ಹುಳಿಯಾರು : ಮಹಿಳೆಯರ ಸಬಲೀಕರಣ ಮಾಡಲೇಬೇಕೆಂದು ಸರ್ಕಾರ ದೃಢನಿಶ್ಚಯದಿಂದ ಮುಂದೆ ಸಾಗುತ್ತಿದ್ದು, ಅದರ ಸಾಕ್ಷಿ ಸಂಜೀವಿನಿ ಒಕ್ಕೂಟಗಳಾಗಿವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮ ವ್ಯವಸ್ಥಾಪಕ ರವಿ ಎಚ್.ಕೆ ಹೇಳಿದರು.
ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಲಕ್ಷ್ಮಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ಮತ್ತು ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತಿವೆ ಎಂದರು.
ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ಮಾತನಾಡಿ, ಇತ್ತೀಚೆಗೆ ಎಲ್‌ಇಡಿ ಬಲ್ಪು ಮಾರಾಟದ ನೆಪದಲ್ಲಿ ಆಧಾರ್ ಕಾರ್ಡ್ ಒಟಿಪಿ ಪಡೆದು ಹಣ ವಂಚನೆ ಮಾಡುತ್ತಿರುವ ಸೈಬರ್ ಅಪರಾಧಿಗಳು ಸಕ್ರಿಯರಾಗಿದ್ದಾರೆ. ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದರು. ಜೊತೆಗೆ, ಸಾವುಗಳು ಹೆಚ್ಚಾಗಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಮತ್ತು ಜೀವನ ಜ್ಯೋತಿ ವಿಮಾ ಯೋಜನೆಗಳಲ್ಲಿ ಬ್ಯಾಂಕಿನ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಮಹಿಳೆಯರಿಗೆ ಸಲಹೆ ನೀಡಿದರು.
ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಪುಷ್ಪಲತಾ ಮಾತನಾಡಿ ಕೆನರಾ ಬ್ಯಾಂಕಿನಲ್ಲಿ ಲಭ್ಯವಿರುವ ಕೆನರ ಏಂಜಲ್ ಖಾತೆಗಳನ್ನು ನಿಗದಿತ ಮೊತ್ತದೊಂದಿಗೆ ನಿರ್ವಹಿಸಿದಲ್ಲಿ ಕ್ಯಾನ್ಸರ್ ಚಿಕಿತ್ಸಾ ವೆಚ್ಚವನ್ನು ಉಚಿತವಾಗಿ ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಕಮಲಮ್ಮ, ಕಾರ್ಯದರ್ಶಿ ವೀಣಾ, ಖಜಾಂಚಿ ಶೀಲಾ ಸಿಆರ್‌ಪಿಗಳಾದ ಲತಾ ಮತ್ತು ಶಶಿಕಲಾ, ಕೃಷಿ ಸಖಿ ಲಾವಣ್ಯ, ಪಶುಸಖಿ ಕವಿತಾ, ಬಿಸಿ ಸಖಿ ವನಿತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಲಪುರ, ಹೊಸೂರು, ದವಣದ ಹೊಸಹಳ್ಳಿ, ಮೈಸೂರಪ್ಪನ ಪಾಳ್ಯ, ಭೀಮಸಂದ್ರ, ಬಂದ್ರೆಹಳ್ಳಿ, ದೊಡ್ಡಪಾಳ್ಯ ಮುಂತಾದ ಗ್ರಾಮಗಳ ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ