ನಮ್ಮ ಪರಿಸರದಲ್ಲಿನ ಗಿಡ ಮೂಲಿಕೆಗಳು ಅಪಾರವಾದ ಗುಣ ಪಡಿಸುವ ಸಾಮರ್ಥ್ಯ ಹೊಂದಿದ್ದು. ನಾವು ಆ ಔಷಧೀಯ ಗಿಡ ಮೂಲಿಕೆಗಳನ್ನು ಗುರುತಿಸಿ ದೈನಂದಿನ ಜೀವನದಲ್ಲಿ ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹುಳಿಯಾರಿನ ಆರೋಗ್ಯ ಮಂದಿರದ ಪಂಡಿತ ಬಸವರಾಜು ತಿಳಿಸಿದರು.
ಅವರು ಗುರುವಾಪುರ ಗ್ರಾಮದಲ್ಲಿ ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಘಟಕ ಒಂದು ಹಾಗೂ ಎರಡು ಆಯೋಜಿಸಿದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಪರಿಸರದಲ್ಲಿಯೇ ಇರುವ ವಸ್ತುಗಳನ್ನು ನಾವು ಬಳಸಿಕೊಳ್ಳಬಹುದು.ಉದಾಹರಣೆಗೆ ಎಕ್ಕದ ಹಾಲು ಚೇಳು ಕಡಿತಕ್ಕೆ ಉತ್ತಮ ಔಷಧಿಯಾದರೆ ಗುಳ್ಳದ ಕಾಯಿ ಕಂಠಕ್ಕೆ ಬರುವ ಸಮಸ್ಯೆಗಳನ್ನು ಪರಿಹರಿಸುತ್ತದೆ.ಉತ್ತರಾಣಿ ವಿಷ ಜಂತುಗಳ ಕಡಿತ, ಮೊಡವೆಯಂತಹ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ. ತಂಗಡೆ ಹೂ ಸುಟ್ಟ ಗಾಯ, ಕುದಿವ ನೀರಿನಿಂದ ಸಂಭವಿಸುವ ಗುಳ್ಳೆಗಳಿಗೆ ದಿವ್ಯೌಷಧವಾಗಿದೆ.
ಪಂಚ ಪಲ್ಲವ ದ್ರವ್ಯಗಳ ಕಷಾಯ ಮತ್ತು ಲೇಹ್ಯಗಳಿಂದ ಹೆಚ್ಚು ಕಡಿಮೆ ಎಲ್ಲಾ ರೋಗಗಳನ್ನು ನಿವಾರಿಸಬಹುದು. ಪಂಚ ಪಲ್ಲವ ಎಂದರೆ ಅರಳಿ ಮರ, ಬೇವು, ಬನ್ನಿ, ಅತ್ತಿ ಹಾಗೂ ಬಿಲ್ವಪತ್ರೆ. ಸಾಧಾರಣ ನೆಗಡಿಯಿಂದ ಹಿಡಿದು ಯಾವುದೇ ಹೆಸರಿಲ್ಲದ ಕಾಯಿಲೆಗಳನ್ನು ಕೂಡ ಗುಣಪಡಿಸುವ ಶಕ್ತಿ ಈ ಚಿಗುರುಗಳಿಗೆ ಇದೆ.ಇದೇ ರೀತಿಯ ಇನ್ನೊಂದು ಅದ್ಭುತ ಔಷಧಿ ಅಶ್ವಗಂಧ ಎಂದರು.
ಉಮತ್ತ, ದಾಗಡಿ ಬಳ್ಳಿ, ಹಾಲೆ ಸೊಪ್ಪು, ಹರಳು, ಅಮೃತಬಳ್ಳಿ, ತುಂಬೆ, ತುಳಸಿ,ಗರಿಕೆ ಹೀಗೆ ಹತ್ತು ಹಲವು ಔಷಧೀಯ ಸಸ್ಯಗಳ ಗುಣಲಕ್ಷಣಗಳನ್ನು ,ಮದ್ದು ತಯಾರಿಸುವ ವಿಧಾನಗಳನ್ನು ಅವರು ಶಿಬಿರಾರ್ಥಿಗಳಿಗೆ ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೋರನ ಕಣಿವೆಯ ಸುವರ್ಣ ವಿದ್ಯಾ ಚೇತನದ ಶ್ರೀ ರಾಮಕೃಷ್ಣಪ್ಪನವರು ಮಾತಾಡಿ ನಾವು ಬದುಕುತ್ತಿರುವುದು ನಮ್ಮ ಪರಿಸರದ ಕರುಣೆಯಿಂದ. ಪರಿಸರಕ್ಕೆ ವಿರುದ್ಧವಾಗಿ ನಡೆದಿರುವ ಕಾರಣದಿಂದಾಗಿ ಕೇದಾರನಾಥ, ಹೃಷಿಕೇಶ,ಮಡಿಕೇರಿ ಯಲ್ಲಿ ಸಂಭವಿಸಿದಂತಹ ಪರಿಸರ ವಿಕೋಪದ ದುರಂತಗಳು ಸಂಭವಿಸುತ್ತವೆ. ಇಂತಹ ದುರಂತಗಳನ್ನು ತಡೆಯಲು ನಾವು ಹಸಿರು ಹೆಜ್ಜೆಯ ಹಾದಿಯನ್ನು ತುಳಿಯಬೇಕು ಎಂದು ಕರೆ ಕೊಟ್ಟರು.ಕಾಡು, ನೀರು,ಪರಿಸರ ಇವೆಲ್ಲ ಸಮುದಾಯಕ್ಕೆ ಸೇರಿದ್ದು. ಗಾಳಿ, ನೀರು, ಬಿಸಿಲು ಈ ಎಲ್ಲ ಪರಿಸರದ ಘಟಕಗಳಿಗೆ ಮೈಯೊಡ್ಡಿ ದಂತೆ ನಾವು ಗಟ್ಟಿಯಾಗುತ್ತೇವೆ ಎಂದು ಅವರು ಅಭಿಪ್ರಾಯ ಪಟ್ಟರು.
ಇನ್ನೋರ್ವ ಮುಖ್ಯ ಅತಿಥಿ ಬಿ.ಎಂ.ಎಸ್.ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯ ಗ್ರಂಥಪಾಲಕ ಡಾ. ಲೋಕೇಶ್ ನಾಯಕ್ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಬೆಳೆಸುತ್ತದೆ. ಎನ್ನೆಸ್ಸೆಸ್ ಶಿಬಿರದಲ್ಲಿ ಕಲಿತ ಮೌಲ್ಯಗಳು ವಿದ್ಯಾರ್ಥಿಗಳನ್ನು ಸೌಹಾರ್ದಯುತ ವ್ಯಕ್ತಿಗಳನ್ನಾಗಿ ರೂಪಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುವಾಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೀರಭದ್ರಯ್ಯ ಬಿಎಂಎಸ್ ವಿದ್ಯಾರ್ಥಿಗಳು ಗುರುವಾಪುರ ಗ್ರಾಮದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ,ಹತ್ತು ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ವಿದ್ಯಾರ್ಥಿನಿಯರಾದ ಕಾವ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು.ಕಾಂಚನ ಸ್ವಾಗತಿಸಿದರು.ದೀಪಕ್ ಕೆ. ಧನ್ಯವಾದ ಸಮರ್ಪಿಸಿದರು. ಕಾವೇರಿ ಪಿ ಬಿ. ಕಾರ್ಯಕ್ರಮ ನಿರೂಪಿಸಿದರು.
ಬಿಎಂಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸೇವಾ ಯೋಜನೆಯ ಶಿಬಿರಾಧಿಕಾರಿಗಳಾದ ಡಾ. ಮೋಹನ್ ಕುಮಾರ್ ಮಿರ್ಲೆ, ಡಾ. ಜಯಶ್ರೀ ಬಿ.ಕದ್ರಿ, ಸಹ ಶಿಬಿರಾಧಿಕಾರಿಗಳಾದ ಶ್ರೀ ಸೋಮಶೇಖರಪ್ಪ, ಶ್ರೀ ಶಂಕರ್,ಉಪನ್ಯಾಸಕರಾದ ಶ್ರೀ ಲೋಕೇಶ್,ಶ್ರೀ ಹೊನ್ನಪ್ಪ ಕೆ ಎಸ್,ಶ್ರೀ ಚಂದ್ರಹಾಸ ಬಿ.ಅರ್ ಉಪಸ್ಥಿತರಿದ್ದರು .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ