ಬರಗಾಲದ ಬೇಗೆಯಿಂದ ಕುಡಿಯುವ ನೀರಿಗಾಗಿ,ಜಾನುವಾರುಗಳಿಗೆ ಮೇವಿಲ್ಲದೆ,ಕೃಷಿಗೆ ನೀರಿಲ್ಲದೆ ಪರಿತಪಿಸುತ್ತಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೇಮಾವತಿ ನದಿ ನೀರನ್ನು ಹರಿಸುವ ಕಾರ್ಯದ ಯೋಜನೆಗೆ ಶೀಘ್ರದಲ್ಲೇ ಟೆಂಡರ್ ಕರೆದು,ಕೆಲಸ ಪ್ರಾರಂಭಿಸುವುದಾಗಿ ತಾ.ಪಂ.ಸದಸ್ಯ ಕೆಂಕೆರೆ ನವೀನ್ ತಿಳಿಸಿದ್ದಾರೆ.
ಹೇಮಾವತಿ ನದಿ ನೀರನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹರಿಸುವ ಯೋಜನೆಯ ಕಾಮಗಾರಿಯನ್ನು ಕಾವೇರಿ ನೀರಾವರಿ ನಿಗಮ ಕೈಗೆತ್ತಿಕೊಂಡಿದ್ದು, ಕಾಮಗಾರಿಯ ಅನುಷ್ಠಾನಕ್ಕಾಗಿ ಟೆಂಡರನ್ನು ಆಹ್ವಾನಿಸಿದ್ದು,ಮುಂದಿನ ಜುಲೈ ತಿಂಗಳಲ್ಲಿ ಟೆಂಡರ್ ಅನುಷ್ಠಾನದ ಕಾರ್ಯ ಸಂಪೂರ್ಣಗೊಂಡು,ಕಾಮಗಾರಿ ಪ್ರಾರಂಭವಾಗುತ್ತದೆ.ಈ ಯೋಜನೆಯಂತೆ ಹೇಮಾವತಿ ನದಿ ನೀರನ್ನು ಚಿಕ್ಕನಾಯಕನಹಳ್ಳಿ ಸೇರಿದಂತೆ ಹುಳಿಯಾರಿಗೆ ಶೆಟ್ಟಿಕೆರೆಯ ಮೂಲಕ ನೈಸರ್ಗಿಕವಾಗಿ,ತುಮಕೂರು ನಾಲೆಯಿಂದ ಗೋಡೆಕೆರೆ ಭಾಗಗಳಿಗೆ ಏತನೀರಾವರಿ ಮೂಲಕ ತಾಲ್ಲೂಕಿನ 36 ಕೆರೆಗಳಿಗೆ ಹೇಮೆ ನೀರು ಹರಿಸಲಾಗುತ್ತದೆ.ಇದಕ್ಕಾಗಿ ಸರ್ಕಾರ ಈಗಾಗಲೇ 102 ಕೋಟಿ ಹಣವನ್ನು ಮೀಸಲಿರಿಸಿದ್ದು,ನೈಸರ್ಗಿಕ ಹಾಗೂ ಏತ ನೀರಾವರಿಯ ಎರಡು ಕಾಮಗಾರಿಗಳನ್ನು ಒಟ್ಟಿಗೆ ಪ್ರಾರಂಭಿಸಲಿದ್ದು, ಕಾಮಗಾರಿಯ ಅನುಷ್ಠಾನಕ್ಕೆ 24 ತಿಂಗಳ ಕಾಲಾವಧಿ ನಿಗಧಿ ಮಾಡಿರುವುದರಿಂದ,ಇನ್ನೂ 2 ವರ್ಷಗಳಲ್ಲಿ ತಾಲ್ಲೂಕಿನಾದ್ಯಂತ ಹೇಮೆ ನೀರು ಪೂರೈಕೆಯಾಗುದರಲ್ಲಿ ಎರಡು ಮಾತಿಲ್ಲ ಎಂದರು.
ಅಲ್ಲದೆ ಈ ಯೋಜನೆಯ ಅನುಷ್ಠಾನದಿಂದಾಗಿ ಸುಮಾರು ಮೂರು ದಶಕಗಳ ಕಾಲದ ಇಲ್ಲಿನ ಜನರ ಕನಸು,ನನಸಾಗುತ್ತಿದ್ದು,ಕೃಷಿ,ನೀರಾವರಿ,ಕುಡಿಯುವ ನೀರಿಗಾಗಿ ಸಾಕಷ್ಟು ನೀರು ದೊರೆಯುತ್ತದೆ.ಈ ಹಿಂದೆ ಇದ್ದಂತಹ ಸರ್ಕಾರವಾಗಲಿ,ಜನಪ್ರತಿನಿಧಿಗಳಾಗಲಿ ಬರಿ ಬಾಯಿ ಮಾತಿಗೆ ಹೇಮೆ ನೀರು ಹರಿಸುವುದಾಗಿ ತಿಳಿಸುತ್ತಿದ್ದರು.ಆದರೆ ಇಂದು ಹೇಮಾವತಿ ನದಿ ನೀರು ಹರಿಸುವ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ,
ತಾಲ್ಲೂಕಿನಾದ್ಯಂತ ನೀರಿನ ಆಭಾವದಿಂದ ಕೆರೆ,ಬಾವಿಗಳು ಬತ್ತಿ ಹೋಗಿದ್ದು, ಕೆಲ ರೈತರು ವ್ಯವಸಾಯಕ್ಕಾಗಿ ಸಾಲಸೋಲ ಮಾಡಿ ಎಂಟೂನೂರು,ಸಾವಿರ ಅಡಿ ಬೋರ್ ಕೋರೆಸಿದರು ಹನಿ ನೀರು ದೊರೆಯುದೆ,ಅಂತರ್ಜಲವೆಲ್ಲ ಬತ್ತಿದ್ದು ಜನರನ್ನು ಚಿಂತೆಗೀಡು ಮಾಡಿದ್ದು,ಅಲ್ಲದೆ ಇಲ್ಲಿನ ನೀರಿನಲ್ಲಿ ಸಾಕಷ್ಟು ಪ್ಲೋರೈಡ್ ಅಂಶವಿದ್ದು ಕುಡಿಯಲು ಯೋಗ್ಯವಾಗಿಲ್ಲದ ನೀರನ್ನೇ ಕುಡಿಯುವಂತ ಪರಿಸ್ಥಿತಿಯಿತ್ತು. ಇದನ್ನೆಲ್ಲಾ ಮನಗಂಡ ಬಿಜೆಪಿ ಸರ್ಕಾರ ಈವೊಂದು ಮಹತ್ವದ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ