ಕ್ಷುಲಕ ಕಾರಣ ನೀಡಿ ಸ್ಥಳೀಯ ಗ್ರಾ.ಪಂ. ಸದಸ್ಯರು ನೀರು ಪೋರೈಕೆ ಘಟಕಕ್ಕೆ ಬೀಗ ಹಾಕಿದ್ದನ್ನು ಪ್ರತಿಭಟಿಸಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯವರು ರಸ್ತೆ ತಡೆ ನಡೆಸಿದ್ದಲ್ಲದೆ ಸ್ಥಳಕ್ಕೆ ತಹಶೀಲ್ದಾರರನ್ನು ಕರೆಯಿಸಿ ಘಟಕವನ್ನು ಪುನರಾರಂಭ ಮಾಡಿಸಿದ ಘಟನೆ ಸೋಮವಾರ ಜರುಗಿದೆ.
ಹಿನ್ನಲೆ: ಹುಳಿಯಾರು ಗ್ರಾ.ಪಂ.ಯ ಸಹಭಾಗಿತ್ವದಲ್ಲಿ ಪೋಲೀಸ್ ಠಾಣೆಯ ಹತ್ತಿರ ಡಾಕ್ಟರ್ ವಾಟರ್ ಘಟಕವನ್ನು ಸ್ಥಾಪಿಸಿದ್ದು, 20ಲೀ ನ ಒಂದು ಕ್ಯಾನ್ ಗೆ ಏಳು ರೂ ನಂತೆ ಅಲ್ಲಿಗೆ ಬಂದು ಕೊಂಡೈಯ್ಯುವ ಆಧಾರದ ಮೇಲೆ ನೀರನ್ನು ಸರಬರಾಜು ಮಾಡಲಾಗುತ್ತಿತ್ತು.ಶುದ್ದ ನೀರು ಪ್ರತಿಯೊಂದು ಮನೆಗೂ ತಲುಪಿಸುವ ನಿಟ್ಟಿನಲ್ಲಿ ಕಳೆದ ಕೆಲ ತಿಂಗಳ ಹಿಂದೆ ನೀರಿನ ಕ್ಯಾನ್ ನ ವಿತರಣೆಯನ್ನು ಖಾಸಗಿ ವ್ಯಕ್ತಿಯವರಿಗೆ ನೀಡಿದ್ದು, ಅವರು ಪ್ರತಿ ಕ್ಯಾನ್ ಗೆ ರೂ.15ರಂತೆ ಮನೆ ಬಾಗಿಲಿಗೆ ವಿತರಣೆ ಮಾಡುತ್ತಿದ್ದರು.ಖಾಸಗಿ ವ್ಯಕ್ತಿಗೆ ವಿತರಣೆ ನೀಡಿದ್ದನ್ನು ವಿರೋಧಿಸಿ ಕೆಲ ಸದಸ್ಯರುಗಳು ಡಾಕ್ಟರ್ ವಾಟರ್ ಘಟಕಕ್ಕೆ ಬೀಗ ಹಾಕಿದ್ದಲ್ಲದೆ,ಬೋರಿನಿಂದ ಸರಬರಾಜಾಗುತ್ತಿದ್ದ ನೀರಿನ ಪೈಪನ್ನು ಸಹ ಕಿತ್ತುಹಾಕಿದ್ದರು. ಇದರಿಂದಾಗಿ ನಾಲ್ಕೈದು ದಿನಗಳಿಂದ ಈ ಘಟಕ ಸ್ಥಗಿತ ಗೊಂಡು ಜನ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿತ್ತು.
ಪ್ರತಿಭಟನೆ ಏಕೆ: ಸದಸ್ಯರ ಕ್ರಮದ ಬಗ್ಗೆ ಅಸಮದಾನ ವ್ಯಕ್ತ ಪಡಿಸಿದ ಸಾರ್ವಜನಿಕರು ಘಟಕದ ಬಳಿಯೇ ಏಳು ರೂಗೆ ಕೊಡುತ್ತಿದ್ದ ನೀರನ್ನು ಸ್ಥಗಿತಗೊಳಿಸಿದ್ದನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದರು. ಎಲ್.ಆರ್.ಚಂದ್ರಶೇಖರ್ ಮತ್ತಿತರರು ಮಾತನಾಡಿ, ಹುಳಿಯಾರು ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು ಜನ ಕುಡಿಯುವ ನೀರನ್ನು ಕಿ.ಮೀ.ದೂರ ಸಾಗಿ ತರಬೇಕಿದೆ.ಅಲ್ಲದೆ ಪಟ್ಟಣದ ಸುತ್ತಮುತ್ತ ದೊರೆಯುವ ನೀರಿನಲ್ಲಿ ಪ್ಲೋರೈಡ್ ಅಂಶ ಅಧಿಕವಿದ್ದು,ಇದನ್ನು ಸೇವಿಸುವುದರಿಂದ ಜನ ಅನೇಕ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಹುಳಿಯಾರಿನ ಜನತೆಯ ಅದೃಷ್ಟವೆಂಬಂತೆ ಡಾಕ್ಟರ್ ವಾಟರ್ ಕಂಪನಿಯವರು ತಮ್ಮ ಘಟಕವನ್ನು ಇಲ್ಲಿ ಸ್ಥಾಪಿಸುವ ಮೂಲಕ ಉತ್ತಮ ನೀರಿನ ಪೋರೈಕೆಗೆ ಮುಂದಾಗಿ ನೀರು ಸರಬರಾಜು ಮಾಡುತ್ತಿರುವುದು ಶ್ಲಾಘಾನೀಯ. ಗ್ರಾ.ಪಂ.ಯ ಸದಸ್ಯರುಗಳ ನಡುವೆ ರಾಜಕೀಯ ಹಾಗೂ ಕಿತ್ತಾಟದ ಫಲವಾಗಿ ಘಟಕಕ್ಕೆ ಬೀಗ ಹಾಕಿರುವುದು ಕೂಡಲೇ ತೆರವು ಮಾಡದಿದ್ದಲ್ಲಿ ಹಾಗೂ ಪೂರೈಕೆ ಪೈಪ್ ಕಿತ್ತು ಹಾಕಿರುವ ಸದಸ್ಯರುಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯ ವಿಷಯ ತಿಳಿದು ಸಿಪಿಐ ಪ್ರಭಾಕರ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಕಾಮಾಕ್ಷಮ್ಮ ಪ್ರತಿಭಟನಾಕಾರ ಸಮಸ್ಯೆಯನ್ನು ಆಲಿಸಿ,ಡಾಕ್ಟರ್ ವಾಟರ್ ಘಟಕದ ಅಧಿಕಾರಿಯೊಂದಿಗೆ ಮಾತನಾಡಿ,ಗ್ರಾ.ಪಂ.ಯವರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ವಿಚಾರಿಸಿದರು. ಡಾಕ್ಟರ್ ವಾಟರ್ ಸಂಸ್ಥೆ ಹಾಗೂ ಗ್ರಾ.ಪಂ.ಯವರ ನಡುವೆ 15 ವರ್ಷದ ಒಪ್ಪಂದವಿದ್ದು, ಇದರ ನಿರ್ವಹಣೆಯನ್ನು 15ವರ್ಷದವರೆಗೆ ಕಂಪನಿಯೇ ನಿಭಾಯಿಸಿ ನಂತರ ಗ್ರಾ.ಪಂ.ವ್ಯಾಪ್ತಿಗೆ ಬಿಟ್ಟುಕೊಡುವುದಾಗಿದೆ.ಆದರೆ ಈಗ ಗ್ರಾ.ಪಂ.ಯವರೇ ಕೊಳವೆ ಬಾವಿಯ ಪೈಪ್ ತುಂಡರಿಸಿ ಈ ಘಟಕ ಸ್ಥಗಿತಗೊಳ್ಳುಂತೆ ಮಾಡಿರುವುದು ತಪ್ಪು,ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿ,ಕೊಳವೆಬಾವಿಯ ಪೈಪನ್ನು ಸರಿಪಡಿಸುವಂತೆ ಹೇಳಿ ಪ್ರತಿಬಟನೆಯನ್ನು ಹಿಂಪಡೆಯುವಂತೆ ಮಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾವೇದಿಕೆ,ಟಿಪ್ಪುಯುವಕ ಸಂಘ,ರೈತಸಂಘ,ಕನ್ನಡಸೇನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ