ಇಂದು ಕೊಬ್ಬರಿಗೆ ಉತ್ತಮ ಬೆಲೆ ದೊರೆಯದೆ ತೆಂಗು ಬೆಳೆಗಾರರು ಪರಿತಪಿಸುತ್ತಿದ್ದು, ತೆಂಗಿನ ಮರಗಳೆಲ್ಲಾ ರಸ ಸೋರಿ ಧರೆಗುಳುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅದರಲ್ಲಿಯೋ ಇರುವ ತೆಂಗಿನಿಂದ ದೊರೆಯುವಂತಹ ಕೊಬ್ಬರಿಗೆ ಹಾಲಿ ಮಾರುಕಟ್ಟೆಯಲ್ಲಿರುವ ದರ ತುಂಬಾ ಕಡಿಮೆಯಿದ್ದು,ರಾಜ್ಯ ಸರ್ಕಾರ ಕೊಡುವ ಪ್ರೋತ್ಸಾಹ ಧನವನ್ನು ಹೆಚ್ಚಿಸಿ ತೆಂಗು ಬೆಳೆಗಾರರನ್ನು ರಕ್ಷಿಸುವಂತೆ ರೈತಸಂಘದ ನಿಯೋಗ ಮಾನ್ಯ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಬಳಿ ತೆರಳಿ ಮನವಿ ಸಲ್ಲಿಸಿ,ಒತ್ತಾಯಿಸಿದ್ದಾರೆ..
ಇಂದು ಒಂದು ಕ್ವಿಂಟಲ್ ಕೊಬ್ಬರಿ ಉತ್ಪಾದಿಸಲು ರೈತರಿಗೆ ಸುಮಾರು 10 ಸಾವಿರ ರೂ. ಖರ್ಚು ಬರುತ್ತಿದ್ದು, ಮಾರುಕಟ್ಟೆ ಮಧ್ಯವರ್ತಿಗಳಾ ಹಾವಳಿಯಿಂದ ಕೇವಲ ಐದಾರು ಸಾವಿರದ ದರವಿದೆ. ಇದರಿಂದ ಕೊಬ್ಬರಿ ಬೆಳೆಗಾರರು ಸಂಕಷ್ಟದ ಸ್ಥಿತಿಯಲ್ಲಿದ್ದು ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸುವ ಅಗತ್ಯವಿದೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ನೇತೃತ್ವದಲ್ಲಿ ತಿಪಟೂರು, ಚಿ.ನಾ.ಹಳ್ಳಿ ರೈತ ಸಂಘದ ಪದಾಧಿಕಾರಿಗಳು ಬೆಂಗಳೂರಿನ ಅನುಗ್ರಹದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿವರಿಸಿದರು.
ಕರ್ನಾಟಕ ರಾಜ್ಯದ 13 ಜಿಲ್ಲೆಗಳ 114 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಸರ್ಕಾರವೇ ಘೋಷಿಸಿದ್ದು,ಈ ಪ್ರದೇಶಗಳಲ್ಲಿ ಹೆಚ್ಚು ತೆಂಗು ಬೆಳೆಗಾರರಿದ್ದು, ಕೊಬ್ಬರಿ ಬೆಳೆಯನ್ನು ನಂಬಿ ಜೀವನನಡೆಸುತ್ತಿದ್ದಾರೆ. ಅಲ್ಲದೆ ಮಳೆಯನ್ನೇ ನಂಬಿ ಇಲ್ಲಿ ಕೊಬ್ಬರಿ ಬೆಳೆಯಲಾಗುತ್ತಿದೆಯೇ ವಿನಃ ಇಲ್ಲಿ ಯಾವುದೇ ಶಾಶ್ವತ ನೀರಿನ ವ್ಯವಸ್ಥೆ ಇರುವುದಿಲ್ಲ. ಅಲ್ಲದೆ ಸರಿಯಾಗಿ ಮಳೆಯಾಗದೇ ಬರದ ಬರೆ ಕೊಬ್ಬರಿ ಬೆಳೆಗಾರ ಗಾಯದ ಮೇಲೆ ಬರೆ ಎಳೆದಂತಾಗಿದೆ.ಇದನ್ನು ಮನಗಂಡ ಸರ್ಕಾರ ನೆರವಿಗೆ ಬಂರುವ ಅಗತ್ಯವಿದೆ ಎಂದರು.
1500 ರೂ. ಪ್ರೋತ್ಸಾಹ ಧನ : ಕಳೆದ ವಾರ ಕೇಂದ್ರ ಸರ್ಕಾರವು ಕೊಬ್ಬರಿಗೆ 5350 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಆದರೆ ಈ ಬೆಲೆಯು ಅವೈಜ್ಞಾನಿಕ ಹಾಗೂ ತೀರಾ ಕಡಿಮೆ ಆಗಿದ್ದು. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ ಕೂಡಲೇ ರಾಜ್ಯ ಸರ್ಕಾರವೂ ಪ್ರೋತ್ಸಾಹ ಧನ ಘೋಷಿಸಬೇಕಿತ್ತು. ಆದರೆ ರಾಜ್ಯ ಸರ್ಕಾರ ಇದುವರೆವಿಗೂ ಪ್ರೋತ್ಸಾಹ ಧನ ಘೋಷಿಸದೇ ಸುಮ್ಮನಿದೆ.ಇದರ ಹಿಂದಿರುವ ವಿಷಯ ಬಹುಶಃ ಕಳೆದ ವರ್ಷ ಘೋಷಿಸಿದ 600 ರೂ. ಗಳಿಗೆ ಸೀಮಿತಗೊಳಿಸಿದಂತೆ. ಆದರೆ ಇಂದಿನ ಬೆಳೆಯುತ್ತಿರುವ ಜಗತ್ತಿನಲ್ಲಿ ಪ್ರತಿ ವಸ್ತುಗಳ ಬೆಲೆ ಗಗನ ಮುಟ್ಟುತ್ತಿರುವ ಹಿನ್ನಲೆಯಲ್ಲಿ 600ರೂ ಏತಕ್ಕೆ ಸಾಲುತ್ತದೇ,ಆದ್ದರಿಂದ ಸರ್ಕಾರ ಇಂದಿನ ಸ್ಥಿತಿಗತಿಯನ್ನು ಪರಾಮರ್ಷಿಸಿ ಕ್ವಿಂಟಾಲಿಗೆ 1500 ರೂ.ಗಳಿಗೆ ಏರಿಸಿದರೆ ತೆಂಗುಬೆಳೆಗಾರರು ಉಸಿರಾಡಬಹುದು,ಇಲ್ಲವಾದರೆ ತೀರಾ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ ಹಾಗಾಗಿ 1500 ಬೆಂಬಲ ಬೆಲೆ ನೀಡಬೇಕೆಂದರು.
ದೇಶದಾದ್ಯಂತ ಕೊಬ್ಬರಿಗೆ ಉತ್ತಮ ಬೇಡಿಕೆಯಿದ್ದು, ಹೊರ ರಾಜ್ಯದಲ್ಲಿ ಉತ್ತಮ ಬೆಲೆಯಿದೆ. ಆದರೆ ರಾಜ್ಯದಲ್ಲಿ ಕೆಲವೇ ಕೆಲವು ವ್ಯಾಪಾರಸ್ಥರ ,ಮಧ್ಯವರ್ತಿಗಳ ಹಿಡಿತದಿಂದ ತಮಗಿಷ್ಟದ ದರ ನಿಗಧಿ ಮಾಡುತ್ತಾರೆ. ಕೆಲವೊಮ್ಮೆ ರೈತರಿಗೆ ಮಕುಮಲ್ ಕೋಪಿಯನ್ನು ಹಾಕುತ್ತಾರೆ.ಅಂದರೆ ಕೆಲವೊಂದು ಸಲ ಉತ್ತಮ ಬೆಲೆಯನ್ನು ಘೋಷಿಸಿರುತ್ತಾರೆ,ಇದನ್ನು ಕಂಡ ರೈತರು ಮರುದಿನ ಹೆಚ್ಚಿನ ಕೊಬ್ಬರಿಯನ್ನು ಮಾರುಕಟ್ಟೆಗೆ ತಂದರೆ ಇಂದು ರೇಟ್ ಡೌನಾಗಿದೆ ಎಂದು ಹೇಳುವುದಲ್ಲದೆ, ನಾಲೆ ಇನ್ನೂ ಕಡಿಮೆಯಾಗಬಹುದು ಎನ್ನುತ್ತಾರೆ. ಸರ್ಕಾರ ಸರಿಯಾದ ಸಮಯದಲ್ಲಿ ನ್ಯಾಫೆಡ್ ತೆರೆದರೆ ಇಂದು ರೈತರಿಗಾಗುತ್ತಿರುವ ಅನ್ಯಾಯವನ್ನು ತಪ್ಪಿಸುವುದಲ್ಲದೆ, ವ್ಯಾಪಾರಸ್ಥರಿಂದ ರೈತರಿಗಾಗುವ ಮೋಸವನ್ನು ತಡೆದಂತಾಗುತ್ತದೆ. ಅದಕ್ಕಾಗಿ ಸರ್ಕಾರ ಎಲ್ಲಾ ಕೊಬ್ಬರಿ ಮಾರುಕಟ್ಟೆಯಲ್ಲಿ ಶಾಶ್ವತ ನ್ಯಾಫೆಡ್ ಕೇಂದ್ರ ತೆರೆದು ತೆಂಗುಬೆಳೆಗಾರರಿಗೆ ನೆರವು ನೀಡಬೇಕಿದೆ.
ಸಿಎಂ ನೆರವಿನೆ ಭರವಸೆ: ಇಂದು ದೇಶದ ಆಸ್ತಿ ರೈತ ಆತನ ಸಮಸ್ಯೆಯನ್ನು ಮೊದಲು ಪರಿಹರಿಸಬೇಕು,ರೈತರ ಸುಖ ಸಂತೋಷದಿಂದಿದ್ದರೆ ಈಡಿ ದೇಶವೇ ಹಸನಾಗಿರುತ್ತದೆ ಎಂದರು.ಅಲ್ಲದೆ ತೆಂಗು ಬೆಳೆಗಾರರ ಸಮಸ್ಯೆ ಹಾಗೂ ಒತ್ತಾಯವನ್ನು ಗಮನವಿಟ್ಟು ಆಲಿಸಿದ ಮುಖ್ಯ ಮಂತ್ರಿಗಳು ರೈತರ ಎಲ್ಲಾ ಸಮಸ್ಯೆಗಳಿಗೆ ಒಂದೆರಡು ಮಾತುಗಳಲ್ಲಿ ಉತ್ತರಿಸಿ,ಸಮಾದಾನ ಮಾಡಿ ಕಳುಹಿಸಿಕೊಟ್ಟರು. ತಾನು ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಕೇಂದ್ರ ಸರ್ಕಾರದಿಂದಲೇ ಮತ್ತೊಷ್ಟು ಬೆಂಬಲ ಬೆಲೆ ಹೆಚ್ಚಿಸಲು ಕೃಷಿ ಸಚಿವರ ಜೊತೆ ಚರ್ಚಿಸುವುದಾಗಿ ತಿಳಿಸಿದರು.ಅಲ್ಲದೆ ಶಾಶ್ವತ ನ್ಯಾಫೆಡ್ ತೆರೆಯುವ ಜೊತೆಗೆ ಪ್ರೋತ್ಸಾಹಧನ ಹೆಚ್ಚಿಸುವ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಕೊಬ್ಬರಿ ಬೆಳೆಗಾರರಿಗೆ ನೆರವಾಗುವ ರೀತಿ ಉತ್ತಮ ತಿರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು.
ಮುಖ್ಯಮಂತ್ರಿಗಳ ಬಳಿಗೆ ತೆರಳಿದ್ದ ನಿಯೋಗದಲ್ಲಿ ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತೀಶ್, ಜಿಲ್ಲಾಧ್ಯಕ್ಷ ಬಿ.ಎಸ್.ದೇವರಾಜು, ಜಿಲ್ಲಾ ಸಂಚಾಲಕ ಶಿವಶಂಕರಪ್ಪ, ಚಿ.ನಾ.ಹಳ್ಳಿ ತಾಲೂಕು ರೈತ ಸಂಘದ ಗೌ ಅಧ್ಯಕ್ಷ ತಿಮ್ಮನಹಳ್ಳಿಲೋಕಣ್ಣ, ಅಧ್ಯಕ್ಷ ಕೆ.ಪಿ.ಮಲ್ಲೇಶಯ್ಯ, ಹೋಬಳಿ ಅಧ್ಯಕ್ಷ ತಮ್ಮಡಿಹಳ್ಳಿಮಲ್ಲಿಕಾರ್ಜುನಯ್ಯ, ಸಾವಯವ ಕೃಷಿ ಪರಿವಾರದ ನಂಜುಂಡಯ್ಯ, ನಾಗೇಂದ್ರಪ್ಪ, ಕಾಡೇನಳ್ಳಿ ಗಂಗಣ್ಣ, ಜಗಧೀಶ್ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ