ವಿಷಯಕ್ಕೆ ಹೋಗಿ

ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ಇಂದಿಗೆ 50 ವರ್ಷಗಳು ಸಂದಿಸುವ ಈ ಹೊತ್ತಿನಲ್ಲಿ “ಕರ್ನಾಟಕ ಸಂಭ್ರಮ - 50”, “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷವಾಕ್ಯದೊಂದಿಗೆ ಹುಳಿಯಾರಿನ ಬಿ.ಎಂ.ಎಸ್. ಕಾಲೇಜಿನಲ್ಲಿ ಇಂದು ಅದ್ದೂರಿಯಾಗಿ 62ನೆಯ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. 

          ಮೊದಲಿಗೆ ರಾಷ್ಟ್ರಗೀತೆ, ನಾಡಗೀತೆಯನ್ನು ಹಾಡಿ, ನಂತರ ಕನ್ನಡ ಮಾತೆ ಭುವನೇಶ್ವರಿದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. 

           ತದನಂತರ ಕನ್ನಡದ ಪ್ರಸಿದ್ಧ ಕವಿಗಳಾದ ಹುಯಿಲಗೋಳ ನಾರಾಯಣರಾಯರು, ಕುವೆಂಪು, ದ.ರಾ.ಬೇಂದ್ರೆ, ಸಿದ್ದಯ್ಯ ಪುರಾಣಿಕ ಮತ್ತು ಚನ್ನವೀರ ಕಣವಿಯವರು ರಚಿಸಿರುವ, ಸರ್ಕಾರ ನಿಗದಿಪಡಿಸಿರುವ, ಒಟ್ಟು 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ನುಡಿನಮನವನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಪ್ರೊ. ವೀರಣ್ಣ ಎಸ್.ಸಿ. ಅವರು ಮಾತನಾಡಿ ನಮ್ಮ ನಮ್ಮ ಕಾರ್ಯವನ್ನು ಭಾರ ಎಂದು ಭಾವಿಸದೆ ವಚನಕಾರರ “ಕಾಯಕವೇ ಕೈಲಾಸ” ಎಂಬ ನುಡಿಯಂತೆ ಮನಃಪೂರ್ವಕವಾಗಿ ಮಾಡಿದರೆ, ಅದೇ ನಾವು ನಮ್ಮ ನಾಡಿಗೆ ಸಲ್ಲಿಸಬಹುದಾದ ಸೇವೆ ಎಂದು ಅಭಿಪ್ರಾಯಪಟ್ಟರು. 

       ಅದಕ್ಕೂ ಮೊದಲು ಪ್ರಾಸ್ತಾವಿಕ ನುಡಿಗಳನ್ನು ಆಡಿದ ಕನ್ನಡ ಉಪನ್ಯಾಸಕರಾದ ಶ್ರೀ ಚಂದ್ರಹಾಸ್ ಬಿ.ಆರ್. ಅವರು ಕನ್ನಡ ರಾಜ್ಯೋತ್ಸವ ಆಚರಣೆಯ ಹಿನ್ನೆಲೆ ಮತ್ತು ಮಹತ್ವವನ್ನು ಕುರಿತು ತಿಳಿಸಿದರು. 

            ಕಾರ್ಯಕ್ರಮದ ಸಂಚಾಲಕರು ಮತ್ತು ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ. ಮೋಹನ್ ಕುಮಾರ್ ಮಿರ್ಲೆ ಅವರು ಕರ್ನಾಟಕ ಏಕೀಕರಣದ ಹಿನ್ನೆಲೆ, ಕನ್ನಡ ನಾಡು-ನುಡಿ ಅಭಿಮಾನ, ಕನ್ನಡದ ಅಸ್ಮಿತೆ ಮತ್ತು ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಕುರಿತು ಮಾತನಾಡಿದರು. 

                    ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಮಲ್ಲಿಕಾರ್ಜುನ ಅವರು ಬೆಂಗಳೂರಿನಂತಹ ಮಹಾನಗರಗಳಲ್ಲಿ ಕನ್ನಡ ಉಳಿಯಬೇಕಾದರೆ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಬರಬೇಕು ಎಂದು ಅಭಿಪ್ರಾಯಪಟ್ಟರು. 

                   ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ. ಯೋಗೀಶ್ ಬಿ. ಮಾತನಾಡಿ ಕನ್ನಡಾಭಿಮಾನಕ್ಕಾಗಿ ಕನ್ನಡ ಬಳಸುವುದರ ಜೊತೆಗೆ ಈ ಸ್ಪರ್ಧಾತ್ಮಕ ಯುಗದಲ್ಲಿ ಹೊರ ಜಗತ್ತಿನೊಂದಿಗೆ ವ್ಯವಹರಿಸಲು ನಿಮಗೆ ಅಗತ್ಯವಾದ ಮತ್ತೊಂದು ಭಾಷೆಯನ್ನೂ ಕಲಿಯಬೇಕು. ಆ ಮೂಲಕ ಕನ್ನಡವನ್ನು ಹೊರಜಗತ್ತಿಗೂ ಹಬ್ಬಿಸಬೇಕು ಎಂದು ಕಿವಿಮಾತು ಹೇಳಿದರು. 

                    ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ತಿಪ್ಪೇಸ್ವಾಮಿ ಅವರು ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು’ ಎಂಬ ಕವಿವಾಣಿಯಂತೆ ಯುವಕರು ಕನ್ನಡ ಚಳುವಳಿಗಳೊಂದಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

           ವಿದ್ಯಾರ್ಥಿನಿಯರಾದ ರೂಪ ಕೆ.ಇ., ಪ್ರಥಮ ಬಿ.ಎ., ಮತ್ತು ರಕ್ಷಿತ, ಪ್ರಥಮ ಬಿ.ಕಾಂ., ಇವರು ಕನ್ನಡ ರಾಜ್ಯೋತ್ಸವವನ್ನು ಕುರಿತು ಭಾಷಣ ಮಾಡಿದರು. ಲಾವಣ್ಯ ಮತ್ತು ಸಾನಿಯಾ – ಈ ಎರಡೂ ತಂಡದವರು ಸಾಮೂಹಿಕ ಕನ್ನಡ ಗೀತೆಗಳನ್ನು ಹಾಡಿದರು. ರಂಜಿತ ಆರ್. ಕನ್ನಡ ನಾಡನ್ನು ಕುರಿತ ತಮ್ಮ ಸ್ವರಚಿತ ಕವಿತೆಯನ್ನು ವಾಚಿಸಿದರು. ರಕ್ಷಿತ ಮತ್ತು ತಂಡದವರು ಆರಂಭಗೀತೆಯನ್ನು ಹಾಡಿದರು. ಕೋಮಲ ಎನ್. ಸ್ವಾಗತಿಸಿದರು. ದಿವ್ಯ ಆರ್. ವಂದಿಸಿದರು. ದಿವ್ಯ ಬಿ. ಕಾರ್ಯಕ್ರಮವನ್ನು ನಿರೂಪಿಸಿದರು. 

            ಐ.ಕ್ಯೂ.ಎ.ಸಿ. ಸಂಚಾಲಕಾದ ಪ್ರೊ. ಮಂಜುನಾಥ ಕೆ.ಎಸ್., ಆಂಗ್ಲ ಭಾಷಾ ವಿಭಾಗದ ಡಾ. ಜಯಶ್ರೀ ಬಿ. ಕದ್ರಿ ಮತ್ತು ಡಾ. ಸುಷ್ಮಾ ಎಲ್. ಬಿರಾದಾರ್, ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ಸಂಗೀತ ಪಿ. ಮತ್ತು ಶ್ರೀಮತಿ ಲಾವಣ್ಯ ಪಿ., ಇತಿಹಾಸ ವಿಭಾಗದ ಶ್ರೀ ಕುಮಾರಸ್ವಾಮಿ ಕೆ.ಸಿ. ಮತ್ತು ಅರ್ಥಶಾಸ್ತ್ರ ವಿಭಾಗದ ಶ್ರೀ ಶಂಕರ್ ಕೆ.ಎಂ., ಕಾಲೇಜಿನ ದ್ವಿತೀಯ ದರ್ಜೆ ಸಹಾಯಕಾದ ಶ್ರೀ ರಮೇಶ್ ಆರ್.ಡಿ. ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...