ಹುಳಿಯಾರು:ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರ ಆಡಳಿತದ ಸಮಯದಲ್ಲಿ ಮಹಿಳೆಯರ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿ ಸಮಾಜದಲ್ಲಿ ಮಹಿಳೆಗೂ ತನ್ನ ಗುರಿಯನ್ನು ಸಾಧಿಸಲು ಅವಕಾಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ ಅವರಾಗಿದ್ದು,ಆಕೆಯ ಹೆಸರು ಭಾರತದ ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಉಪನ್ಯಾಸಕ ನರೇಂದ್ರಬಾಬು ಬಣ್ಣಿಸಿದರು.ಹುಳಿಯಾರಿನ ನಾಡಕಚೇರಿ ಮುಂದೆ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿಯ ಧರಣಿಯಲ್ಲಿ, ಧರಣಿ ನಿರತರೊಂದಿಗೆ ಜ್ಯೋತಿರಾವ್ ಫುಲೆ ಜಯಂತಿ ಆಚರಿಸಿ ಉಪನ್ಯಾಸ ನೀಡಿದರು.
ಸಾವಿತ್ರಿಬಾಯಿ ಫುಲೆ ಮಹಿಳಾ ಶಿಕ್ಷಣಕ್ಕೆಅಪಾರವಾಗಿ ಇಂಬು ನೀಡಿದವರು.ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಈ ಧ್ಯೇಯೋದ್ಧೇಶಕ್ಕಾಗಿ ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ನಿರಂತರ ಶ್ರಮಿಸಿದ ಮಹಾನ್ ತಾಯಿ ಈಕೆ ಎಂದರು.
ಸ್ವಂತ ಮಕ್ಕಳನ್ನು ಹೊಂದದೆಯೇ ಈ ದಂಪತಿಗಳು ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಬೆಳೆಸಿದರು. ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರು ರೂಪಿಸಿದ ‘ಸತ್ಯಶೋಧಕ ಚಳವಳಿ' ಸಾಮಾಜಿಕ ಪಿಡುಗುಗಳ ವಿರುದ್ಧದ ಒಂದು ಅಸ್ತ್ರವೇ ಆಗಿತ್ತು. ದೇಶದಲ್ಲೇ ಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಸಾವಿತ್ರಿಬಾಯಿಯವರ ನಾಯಕತ್ವದಲ್ಲಿ ಸ್ಥಾಪಿಸಿದ್ದೂ ಒಂದು ದಾಖಲೆ ಎಂದರು.
ಈ ಸಂದರ್ಭದಲ್ಲಿ ಧರಣಿ ನಿರತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ