ಹೋಬಳಿ ದೊಡ್ಡಬಿದರೆ ಗ್ರಾಮದ ಹಿರಿಯರು,ಊರ ಯಜಮಾನರುಗಳು ಗುರುವಾರದಂದು ಗ್ರಾಮದೇವತೆ ಶ್ರೀಕರಿಯಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಭೆ ಸೇರಿ ತಮ್ಮ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟವನ್ನು ತಡೆಗಟ್ಟುವ ಬಗ್ಗೆ ಚಿಂತಿಸಿ, ಗ್ರಾಮದಲ್ಲಿ ಯಾವುದೇ ರೀತಿಯ ಮದ್ಯ ಮಾರುವಂತಿಲ್ಲ ಹಾಗೂ ಗ್ರಾಮದಲ್ಲಿ ಮದ್ಯ ಮಾರಾಟ ನಿಷಿದ್ದ ಎಂಬ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.ಇದಕ್ಕೆ ಗ್ರಾಮಸ್ಥರೆಲ್ಲ ಸಹಮತವ್ಯಕ್ತಪಡಿಸಿ ಬೆಂಬಲ ಸೂಚಿಸಿದ್ದಾರೆ.
ಗ್ರಾಮಸ್ಥರ ಈ ನಿರ್ಣಯ್ಯವನ್ನು ಮೀರಿ ಯಾರಾದರು ಊರಲ್ಲಿ ಮದ್ಯಮಾರಿದರೆ ಅವರಿಗೆ 25ಸಾವಿರ ದಂಡ ಹಾಗೂ ಮದ್ಯ ಮಾರುವವರನ್ನು ಪತ್ತೆ ಹಚ್ಚಿ ಕೊಟ್ಟವರಿಗೆ 4 ಸಾವಿರ ಬಹುಮಾನವನ್ನು ನೀಡುವ ತೀರ್ಮಾನವನ್ನು ಕೈಗೊಂಡಿದ್ದಾರೆ.
ಹಳ್ಳಿಗಳಲ್ಲಿ ಆಕ್ರಮ ಮದ್ಯದ ಅಂಗಡಿಗಳು ನಾಯಿಕೊಡೆಯಂತೆ ತಲೆಯೆತ್ತಿದ್ದು, ಗ್ರಾಮದ ಪೆಟ್ಟಿಗೆ ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದಾರೆ. ಹಳ್ಳಿ ಜನರು ತಾವು ದುಡಿದ ಬಹುಪಾಲು ಹಣವನ್ನು ಕುಡಿತಕ್ಕಾಗಿ ವೆಚ್ಚ ಮಾಡುತ್ತಾ ತಮ್ಮ ಸಂಸಾರದ ಕಡೆ ಅಲಕ್ಷ ತೊರುತ್ತಿದ್ದಾರೆ. ಅಲ್ಲದೆ ಅನೇಕ ಯುವಕರು ಮನೆಯವರಿಗೆ ತಿಳಿಯದಂತೆ ಕದ್ದುಮುಚ್ಚಿ ಕುಡಿತಕ್ಕೆ ಬಲಿಯಾಗುತ್ತಿದ್ದಾರೆ,ಊರಲ್ಲಿ ಜಗಳ ಹೆಚ್ಚಿದ್ದು ಊರಲ್ಲಿ ಶಾಂತಿಯ ವಾತಾವರಣ ಇಲ್ಲದಂತಾಗಿದೆ.ಗ್ರಾಮದಲ್ಲಿ ಮದ್ಯಪಾನಿಗಳ ಸಂಖ್ಯೆ ಹೆಚ್ಚುತ್ತಿದ್ದು,ಅನೇಕ ಸಂಸಾರಗಳು ಸಂಕಟ ಪಡುತ್ತಿರುವುದನ್ನು ಮನಗಂಡ ಊರಿನ ಪ್ರಮುಖ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ದುಡಿಯುವ ಜನರ ದುಡಿಮೆ ಪೋಲಾಗುವುದನ್ನು ತಪ್ಪಿಸಿ,ಜನರನ್ನು ಕುಡಿತದ ಚಟದಿಂದ ಬಿಡಿಸಿ, ಅವರ ಬದುಕನ್ನು ಸುಧಾರಿಸಲು ಹಾಗೂ ಕುಡಿತದ ದುಷ್ಪರಿಣಾಮ ಎಂತಹದ್ದು ಅದರಿಂದಾಗುವ ತೊಂದರೆಯ ತೀವ್ರತೆ ಎಂತಹದ್ದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ಮುಖಂಡರು, ಗ್ರಾಮಸ್ಥರ ಮನವೊಲಿಸಿ, ಗ್ರಾಮದಲ್ಲಿ ಮದ್ಯ ಮಾರಾಟ ಮಾಡಬಾರದು,ತಮ್ಮ ಗ್ರಾಮದಲ್ಲಿ ಇಂದಿನಿಂದ ಮದ್ಯ ನಿಷಿದ್ಧ ಎಂಬ ನಿರ್ಣಯ ಕೈಗೊಂಡಿದ್ದಾರೆ.ಸಭೆಯಲ್ಲಿ ಊರಿನ ಮುಖಂಡರಾದ ಕರಿಯಜ್ಜ,ಸತೀಶ್,ಶಿವಣ್ಣ,ರಾಮಯ್ಯ,ಡಿ.ಕೆ.ರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ