ಹುಳಿಯಾರು ಭಾಗದಲ್ಲಿ ಕೋಟಿ ರೂ ಗೂ ಅಧಿಕ ವಂಚನೆ
ಹುಳಿಯಾರು:ಕಾರು,ಲಾರಿ ಮುಂತಾದ ವಾಹನಗಳ ಮೇಲೆ ಕಂಪನಿಗಳ ಪ್ರಚಾರದ ಸ್ಟಿಕ್ಕರ್ ಅಂಟಿಸಿದರೆ ಪ್ರತಿ ತಿಂಗಳು ಇಂತಿಷ್ಟು ಹಣ ಪಾವತಿ ಮಾಡುತ್ತೇವೆ ಹಾಗೂ ಇದಕ್ಕಾಗಿ ಜಿಪಿಎಸ್ ಅಳವಡಿಸಲು ವಾಹನ ಮಾಲಿಕರು ತಲಾ ೨೫ ಸಾವಿರ ಠೇವಣಿ ನೀಡಬೇಕು ಎಂದು ಮರುಳು ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದ ರಾಜಸ್ಥಾನ ಮೂಲದ ವೀರೇಂದ್ರ ಶರ್ಮನನ್ನು ಹುಳಿಯಾರು ಹೋಬಳಿ ಲಕ್ಕೇನಹಳ್ಳಿ ಗ್ರಾಮಸ್ಥರು ಪೋಲಿಸರ ವಶಕ್ಕೆ ನೀಡಿದ್ದಾರೆ.
ಆರೋಪಿ ವೀರೇಂದ್ರ ಶರ್ಮ |
ವಂಚಕ ವೀರೇಂದ್ರ ಶರ್ಮ ತುಮಕೂರಿನ ಶಿರಾ ರಸ್ತೆಯಲ್ಲಿ ನನಸು ಕ್ರಿಯೇಷನ್ ಎಂಬ ಹೈಟೆಕ್ ಕಛೇರಿ ತೆರೆದು ಕಾರು ಹೊಂದಿರುವ ಗ್ರಾಹಕರಿಗೆ "ಕಾರು ಓಡಿಸಿ-ಹಣ ಗಳಿಸಿ"ಎಂಬ ಸ್ಕೀಮ್ ಆರಂಭಿಸಿದ್ದ.ಕಾರುಗಳ ಮಾಲಿಕರುಗಳಿಗೆ ತಮ್ಮ ಕಾರುಗಳ ಮೇಲೆ ವಿವಿಧ ಕಂಪನಿಗಳ ಪ್ರಚಾರದ ಸ್ಟಿಕ್ಕರ್ ಅಂಟಿಸಿಕೊಂಡರೆ ಪ್ರತಿತಿಂಗಳು ನಿಗದಿಯಾದ ಹಣ ಪಾವತಿಸುವ ಆಮೀಷ ಒಡ್ಡಿ ಇದಕ್ಕಾಗಿ ಇಂತಿಷ್ಟು ಹಣ ಮುಂಗಡವಾಗಿ ಕಾರು ಮಾಲೀಕರು ನೀಡಬೇಕೆಂದು ತಿಳಿಸಿ ಪ್ರತಿ ಹಳ್ಳಿಹಳ್ಳಿಗಳಲ್ಲೂ ವ್ಯಾಪಕ ಪ್ರಚಾರ ನಡೆಸಿದ್ದ.
ಕಾರಿನ ಬೆಲೆ ೪.೫ ಲಕ್ಷವಿದ್ದರೆ ೨೫ ಸಾವಿರ ಠೇವಣಿ ವಾಹನ ಮಾಲೀಕರು ನೀಡಿದಲ್ಲಿ ಪ್ರತಿ ತಿಂಗಳು ಆರು ಸಾವಿರ ರೂಪಾಯಿ ಹಣ ಪಾವತಿ ಮಾಡುವುದಾಗಿಯೂ ಹಾಗೂ ಅದಕ್ಕೂ ಮೇಲ್ಪಟ್ಟ ವಾಹನದವರು ಐವತ್ತುಸಾವಿರ ಠೇವಣಿ ಇಟ್ಟಲ್ಲಿ ಪ್ರತಿತಿಂಗಳು ೮.೫ ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದ.
ವಂಚಕ ವೀರೆಂದ್ರ ಶರ್ಮ ಹುಳಿಯಾರು ಸಮೀಪದ ತಿಮ್ಮನಹಳ್ಳಿ ಹಾಗೂ ಲಕ್ಕೇನಹಳ್ಳಿಯಲ್ಲಿ ಎರಡು ವಿವಾಹವಾಗಿದ್ದು ತನ್ನ ಪತ್ನಿಯರ ಮೂಲಕವೂ ಈ ಭಾಗದಲ್ಲಿ ಪ್ರಚಾರ ಮಾಡಿಸಿದ್ದ.ಈತನ ಮಾತಿಗೆ ಮರುಳಾದ ವಾಹನಗಳ ಮಾಲೀಕರು ೨೫ ಹಾಗೂ ೫೦ ಸಾವಿರದಂತೆ ಈತನ ಬಳಿ ಠೇವಣಿ ಇಟ್ಟು ತಮ್ಮ ಕಾರುಗಳ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡಿದ್ದರು.ಶುರುವಿನಲ್ಲಿ ಎರಡುಮೂರು ತಿಂಗಳು ಆಯ್ದ ಮಾಲೀಕರಿಗೆ ಹಣ ಪಾವತಿಸಿದ ಈತ ನಂತರ ಸಬೂಬುಗಳನ್ನು ಹೇಳಿ ದಿನದೂಡಿದ.
ಕಳೆದ ಎರಡುಮೂರು ತಿಂಗಳಿನಿಂದ ನಾಪತ್ತೆಯಾಗಿದ್ದ.ಈತನ ಸುಳಿವರಿಯದೆ ಕಂಗೆಟ್ಟ ವಾಹನಗಳ ಮಾಲೀಕರು ಬೇಸತ್ತು ಸ್ಟಿಕ್ಕರ್ ಕಿತ್ತಸೆದು ಸುಮ್ಮನಾಗಿದ್ದರು.
ಆದರೆ ಅಚಾನಕ್ಕಾಗಿ ಬುಧವಾರ ಮುಂಜಾನೆ ಹುಳಿಯಾರು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದಲ್ಲಿದ್ದ ಪತ್ನಿಯ ಮನೆಗೆ ಆಗಮಿಸಿದ್ದ ಈತನ ಸುಳಿವರಿತ ಗ್ರಾಮಸ್ಥರು ಈತನನ್ನು ಥಳಿಸಿ ಹುಳಿಯಾರು ಪೋಲಿಸರಿಗೆ ಒಪ್ಪಿಸಿದ್ದಾರೆ.ಸುದ್ದಿ ಹಬ್ಬಿ ಮೋಸ ಹೋದ ಕಾರಿನ ಮಾಲೀಕರುಗಳು ಹುಳಿಯಾರು ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ.
ಆದರೆ ಈತನ ಕಛೇರಿ ತುಮಕೂರಿನಲ್ಲಿರುವುದರಿಂದ ಹುಳಿಯಾರು ಪೋಲಿಸರು ಪ್ರಕರಣವನ್ನು ತುಮಕೂರಿಗೆ ವರ್ಗಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ