ಮಾರ್ಚ್ ಅಂತ್ಯದವರೆಗೆ ಮೇವು ಲಭ್ಯ: ಮೇವಿನ ಸಮಸ್ಯೆ ಪರಿಹರಿಸಲು ಮೇವು ಬೆಳೆಯಲು ಸೂಚನೆ
ಹುಳಿಯಾರು: ತಾಲ್ಲೂಕಿನಲ್ಲಿ ಒಟ್ಟು ೬ ಗೋಶಾಲೆಗಳನ್ನು ತೆರೆಯಲಾಗಿದ್ದು ಮಾರ್ಚ್ ತಿಂಗಳಿನವರೆಗೆ ಮೇವಿನ ಸಮಸ್ಯೆ ತಲೆದೋರದಂತೆ ತಾಲ್ಲೂಕ್ ಆಡಳಿತ ನಿಭಾಯಿಸಲಿದ್ದು ಮುಂಜಾಗ್ರತೆಯಾಗಿ ಬೋರನಕಣಿವೆ ಕಣಿವೆ ಜಲಾಶಯದ ನೀರು ಬಳಸಿ ಅಚ್ಚುಕಟ್ಟುದಾರರು ಮೇವು ಬೆಳದಲ್ಲಿ ಹೆಚ್ಚಿನ ಸಮಸ್ಯೆ ತಲೆದೋರದಂತೆ ಬರನಿರ್ವಹಣೆ ಮಾಡಬಹುದಾಗಿದ್ದು ರೈತರು ಸಹಕರಿಸುವಂತೆ ಶಾಸಕ ಸಿ.ಬಿ.ಸುರೇಶ್ ಬಾಬು ರೈತರಲ್ಲಿ ಮನವಿ ಮಾಡಿದರು.
ಬರ ನಿರ್ವಹಣೆಗೆ ಸಂಬಂಧಪಟ್ಟಂತೆ ಬೋರನಕಣಿವೆ ವ್ಯಾಪ್ತಿಯ ಗಾಣಧಾಳು,ಹೊಯ್ಸಳಕಟ್ಟೆ,ದಸೂಡಿ ಭಾಗದಲ್ಲಿ ಜಲಾಶಯದ ನೀರು ಹರಿಸಿ ಮೇವು ಬೆಳೆಯಲು ರೈತರ ಮನವೊಲಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ಕಾರೇಹಳ್ಳಿ ದೇವಸ್ಥಾನದ ಆವರಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕ್ ಆಡಳಿತದಿಂದ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ತಾಲ್ಲೂಕಿನ ಗೋಶಾಲೆಗಳಲ್ಲಿ ಸಧ್ಯಕ್ಕೆ ಮೇವಿನ ಲಭ್ಯತೆಯಿದ್ದು ರಾಜ್ಯದೆಲ್ಲೆಡೆ ತೀವ್ರ ಬರ ಪರಿಸ್ಥಿತಿ ತಲೆದೋರಿರುವುದರಿಂದ ಎಲ್ಲೂ ಮೇವು ಸಿಗದ ಪರಿಸ್ಥಿತಿ ಇದೆ.ಹೊರರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದಲ್ಲೂ ಮೇವು ತರಲಿಕ್ಕೆ ನಿರ್ಬಂಧವಿದೆ.ಹೀಗಾಗಿ ನಮಗೆ ಮೇ ತಿಂಗಳ ಕಡೆಯವರೆಗೂ ಮೇವು ಸರಬರಾಜು ಮಾಡಲು ಟೆಂಡರ್ ಪಡೆದಿದ್ದ ವ್ಯಕ್ತಿ ಮಾರ್ಚ್ ೧೫ರವರೆಗಷ್ಟೆ ಮೇವು ಸರಬರಾಜು ಮಾಡಲುಸಾಧ್ಯ ಎಂದು ಕೈಚೆಲ್ಲಿದ್ದಾನೆ.ಪರಿಸ್ಥಿತಿ ನಿಭಾಯಿಸಲು ಮೇವು ಬೆಳೆಯುವುದೊಂದೆ ಮಾರ್ಗವಾಗಿದ್ದು ಬೋರನಕಣಿವೆ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರದ ಮೇಲೆ ಈ ನೀರು ಬಳಸಿಕೊಂಡು ಬೆಳೆ ಬೆಳೆದಲ್ಲಿ ಜಾನುವಾರುಗಳನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.
ಸರ್ಕಾರ ನೀರು ಹಾಗೂ ಮೇವಿನ ಬೀಜ ಏರ್ಪಾಡು ಮಾಡಲಿದ್ದು ಅಚ್ಚುಕಟ್ಟು ಪ್ರದೇಶದ ರೈತರು ನೀರನ್ನು ತೆಂಗು-ಅಡಿಕೆಗೆ ಬಳಸದೆ ಮೇವಿಗೆ ಮಾತ್ರ ಬಳಸಿ ಬೆಳದಲ್ಲಿ ಸರ್ಕಾರವೇ ಮೇವಿಗೆ ಸೂಕ್ತ ಬೆಲೆ ಕೊಟ್ಟು ಖರೀದಿಸಲಿದೆ ಎಂದರು.ಸಧ್ಯಕ್ಕೆ ಬೋರನಕಣಿವೆ ಜಲಾಶಯದಲ್ಲಿ ನೀರಿನ ಲಭ್ಯತೆಯಿದ್ದು ಜೂನ್ ತಿಂಗಳವರೆಗೆ ಹುಳಿಯಾರು ಹಾಗೂ ಈ ಭಾಗದ ಆರು ಗ್ರಾಮಗಳಿಗೆ ನೀರು ಒದಗಿಸಬಹುದಾಗಿದೆ. ಮೇವು ಬೆಳಯಲು ತೊಂದರೆಯಿಲ್ಲ ಎಂದು ನೀರಾವರಿ ಇಲಾಖಾ ಅಧಿಕಾರಿಗಳು ವರದಿ ನೀಡಿದ್ದು ಈ ಭಾಗದ ರೈತರೆಲ್ಲಾ ಮೇವು ಬೆಳೆಯುವತ್ತ ಗಮನಹರಿಸಬೇಕೆಂದು ಮನವಿ ಮಾಡಿದರು.ಹಾಲಿ ಮೇವಿನ ಲಭ್ಯತೆ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ.ಆದರೆ ಮಾರ್ಚ ನಂತರದ ದಿನಗಳಲ್ಲಿ ಸಮಸ್ಯೆ ಎದುರಾಗುವುದರಿಂದ ಇಂದು ತುರ್ತಾಗಿ ಸಭೆ ಕರೆಯಲಾಗಿದೆ ಎಂದರು.
ಶಾಸಕರ ಮಾತು ಮುಗಿಯುವ ಮುನ್ನವೇ ಮಳೆ ಬರುವವರೆಗೂ ಮೇವು ನೀಡಲೇಬೇಕು,ಹಾಗೂ ಕಳೆದೆರಡು ದಿನಗಳಿಂದ ನಿಲ್ಲಿಸಲಾಗಿದ್ದ ಸಂಜೆ ವೇಳೆಯ ಮೇವು ವಿತರಣೆಯನ್ನು ಕೂಡಲೇ ಪುನರಾರಂಭಿಸಬೇಕೆಂದು ಸಭೆಯಲ್ಲಿ ಗದ್ದಲ ಏರ್ಪಟ್ಟಿತು.ದೇಶದ ಬೆನ್ನೆಲುಬು ರೈತ ಎಂದು ಹೇಳುವ ಸರ್ಕಾರ ರೈತರ ಬೆನ್ನುಮುರಿದಿದ್ದು ರೈತರ ಜಾನುವಾರುಗಳಿಗೂ ಮೇವು ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ನಿರ್ಲಕ್ಷ್ಯದ ಪರಮಾವಧಿ ಎಂದು ರೊಚ್ಚಿಗೆದ್ದರು.ನಮಗೆ ನಿತ್ಯ ೭ ಕೇಜಿ ಮೇವು ಪೂರೈಸಲೇಬೇಕು.ನಾವೇನು ಇಲ್ಲಿ ಗೋಶಾಲೆ ತೆರೆಯಿರಿ ಎಂದು ಅರ್ಜಿ ಹಾಕಿರಲಿಲ್ಲ.ಖುದ್ದು ಜಿಲ್ಲಾಧಿಕಾರಿಗಳೆ ೭ ಕೇಜಿ ಮೇವು ಕೊಡಿ ಎಂದು ಹೇಳಿಹೋಗಿದ್ದರೂ ನೀವುಗಳು ಸಾಧ್ಯವಿಲ್ಲ ಎಂದು ಹೇಳಿದರೆ ಇಲ್ಲೇ ದನಕರುಗಳನ್ನು ಬಿಟ್ಟು ತೆರಳುವುದಾಗಿ ಹರಿಹಾಯ್ದರು.ಒಂದು ಹಂತದಲ್ಲಿ ಯಾರೇನು ಹೇಳುತ್ತಿದ್ದಾರೆ ಎಂದು ಕೇಳದಷ್ಟು ಗದ್ದಲವಾಗಿ ಶಾಸಕರು ಸಮಾಧಾನ ಕಳೆದುಕೊಳ್ಳುವಂತಾಯಿತು.
ಸಮಸ್ಯೆ ಬಗ್ಗೆ ಸಮಾಧಾನಚಿತ್ತವಾಗಿ ಆಲಿಸಿದ ಅಪರ ಜಿಲ್ಲಾಧಿಕಾರಿ ಅನಿತಾ ಮೇವು ಬೇಳೆಯುವ ಅನಿವಾರ್ಯತೆ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಗದ್ದಲದಲ್ಲೇ ನಡೆದ ಸಭೆಯಲ್ಲಿ ರೈತರು ಇಂದಿನ ಸಭೆಯ ಮುಖ್ಯ ಉದ್ದೇಶದ ಬಗ್ಗೆ ಗಮನಕೊಡದೆ ಕಳೆದೊಂದು ವಾರದಿಂದ ಮೇವಿನ ಕೊರತೆಯಿಂದ ಎದುರಾಗಿರುವ ಸಮಸ್ಯೆ ಬಗ್ಗೆಯೇ ಹೆಚ್ಚು ಚರ್ಚಿಸಿದ್ದರಿಂದ ಕಡೆಗೆ ದಿನಂಪ್ರತಿ ಬೆಳಿಗ್ಗೆ ೫ ಕೇಜಿ ಹಾಗೂ ಸಂಜೆ ೨ ಕೇಜಿ ಮೇವು ಕೊಡುವಂತೆಯೂ ಹಾಗೂ ಶೀಘ್ರವೇ ಅಚ್ಚುಕಟ್ಟುದಾರರ ಸಭೆ ಕರೆದು ಮೇವು ಬೇಳೆಯುವ ಬಗ್ಗೆ ಮನವೊಲಿಸಲು ತೀರ್ಮಾನಿಸಲಾಯಿತು.
ಜಿಪಂ ಸದಸ್ಯರುಗಳಾದ ಮಹಾಲಿಂಗಯ್ಯ ಮತ್ತು ಮಂಜುಳಾ, ತಾಲ್ಲೂಕ್ ಪಂಚಾಯ್ತಿ ಸದಸ್ಯರಾದ ಹೆಚ್.ಎನ್.ಕುಮಾರ್,ಇಂದಿರಾ ಕುಮಾರಿ,ಕಲಾವತಿ,ಯತೀಶ್ ಹಾಗೂ ಪ್ರಸನ್ನ ಕುಮಾರ್,ದೇವಸ್ಥಾನ ಆಡಲಿತ ಮಂಡಳಿಯ ಮುಖ್ಯಸ್ಥ ರಂಗಸ್ವಾಮಯ್ಯ,ತಹಸಿಲ್ದಾರ್ ಗಂಗೇಶ್,ಇಓ ಕೃಷ್ಣಮೂರ್ತಿ,ಎಇಇ ಗವೀರಂಗಯ್ಯ,ತಾಲ್ಲೂಕ್ ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು,ಗ್ರಾಪಂ ಸದಸ್ಯರುಗಳು ,ಗಾಣಧಾಳು,ಹೊಯ್ಸಳಕಟ್ಟೆ,ದಸೂಡಿ ಮುಂತಾದ ಭಾಗದ ರೈತರು ಪಾಲ್ಗೊಂಡಿದ್ದರು
------------------
ಈ ಭಾಗವನ್ನು ಬರ ಪೀಡೀತ ಪ್ರದೇಶ ಎಂದು ಘೋಷಿಸಿ ಮೇವಿಗಾಗಿ ಗೋಶಾಲೆ ತೆರದಾಗಲೇ ಮೇವು ಬೆಳೆಯುವ ಬಗ್ಗೆ ಚಿಂತಿಸಿ ಕ್ರಮ ಕ್ರಮಕೈಗೊಳ್ಳಬೇಕಿತ್ತು.ಮೇವಿನ ಕೊರತೆ ಕಾರಣ ಹೇಳಿ ಸಂಜೆ ವೇಳೆ ಕೊಡುತ್ತಿದ್ದ ೨ ಕೇಜಿ ಮೇವನ್ನುಕಡಿತಗೊಳಿಸಿರುವುದು ಸರಿಯಲ್ಲ.ದಿನವೊಂದಕ್ಕೆ ೫ ಕೇಜಿ ಮೇವಿನ ಬದಲು ಎಮ್ದಿನಂತೆ ಏಳು ಕೇಜಿ ಮೇವನ್ನು ಕೊಡಿ.ನಿಮಗೆ ನಿರ್ವಹಣೆ ಮಾಡಲಿ, ಸಾಧ್ಯವಿಲ್ಲ ಎಂದಾದರೆ ಈಗಲೇ ಗೋಶಾಲೆ ಮುಚ್ಚಿ:ದಬ್ಬಗುಂಟೆ ರವಿಕುಮಾರ್,ಮಾಜಿ ಗ್ರಾಪಂ ಅಧ್ಯಕ್ಷ.
---------------------
ಸಚಿವರು ಬರ ನಿರ್ವಹಣೆಗೆ ಹಣ ಬಿಡುಗಡೆ ಮಾಡಿರುವುದಾಗಿ ಹೇಳಿದ್ದು ತಾಲ್ಲೂಕಾಡಳಿತ ಈ ಭಾಗದ ರೈತರಿಗೆ ಯಾವುದೇ ಸಬೂಬು ಹೇಳದೆ ಜಿಲ್ಲಾಧಿಕಾರಿಗಳ ಆದೇಶದಂತೆ ೭ ಕೇಜಿ ಮೇವನ್ನು ವಿತರಿಸಬೇಕು.ಸಧ್ಯಕ್ಕೆ ರೈತರು ಮೇವು ಬೆಳೆಯುವ ಪರಿಸ್ಥಿತಿಯಲ್ಲಿಲ್ಲ.ಯಾವುದೇ ಕಾರಣಕ್ಕೂ ಕೊರತೆ ಬಾರದಂತೆ ಬರ ಪರಿಸ್ಥಿರಿ ನಿಭಾಯಿಸಬೇಕು:ಮಹಾಲಿಂಗಪ್ಪ,ಹೊಯ್ಸಳಕಟ್ಟೆ ಕ್ಷೇತ್ರದ ಜಿಪಂ ಸದಸ್ಯ
-------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ