ವರದಿ : ಡಿ.ಆರ್.ನರೇಂದ್ರಬಾಬು ಹುಳಿಯಾರು: ಬರೋಬರಿ 33 ಸದಸ್ಯರನ್ನೊಳಗೊಂಡು ಜಿಲ್ಲೆಯಲ್ಲಿಯಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಅತಿ ದೊಡ್ಡ ಪಂಚಾಯ್ತಿ ಎಂದೇ ಖ್ಯಾತಿ ಹೊಂದಿರುವ ಹುಳಿಯಾರಿನ ಗ್ರಾ.ಪಂ. , ಶೀಘ್ರ ಪಟ್ಟಣಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತ ಪ್ರಸ್ತಾಪನೆ ಸರ್ಕಾರದ ಮುಂದೆ ಮತ್ತೆ ಬಂದಿದೆ. ಹುಳಿಯಾರು ಗ್ರಾ.ಪಂ. ಕಾರ್ಯಾಲಯ. ಹುಳಿಯಾರು ಗ್ರಾ.ಪಂ.ಯನ್ನು ಪಟ್ಟಣಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಬಂದಿರುವ ಸುತ್ತೋಲೆ. ಅರ್ಹತೆ: ಪುರಸಭೆಯ ಅಧಿನಿಯಮದ ಪ್ರಕಾರ ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ಗ್ರಾ.ಪಂ. ಜನಸಂಖ್ಯೆ 10,000ಕ್ಕೆ ಕಡಿಮೆಯಿಲ್ಲದಂತೆ ಹಾಗೂ 20,000ಕ್ಕೆ ಹೆಚ್ಚಿಲ್ಲದಂತೆ ಇರಬೇಕು. ಜನಸಾಂದ್ರತೆಯು ಆ ಪ್ರದೇಶದ ಒಂದು ಚ.ಕಿ.ಮೀ ವೀಸ್ತೀರ್ಣಕ್ಕೆ 400ಕ್ಕಿಂತ ಕಡಿಮೆ ಇಲ್ಲದಿರುವುದು ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡವಾರು ಪ್ರಮಾಣ ಒಟ್ಟು ಉದ್ಯೋಗದ ಪ್ರಮಾಣದ ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಇರಬೇಕು. ಈ ಹಿನ್ನೆಲೆಯಲ್ಲಿ ಹುಳಿಯಾರು ಗ್ರಾ.ಪಂ.ವ್ಯಾಪ್ತಿಯಲ್ಲಿ 2011ರ ಜನಗಣತಿ ಅನ್ವಯ 14,304 ಜನಸಂಖ್ಯೆ ಹೊಂದಿ ಈ ಸಾಲಿನಲ್ಲಿ ಅಂದಾಜು ಹದಿನೆಂಟು ಸಾವಿರ ಜನ ಸಂಖ್ಯೆ ಹೊಂದಿರುವ ಹುಳಿಯಾರು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಪ್ರಸ್ತಾವನ...