----------------------
ಹುಳಿಯಾರು:ರಾಷ್ಟ್ರೀಯ ಪೋಲಿಯೋ ಲಸಿಕಾ ದಿನಾಚರಣೆ ಅಂಗವಾಗಿ ಇಂದು ಪಟ್ಟಣದಾದ್ಯಂತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ ಎಂದು ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಮನವಿ ಮಾಡಿದರು.
ಹುಳಿಯಾರಿನ ಬಸ್ ನಿಲ್ದಾಣದ ಪೋಲಿಯೋ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಹಾಕುವ ಮೂಲಕ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ಪೋಲಿಯೋ ಎಂಬುದು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುವ ಮಾರಕ ರೋಗ. 5 ವರ್ಷದೊಳಗಿನ ಮಕ್ಕಳಲ್ಲಿ ನರಮಂಡಲದ ಮೇಲೆ ದಾಳಿ ಮಾಡಿ ಅಂಗವೈಕಲ್ಯ ಉಂಟುಮಾಡುವ ಈ ರೋಗವನ್ನು ದೇಶದಿಂದ ಸಂಪೂರ್ಣವಾಗಿ ಓಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಈ ಲಸಿಕಾ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಪೋಷಕರು ಸಹಕರಿಸಬೇಕು. ಈ ಹಿಂದೆ ಲಸಿಕೆ ಹಾಕಿಸಿದ್ದರೂ ಸಹ, ಇಂದಿನ ಅಭಿಯಾನದಲ್ಲಿ ತಪ್ಪದೇ ಮತ್ತೊಮ್ಮೆ ಹನಿ ಹಾಕಿಸಬೇಕು" ಎಂದು ಮನವಿ ಮಾಡಿದರು.
ಹುಳಿಯಾರಿನಲ್ಲಿ ಸರ್ಕಾರಿ ಆಸ್ಪತ್ರೆ,ಬಸ್ ನಿಲ್ದಾಣ, ವಿಜಯನಗರ,ಆಝಾದ್ ನಗರ,ಮಾರುತಿ ನಗರ, ಇಂದಿರಾ ಲಿಂಗಪ್ಪನ ಪಾಳ್ಯ, ವಳಗೇರೆಹಳ್ಳಿ ಸೇರಿದಂತೆ ಒಟ್ಟು ಎಂಟು ಬೂತ್ ಗಳನ್ನು ಸ್ಥಾಪಿಸಲಾಗಿದ್ದು ಪೋಷಕರು ತಪ್ಪದೆ ಮಕ್ಕಳನ್ನು ಕರೆದೊಯ್ದು ಪೋಲಿಯೋ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾಘವೇಂದ್ರ, ರೋಟೇರಿಯನ್ ಗಂಗಾಧರ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದು, ಆರೋಗ್ಯ ಇಲಾಖೆಯ ವಿಜಯಕುಮಾರ್, ಲೋಕೇಶ್ ,ಆಶಾ ಕಾರ್ಯಕರ್ತೆ ಭಾಗ್ಯಮ್ಮ ,ಅಂಗನವಾಡಿ ಕಾರ್ಯಕರ್ತೆ ಗಾಯತ್ರಮ್ಮ, ಕಾಳಮ್ಮ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ