ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿಯ ಹಲವೆಡೆ ಶುಕ್ರವಾರದಂದು ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ಮಲ್ಲೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ,ಗಾಂಧಿಪೇಟೆಯ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ, ವಿಪ್ರ ಸಮಾಜದ ಸೀತಾರಾಮ ಕಲ್ಯಾಣ ಮಂದಿರದಲ್ಲಿ, ತಿರುಮಲಾಪುರದ ಚಂದ್ರಮೌಳೇಶ್ವರ ದೇಗುಲದಲ್ಲಿ, ಕೆಂಕೆರೆಯ ಕಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ,ಸೂರಗೊಂಡನಹಳ್ಳಿಯ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಪರಶಿವನಿಗೆ ಮುಂಜಾನೆಯಿಂದಲೇ ವಿಶೇಷ ಪೂಜಾಕೈಂಕರ್ಯಗಳು ನಡೆಯಿತು. ಶಿವಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಂಚಾಮೃತಾಭಿಷೇಕ, ಜಾವದ ಪೂಜೆ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.ಎಲ್ಲಡೆಯೂ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು.ಎಲ್ಲಾ ದೇವಾಲಯಗಳಲ್ಲೂ ಬೆಳಿಗ್ಗೆಯಿಂದಲೇ ಭಕ್ತರು ತೆರಳಿ ಶಿವನ ದರ್ಶನ ಪಡೆಯುತ್ತಿದಿದ್ದು ಸಾಮಾನ್ಯವಾಗಿತ್ತು.
ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಪ್ರಾರಂಭವಾದ ದರ್ಶನದಲ್ಲಿ ಅಲಂಕೃತ ಸ್ವಾಮಿಯನ್ನು ನೋಡಲು ಅಪಾರ ಸಂಖ್ಯೆಯ ಭಕ್ತಾಧಿಗಳು ತಂಡೋಪತಂಡವಾಗಿ ಆಗಮಿಸಿದ್ದು , ಸರದಿ ಸಾಲಿನಲ್ಲಿ ಸಾಗುವ ಮೂಲಕ ಸ್ವಾಮಿಯ ದರ್ಶನ ಪಡೆದು ಹಣ್ಣುಕಾಯಿ ಮಾಡಿಸಿದರು.ಬೆಳಗಿನಜಾವ ಅರ್ಚಕ ವೀರೇಶ್ ಪೌರೋಹಿತ್ಯದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹನ್ಯಾಸಪೂರಕ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಈ ವೇಳೆ ಮಲ್ಲೇಶ್ವರಸ್ವಾಮಿ ದೇವಾಲಯ ಸಮಿತಿ ಹಾಗೂ ಟ್ರಸ್ಟ್ ನ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಜೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೀತಕ್ಕನವರು ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಮಹಾಶಿವರಾತ್ರಿಯ ಬಗ್ಗೆ ಹಾಗೂ ಆಧ್ಯಾತ್ಮಿಕ ವಿಚಾರಧಾರೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.ಅಕ್ಕಮಹಾದೇವಿ ಮಹಿಳಾ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶಿವ ದರ್ಶನ ಪಡೆದ ಭಕ್ತರು ಪಕ್ಕದಲ್ಲಿಯ ಗಣಪತಿ ದೇವಾಲಯಕ್ಕೂ ಭೇಟಿ ನೀಡುತ್ತಿದ್ದು ಎರಡೂ ದೇವಾಲಯಗಳು ಕಿಕ್ಕಿರಿದ ಭಕ್ತರಿಂದ ತುಂಬಿತುಳುಕುತ್ತಿತ್ತು. ಗಣಪತಿಗೆ ಮಾಡಿದ್ದ ಬೆಣ್ಣೆ ಅಲಂಕಾರ ಎಲ್ಲರ ಗಮನ ಸೆಳೆಯಿತು.
ಶಿವರಾತ್ರಿ ಪ್ರಯುಕ್ತ ಪಟ್ಟಣದ ಬನಶಂಕರಿ,ಹುಳಿಯಾರಮ್ಮ,ದುರ್ಗಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಶಿವರಾತ್ರಿ ಶಿವಭಕ್ತರಿಗೆ ಅತ್ಯಂತ ಪವಿತ್ರ ದಿನವಾಗಿದ್ದು ಹೆಚ್ಚಿನ ಭಕ್ತಾಧಿಗಳು ದಿನವಿಡಿ ಉಪವಾಸ, ಜಾಗರಣೆ ಕೈಗೊಂಡು, ಶಿವನಾಮ ಭಜಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ