ಸಾಮಾಜಿಕ ಭದ್ರತಾ ಯೋಜನೆಗಳು ಆರ್ಥಿಕ ಬೆಳವಣಿಗೆಗೆ ಸಹಕಾರಿ: ಚೈತನ್ಯ ಕಂಚಿಬೈಲು
-----------------------
ಹುಳಿಯಾರು: ಕೇಂದ್ರ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಜೀವನ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಜನಧನ ಖಾತೆ ಯೋಜನೆ ಮುಂತಾದವುಗಳು ಆರ್ಥಿಕ ಸೇರ್ಪಡೆಗಾಗುವ ದಿಕ್ಕಿನಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಎಲ್ಲ ನಾಗರಿಕರು ಬ್ಯಾಂಕುಗಳ ಮೂಲಕ ಇದರಲ್ಲಿ ನೊಂದಾಯಿಸಿಕೊಳ್ಳಬೇಕೆಂದು ತುಮಕೂರಿನ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕರಾದ ಚೈತನ್ಯ ಕಂಚಿಬೈಲು ತಿಳಿಸಿದ್ದಾರೆ.
ಅವರು ಇತ್ತೀಚೆಗೆ ಕಂದಿಕೆರೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸಾದರಹಳ್ಳಿ ಗ್ರಾಮದಲ್ಲಿ ನಡೆದ ಜನ ಸುರಕ್ಷಾ ಶಿಬಿರದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದರು. ಈ ಯೋಜನೆಗಳು ಬಡವ, ಬಲ್ಲಿದ, ಶ್ರಿಮಂತ ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಲಾಭದಾಯಕವಾಗಿವೆ ಎಂದು ಅವರು ಹೇಳಿದರು.
ಶಿಬಿರದ ಮುಖ್ಯ ಪ್ರಾಯೋಜಕರಾದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಂದಿಕೆರೆ ಶಾಖೆಯ ವ್ಯವಸ್ಥಾಪಕ ಆರ್. ತಿಪ್ಪೇಸ್ವಾಮಿ ಮಾತನಾಡುತ್ತ, ರೈತರು ಹಾಗೂ ಸ್ವಸಹಾಯ/ಸ್ತ್ರೀ ಶಕ್ತಿ ಸಂಘಗಳು ಪಡೆದಿರುವ ಸಾಲವನ್ನು ಸಮಯಕ್ಕೆ ಮರುಪಾವತಿ ಮಾಡಿದಲ್ಲಿ ಅವರು ಬೆಳೆಯುವುದರ ಜೊತೆಗೆ ಬ್ಯಾಂಕುಗಳು ಹಾಗೂ ದೇಶದ ಆರ್ಥಿಕತೆಗೂ ಸಹ ಬೆಂಬಲ ದೊರೆಯುತ್ತದೆ ಎಂದರು.
ತಾಲೂಕು ಪಂಚಾಯಿತಿ ಕ್ಲಸ್ಟರ್ ಸೂಪರ್ ಭರತ್ ಮಾತನಾಡುತ್ತ, ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಸಾಲ ನೀಡುವುದರ ಜೊತೆಗೆ ಮಾರ್ಕೆಟಿಂಗ್, ಪ್ರೋತ್ಸಾಹ, ಗ್ರೇಡಿಂಗ್, ಮಾರ್ಗದರ್ಶನ ಮುಂತಾದ ಸಹಾಯವೂ ದೊರೆಯುತ್ತಿದೆ ಎಂದು ಹೇಳಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ಅವರು ಮಾತನಾಡುತ್ತ, ಪ್ರಧಾನಿ ವಿಮಾ ಯೋಜನೆಗಳಲ್ಲಿ ನಾವೂ ಸೇರಿ, ನಮ್ಮ ಕುಟುಂಬ, ಸ್ನೇಹಿತರು, ನೆರೆಹೊರೆಯವರು ಮತ್ತು ಬಂಧುಗಳನ್ನು ಸಹ ಈ ಯೋಜನೆಗಳ ವ್ಯಾಪ್ತಿಗೆ ತರಬೇಕು ಎಂದು ಕರೆ ನೀಡಿದರು.
ಈ ಶಿಬಿರದಲ್ಲಿ ಚಂದನ್ ಟಿವಿಯ ಮುಖ್ಯ ಪ್ರಯೋಜಕರಾದ ನಾಗರಾಜು, ವಸುಂದರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ಪಾರ್ವತಮ್ಮ, ಬಿ ಎಸ್ ಡಬ್ಲ್ಯೂ ಮತ್ತು ಮೆಂಟರ್ ವಿಜಯಲಕ್ಷ್ಮಿ, ಎಂಬಿಕೆ ಲಕ್ಷ್ಮಿ, ಎಲ್ ಸಿ ಆರ್ ಪಿಗಳು ಶಾರದಮ್ಮ ಮತ್ತು ರೇಖಾ, ಕೃಷಿ ಸಖಿ ಲಲಿತಮ್ಮ, ಪಶು ಸಖಿ ಸುಜಾತ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಂದಿಕೆರೆ ಶಾಖೆಯಿಂದ ಸಾಲ ಪಡೆದು ಯಶಸ್ಸು ಕಂಡ ಫಲಾನುಭವಿಗಳೊಂದಿಗೆ ಸಂದರ್ಶನ ಕೂಡ ನಡೆಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ