ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೆಯ ಸಾಲಿನ ಶೈಕ್ಷಣಿಕ ವರ್ಷದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ದಿನ ಆಚರಣೆ
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್.ಬಿ. ಕುಮಾರಸ್ವಾಮಿ ಅವರು ಅಸತೋಮ ಸದ್ಗಮಯ ತಮಸೋಮ ಜೋತಿರ್ಗಮಯ ಎಂಬ ಮಾತಿನಂತೆ ಇಂದಿನ ಸಮಾರಂಭದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದೇವೆ. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲೂ ಬೆಳಕಿನೆಡೆಗೆ ಸಾಗಬೇಕು. ಬೇರೆಯವರ ಬದುಕಿನಲ್ಲೂ ಅಷ್ಟೇ ನಾವು ಬೆಳಕಾಗಿರಬೇಕೇ ಹೊರತು ನಮ್ಮಿಂದ ಯಾರಿಗೂ ತೊಂದರೆಯಾಗಬಾರದು ಎಂದು ಕಿವಿಮಾತು ಹೇಳಿದರು.
ಓದು ಬರಹದ ಜೊತೆಗೆ ಕಾಲೇಜಿನಲ್ಲಿ ನಡೆಯುವ ಪಠ್ಯಪೂರಕ ಅಂಶಗಳಾದ ಎನ್.ಎಸ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು ನಿಮ್ಮದಾಗಿಸಿಕೊಳ್ಳಬಹುದು, ಜೊತೆಗೆ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನೂ ಅಳವಡಿಸಿಕೊಳ್ಳುವುದು ಬಹಳಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್.ಸಿ. ಅವರು ಮಾತನಾಡುತ್ತಾ ಅಳಿಸುವುದಾದರೆ ಮತ್ತೊಬ್ಬರ ದುಃಖವನ್ನು ಅಳಿಸಬೇಕೇ ಹೊರತು ಮತ್ತೊಬ್ಬರ ನಗುವನ್ನು ಅಳಿಸಬಾರದು, ನಾವು ಮಾಡುವ ಯಾವುದೇ ಕೆಲಸದಲ್ಲಿ ದೇಶಪ್ರೇಮ ಬೆರೆತಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಮೋಹನ ಕುಮಾರ್ ಮಿರ್ಲೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ಈ ಶೈಕ್ಷಣಿಕ ವರ್ಷ ಆರಂಭವಾದ ಕಳೆದ ಒಂದೂವರೆ ತಿಂಗಳಿನಲ್ಲಿ ಕಾಲೇಜಿನ ವಿವಿಧ ಸಮಿತಿಗಳು ಮತ್ತು ವಿಭಾಗಗಳ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ವಿವರ ನೀಡಿದರು.
ಹುಳಿಯಾರಿನ ಶ್ರೀ ನಾಗರಾಜು, ಶ್ರೀ ಬೀರಲಿಂಗಯ್ಯ, ಶ್ರೀಮತಿ ಮಂಜುಳ, ಶ್ರೀ ಚಂದ್ರಯ್ಯ ಹಾಗೂ ಆಂಗ್ಲವಿಭಾಗದ ಮುಖ್ಯಸ್ಥರಾದ ಡಾ. ಜಯಶ್ರೀ ಬಿ. ಕದ್ರಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಈ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮತ್ತು ಕೈಗಾರಿಕಾ ಭೇಡಿ ನೀಡಿದ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಂತಿಮ ಬಿ.ಎ. ವಿದ್ಯಾರ್ಥಿನಿಯರಾದ ರಂಜಿತ ಕೆ. ಮತ್ತು ವಿಶಾಲಾಕ್ಷಿ ಪಿ.ಆರ್. ಆರಂಭಗೀತೆಯನ್ನು ಹಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಯೋಗೀಶ್ ಬಿ. ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕರಾದ ಪ್ರೊ. ಮಂಜುನಾಥ ಕೆ.ಎಸ್. ವಂದಿಸಿದರು.ಅಂತಿಮ ಬಿ.ಕಾಂ. ವಿದ್ಯಾರ್ಥಿನಿಯಾದ ಕುಮಾರಿ ಪುಷ್ಪ ಕೆ.ಯು. ಕಾರ್ಯಕ್ರಮವನ್ನು ನಿರೂಪಿಸಿದರು.
ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಅಪರಾಹ್ನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಡು, ನೃತ್ಯ, ಕಿರು ನಾಟಕ, ಸಾಂಪ್ರದಾಯಿಕ ವಸ್ತ್ರ ವೈಭವ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ತಮ್ಮ ಪ್ರತಿಭೆಗೆ ವೇದಿಕೆ ಬಳಸಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ