ಮಹಿಳೆಯರು ಮೈಕ್ರೋ ಫೈನಾನ್ಸ್‌ನಿಂದ ದೂರವಿದ್ದು, ಬ್ಯಾಂಕ್ ಸಾಲ ಬಳಸಬೇಕು: ಗಂಗೇಶ್ ಗುಂಜನ್
ಹುಳಿಯಾರು : ಹೆಚ್ಚಿನ ಬಡ್ಡಿ ವಿಧಿಸುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬದಲಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂದು ತುಮಕೂರು ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಂಗೇಶ್ ಗುಂಜನ್ ಕರೆ ನೀಡಿದರು.
ಕುಪ್ಪೂರು ಗ್ರಾಮ ಪಂಚಾಯಿತಿ ಮಟ್ಟದ ಅಕ್ಷಯ ಸಂಜೀವಿನಿ ಒಕ್ಕೂಟದ ಆವರಣದಲ್ಲಿ ನಡೆದ ಜನ ಸುರಕ್ಷಾ ಶಿಬಿರದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸುರಕ್ಷಾ, ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮತ್ತು ಜನಧನ ಖಾತೆಯಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬ್ಯಾಂಕುಗಳ ಮೂಲಕ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಈ ಶಿಬಿರವನ್ನು ಕೆನರಾ ಬ್ಯಾಂಕ್, ಚಿಕ್ಕನಾಯಕನಹಳ್ಳಿ ಮತ್ತು ಆರ್ಥಿಕ ಸಾಕ್ಷರತಾ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದವು.
ಕೆನರಾ ಬ್ಯಾಂಕ್ ಚಿಕ್ಕನಾಯಕನಹಳ್ಳಿಯ ಮುಖ್ಯ ವ್ಯವಸ್ಥಾಪಕ ಶ್ರೀಕಾಂತ್ ಕುಮಾರ್ ಸೇತಿ ಮಾತನಾಡಿ ಗ್ರಾಹಕರು ತಮ್ಮ ಖಾತೆಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಕೆವೈಸಿ (KYC) ನವೀಕರಿಸಿಕೊಳ್ಳಬೇಕೆಂದು ತಿಳಿಸಿದರು.
ಕೆನರಾ ಬ್ಯಾಂಕಿನ ಕೃಷಿ ಸಹಾಯಕ ಅಧಿಕಾರಿ ಮಧುಸೂದನ್ ಎನ್.ಜಿ. ಮಾತನಾಡಿ ಮಹಿಳೆಯರಿಗಾಗಿ ಬ್ಯಾಂಕ್ 'ಕೆನರಾ ಏಂಜೆಲ್' ಎಂಬ ವಿಶೇಷ ಖಾತೆಯನ್ನು ತೆರೆದಿದ್ದು ಇದರ ಮೂಲಕ ಕ್ಯಾನ್ಸರ್ ಚಿಕಿತ್ಸೆಗೆ ನೆರವು ಮತ್ತು ಅಪಘಾತ ವಿಮೆಯಂತಹ ಸೌಲಭ್ಯಗಳನ್ನು ಪಡೆಯಬಹುದು ಎಂದು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯಿತಿ ಎನ್‌ಆರ್‌ಎಲ್‌ಎಂ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಕೆ. ರವಿ ಮಾತನಾಡಿ ಸಂಜೀವಿನಿ ಒಕ್ಕೂಟವು ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದೆ. ಮಹಿಳೆಯರಿಗೆ ಸಣ್ಣ ಕೈಗಾರಿಕೆಗಳು, ಕರಕುಶಲ ವಸ್ತುಗಳ ತಯಾರಿಕೆ, ವ್ಯಾಪಾರ ಮತ್ತು ಇತರ ಸಣ್ಣ ಉದ್ಯಮಗಳನ್ನು ಆರಂಭಿಸಲು ಒಕ್ಕೂಟವು ಪ್ರೋತ್ಸಾಹ, ತರಬೇತಿ, ಬ್ಯಾಂಕ್ ಸಾಲ, ಮಾರಾಟ ಮತ್ತು ಗ್ರೇಡಿಂಗ್ ಸೌಲಭ್ಯಗಳನ್ನು ಒದಗಿಸುತ್ತದೆ ಎಂದರು.
ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ಮಾತನಾಡಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಂತೆ ಕೆನರಾ ಬ್ಯಾಂಕ್ ಕೂಡ ʼಕೆನರಾ ಆಲ್ ಇನ್ ಒನ್' ಎಂಬ ಡಿಜಿಟಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದರ ಮೂಲಕ ಜನರು ಮನೆಯಲ್ಲಿಯೇ ಕುಳಿತು ಹಣ ವರ್ಗಾವಣೆ, ಬ್ಯಾಲೆನ್ಸ್ ಪರಿಶೀಲನೆ, ಸ್ಟೇಟ್‌ಮೆಂಟ್ ಪಡೆಯುವಂತಹ ಬ್ಯಾಂಕ್ ವಹಿವಾಟುಗಳನ್ನು ಮಾಡಬಹುದು ಎಂದು ತಿಳಿಸಿದರು.
ಜನ ಸುರಕ್ಷಾ ಶಿಬಿರದಲ್ಲಿ ಅಕ್ಷಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೆಹನಾ ಬಾನು, ಎಂಬಿಕೆ ತೋಯಜಾಕ್ಷಮ್ಮ, ಎಲ್‌ಸಿಆರ್‌ಪಿಗಳಾದ ಕಲ್ಪನಾ, ಜಯಶೀಲ, ಕೃಷಿ ಸಖಿ ಚೈತ್ರ, ಪಶು ಸಖಿ ಆಶಾ, ಬಿಸಿ ಸಖಿ ವೀಣಾ, ಎಲ್‌ಸಿಆರ್‌ಪಿ ಶಾಮಲಾ, ಲಕ್ಕಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು. ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ಮತ್ತು ಅಕ್ಷಯ ಸಂಜೀವಿನಿ ಒಕ್ಕೂಟದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ