ್ಟಿದ್ದೇವೆ, ಅದೂ ಸರ್ಕಾರದ ವತಿಯಿಂದ. ಈ ಬಗ್ಗೆಯೂ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಹಾಗೆಯೇ ನಮ್ಮ ಮುಂದಿನ ನಡೆ ‘ಕಾರ್ಬನ್ ಹೆಜ್ಜೆ’ ಆಗಿರದೆ, ‘ಹಸಿರು ಹೆಜ್ಜೆ’ ಆಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರಗತಿಪರ ರೈತರಾದ ಶ್ರೀ ರಂಗನಕೆರೆ ಮಹೇಶ್ ಅವರು “ಪರಿಸರ ಸಂರಕ್ಷಣೆ - ನಮ್ಮೆಲ್ಲರ ಹೊಣೆ”ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಹುಳಿಯಾರು ಭಾಗದ ಪ್ರದೇಶ ಮಲೆನಾಡಿನ ಸೆರಗಾಗಿದ್ದು, ಸಾಮಾನ್ಯವಾಗಿ ಇಲ್ಲಿ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕಿತ್ತು. ಆದರೆ ಈಗ ಇಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಇದಕ್ಕೆಲ್ಲಾ ಪರಿಸರ ನಾಶವೇ ಕಾರಣ ಎಂದರು. ಒಂದು ಸಮೀಕ್ಷೆಯ ಪ್ರಕಾರ 2050ನೆಯ ಇಸವಿಯ ವೇಳೆಗೆ ಭೂಮಿಯ ಅಂತರ್ಜಲ ಬರಿದಾಗಿ ನೀರಿನ ತೀವ್ರ ಅಭಾವ ಎದುರಾಗುತ್ತದೆ ಎಂಬ ಮಾಹಿತಿ ಇದೆ. ಆದ್ದರಿಂದ ನಾವು ಭೂಮಿಯ ಒಳಗಿನ ಬಂಗಾರಕ್ಕೆ ಆಸೆ ಪಡದೆ ನೀರು ಮತ್ತು ಮಣ್ಣನ್ನು ಬಂಗಾರವೆಂದು ಭಾವಿಸಿ ಉಳಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಸುಷ್ಮಾ ಎಲ್. ಬಿರಾದಾರ್ ಅವರು ಮಾತನಾಡಿ ‘ನಾವು ಹಾಕುವ ಬಟ್ಟೆಗೆ ನಮಗೆ ಆಯ್ಕೆಗಳಿವೆ. ಆದರೆ ಭೂಮಿಗೆ ಆಯ್ಕೆ ಇಲ್ಲ. ನಮಗೆ ಇರುವುದೊಂದೇ ಭೂಮಿ. ಆದ್ದರಿಂದ ಅದನ್ನು ನಾವು ಕಾಪಾಡಿಕೊಳ್ಳಬೇಕಾದ್ದು ನಮ್ಮ ಹೊಣೆ’ ಎಂದರು. ದೆಹಲಿಯ ವಾಯು ಮಾಲಿನ್ಯದಿಂದಾಗಿ ಅಲ್ಲಿನ ಜನರ ಸರಾಸರಿ ಆಯಸ್ಸು ಕಳೆದ ದಶಕಗಳಿಗೆ ಹೋಲಿಸಿದರೆ ಹತ್ತು ವರ್ಷಗಳಷ್ಟು ಕಡಿಮೆ ಆಗಿದೆ ಎಂದು ಹೇಳುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವ ಇಂದು ಎಷ್ಟಿದೆ ಎಂಬ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಗ್ರಂಥಪಾಲಕರಾದ ಡಾ. ಲೋಕೇಶ ನಾಯಕ್ ಅವರು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಒಂದಾದರೂ ಗಿಡ ನೆಟ್ಟು ಅದನ್ನು ಪೋಷಿಸುವ ಪ್ರತಿಜ್ಞೆ ಮಾಡಬೇಕು, ದೇಶದ ಭವಿಷ್ಯ ಕಟ್ಟುವ ನೀವು ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಧ್ಯಕ್ಷೀಯ ನುಡಿಗಳನ್ನು ಆಡಿದ ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್.ಸಿ. ಅವರು ‘ಟಿ.ಎಸ್. ಮಾಲ್ತಸ್ ಅವರ ‘ಥಿಯರಿ ಆಫ್ ಪಾಪುಲೇಷನ್’ ಸಿದ್ಧಾಂತದ ಪ್ರಕಾರ ‘ನಾವೇ ಮುಂದಾಗಿ ಪರಿಸರವನ್ನು ರಕ್ಷಿಸದಿದ್ದರೆ, ಪರಿಸರವೇ ಕಾರ್ಯಚರಣೆಗೆ ಇಳಿಯುತ್ತದೆ’ ಆದ್ದರಿಂದ ನಾವು ಈಗಲಾದರೂ ಜಾಗೃತರಾಗಬೇಕು ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ‘ನಾವು ಬದುಕುತ್ತಿರುವುದು ಏಕೆ ಎಂದು ತಿಳಿದವರು ಮಾತ್ರ, ಹೇಗೆ ಬದುಕಬೇಕೆಂಬುದನ್ನೂ ತಿಳಿದಿರುತ್ತಾರೆ’ ಎಂಬ ಜರ್ಮನಿಯ ತತ್ವಜ್ಞಾನಿ ನೀಷೆಯ ಮಾತನ್ನೂ ನೆನಪಿಸಿದರು. ಇಂದು ಕೇವಲ ಗಾಳಿ, ನೀರು, ನೆಲ ಅಷ್ಟೇ ಅಲ್ಲದೆ ನಮ್ಮ ಚಿಂತನೆಗಳೂ ಕೂಡ ಕಲುಷಿತಗೊಂಡಿವೆ, ಸಂತೋಷದ ಮಾನದಂಡಗಳೂ ಬದಲಾಗಿವೆ, ಈ ಬಗ್ಗೆ ನಾವು ಆಲೋಚಿಸಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿಯರಾದ ಸಹನ, ಮೇಘನ ಮತ್ತು ರಾಧಾ ಇವರು ‘ಪರಿಸರದ ಪ್ರಶ್ನೆ!’ ಎಂಬ ಗೀತೆಯೊಂದನ್ನು ಹಾಡುವ ಮೂಲಕ ಪರಿಸರದ ಮೇಲಿನ ಮನುಷ್ಯರ ದೌರ್ಜನ್ಯವನ್ನು ನೆನಪಿಸಿದರು. ಆ ನಂತರ ಗಿಡಕ್ಕೆ ನೀರು ಹನಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಅತಿಥಿಗಳಿಂದ ಕಾಲೇಜಿನ ಆವರಣದಲ್ಲಿ ಸಸಿಯೊಂದನ್ನು ನೆಡಿಸಿ ನೀರು ಹಾಕಲಾಯಿತು. ರಾಷ್ಟ್ರೀಯ ಸೇವಾ ಯೋಜನೆ ಘಟಕ-2ರ ಕಾರ್ಯಕ್ರಮಾಧಿಕಾರಿ ಡಾ. ಜಯಶ್ರೀ ಬಿ. ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ-1ರ ಕಾರ್ಯಕ್ರಮಾಧಿಕಾರಿ ಡಾ. ಮೋಹನ್ ಕುಮಾರ್ ಎಂ.ಜೆ. ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮವನ್ನೂ ನಿರೂಪಿಸಿದರು. ವಿದ್ಯಾರ್ಥಿ ನಂದನ್ ಜಿ., ದ್ವಿತೀಯ ಬಿ.ಕಾಂ. ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ