"ಭಾರತದ ಬೇರುಗಳು ಗ್ರಾಮಗಳಲ್ಲಿವೆ.ಈಗ ಹೆಚ್ಚಿನ ಅತ್ಯುನ್ನತ ಹುದ್ದೆಗಳಲ್ಲಿ ಇರುವವರು ಕೂಡ ಗ್ರಾಮ ಮೂಲದವರೇ.ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಗ್ರಾಮೀಣ ಹಿನ್ನೆಲೆಯುಳ್ಳವರು.ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಗ್ರಾಮೀಣ ಬದುಕನ್ನು ಸನಿಹದಿಂದ ನೋಡಿ ಅಲ್ಲಿನ ಸಮಸ್ಯೆಗಳನ್ನು,ಅಂತೆಯೇ ಧನಾತ್ಮಕ ಅಂಶಗಳನ್ನು ಅರಿತುಕೊಳ್ಳುತ್ತಾರೆ ಹಾಗೂ ಇದರಿಂದ ಅವರ ವ್ಯಕ್ತಿತ್ವ ವಿಕಸವಾಗುತ್ತದೆ"ಎಂದು ಕರ್ನಾಟಕ ರಾಜ್ಯ ಜೈವಿಕ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರೂ ಆದ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು.
ಅವರು ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಗುರುವಾಪುರದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಒಂದು ಹಾಗೂ ಎರಡರ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳು ಸ್ವಚ್ಛ ಭಾರತ ನಿರ್ಮಾಣಕ್ಕೆ ಪೂರಕವಾಗಿರುತ್ತವೆ.ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಮುಂದೆಯೂ ಪಾಲಿಸಬೇಕು ಎಂದು ಹೇಳಿ ಗ್ರಾಮಸ್ಥರ ಸಹಕಾರಕ್ಕೆ ಅಭಿನಂದಿಸಿದರು.
ಶಿಬಿರದ ಸಮಗ್ರ ವರದಿ ವಾಚಿಸಿದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಾಧಿಕಾರಿ ಡಾ. ಮೋಹನ್ ಕುಮಾರ್ ಮಿರ್ಲೆ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಹಾಗೂ ಶಿಬಿರದ ದೈನಂದಿನ ಚಟು ವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಏಳು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಶ್ರಮದಾನ,ವಿವಿಧ ಕ್ಷೇತ್ರಗಳ ಸಾಧಕರಿಂದ ವಿದ್ಯಾರ್ಥಿಗಳಿಗೆ ವೇದಿಕೆ ಕಾರ್ಯಕ್ರಮಗಳು,ಕ್ಷೇತ್ರ ಕಾರ್ಯ ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಯಮಿತವಾಗಿ ನಡೆದಿದ್ದು ವಿದ್ಯಾರ್ಥಿಗಳು ಇವುಗಳಿಂದ ಬಹಳ ಪ್ರಯೋಜನ ಹೊಂದಿದರು ಎಂದು ಅವರು ಹೇಳಿದರು.ಗ್ರಾಮದ ಬೀದಿಗಳ ಸ್ವಚ್ಛತೆ,ಬ್ಲಾಕ್ ಆಗಿದ್ದ ನೀರಿನ ತೊಟ್ಟಿಯ ಸ್ವಚ್ಚತೆ,ಹುರುಳಿ ಹಬ್ಬ,ಬೇವಿನ ಕಡ್ಡಿ ಅಭಿಯಾನ,ಉಚಿತ ನೇತ್ರ ಹಾಗೂ ದಂತ ತಪಾಸಣೆ,ಪಶು ವೈದ್ಯ ಸೇವಾ ಇಲಾಖೆಯಿಂದ ಮಿಶ್ರ ತಳಿ ಕರುಗಳ ಪ್ರದರ್ಶನ ಮತ್ತು ಪಶು ಆರೋಗ್ಯ ಶಿಬಿರ,ಗಿಡ ನೆಡುವ ಅಭಿಯಾನ,ಗ್ರಾಮದ ಹಿರಿಯರೊಂದಿಗೆ ಸಂವಾದ ಹೀಗೆ ಅರ್ಥ ಪೂರ್ಣವಾಗಿ ಸಂಪನ್ನಗೊಂಡ ಈ ಶಿಬಿರದಲ್ಲಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಅಂಶಗಳಿದ್ದು ಅವರು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡರು ಎಂದು ಹೇಳಿದರು.ಇದೇ ಸಮಯ ಅವರು ಗ್ರಾಮಸ್ಥರ ಸಹಕಾರವನ್ನು,ವಿದ್ಯಾರ್ಥಿಗಳೊಂದಿಗೆ ಆತ್ಮೀಯ ನಡವಳಿಕೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಯುವಕ ಮಂಡಳಿಯ ಅಧ್ಯಕ್ಷರು,ಸದಸ್ಯರು ಹಾಗೂ ಗ್ರಾಮಸ್ಥರು ಶಿಬಿರದಲ್ಲಿ ಪಾಲ್ಗೊಂಡ ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕರು ಹಾಗೂ ಎಲ್ಲಾ ಶಿಬಿರಾರ್ಥಿಗಳಿಗೆ ಯುವಕ ಸಂಘದ ಪರವಾಗಿ ಜಿ.ಎಸ್.ಮನೋಜ್ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವೀರಣ್ಣ.ಎಸ್.ಸಿ ಅವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿಗಳನ್ನು,ಸಂಘಟಕರನ್ನು ಹಾಗೂ ಗ್ರಾಮಸ್ಥರನ್ನು ಅಭಿನಂದಿಸಿದರು.
ಗುರುವಾಪುರದ ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಪುಟ್ಟಾನಾಯ್ಕ,ಗುರುವಾಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಕೆ.ವೀರಭದ್ರಯ್ಯ, ಗಾಣಧಾಳಿನ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್ ನಿರ್ದೇಶಕರಾದ ಜಿ.ಎನ್.ದೇವರಾಜು,ಊರಿನ ಪ್ರಮುಖರಾದ ನಂಜುಂಡಪ್ಪ,ಗಾಣದಾಳು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಜಿ.ಕೆ.ಶಿವಕುಮಾರ್,ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಮೂರ್ತಿ,ನಂದಿಹಳ್ಳಿ ಶಿವಣ್ಣ, ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಿ.ಡಿ.ಸಿ ಸದಸ್ಯರು ಹಾಗೂ ಬಿ.ಎಂ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ಲೋಕೇಶ್ ನಾಯಕ್,ಹರೀಶ್ ಎಂ.ಪಿ, ಶ್ರೀ ಚಂದ್ರಹಾಸ್ ಬಿ.ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಯಶಸ್ವಿನಿ ಮತ್ತು ತಂಡದವರು ಪ್ರಾರ್ಥಿಸಿದರು.ಸಹ ಶಿಬಿರಾಧಿಕಾರಿಗಳಾದ ಕುಮಾರಸ್ವಾಮಿ ಸ್ವಾಗತಿಸಿದರು.ವಿದ್ಯಾರ್ಥಿಗಳಾದ ಗುರುಪ್ರಸಾದ್,ಪೂಜಾ ಹಾಗೂ ಪಲ್ಲವಿ ಅವರು ಶಿಬಿರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಾಧ್ಯಾಪಕರಾದ ಸೋಮಶೇಖರಪ್ಪ.ಎಂ ಕಾರ್ಯಕ್ರಮ ನಿರೂಪಿಸಿದರು.ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಇನ್ನೋರ್ವ ಶಿಬಿರಾಧಿಕಾರಿಯಾದ ಡಾ.ಜಯಶ್ರೀ ಬಿ.ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ