ಹುಳಿಯಾರು: ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿ ಉತ್ಸವವನ್ನು ಯಾವುದೇ ಅಹಿತಕರ ಘಟನೆ ಅಥವಾ ಸಮಸ್ಯೆಗೆ ಎಡೆಮಾಡಿಕೊಡದಂತೆ, ಸೌಹಾರ್ದಯುತವಾಗಿ ಮತ್ತು ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ಜನಾರ್ದನ್ ಅವರು ಸಾರ್ವಜನಿಕರಿಗೆ ಸೂಚನೆ ನೀಡಿದರು.
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಹನುಮ ಜಯಂತಿ ಹಬ್ಬದ ಪೂರ್ವಭಾವಿಯಾಗಿ, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.
ಸೌಹಾರ್ದಯುತ ಆಚರಣೆಗೆ ಒತ್ತು : ಪಟ್ಟಣದಲ್ಲಿ ಇದುವರೆಗೂ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮವು ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ಸೌಹಾರ್ದಯುತವಾಗಿ ನಡೆಯಬೇಕು ಎಂಬುದು ಇಲಾಖೆಯ ಆಶಯವಾಗಿದೆ ಎಂದು ಜನಾರ್ದನ್ ತಿಳಿಸಿದರು.
ಸಾರ್ವಜನಿಕರ ಸಹಕಾರವೇ ಅಪರಾಧ ನಿಯಂತ್ರಣದಲ್ಲಿ ಶೇ. 90ರಷ್ಟು ಪಾತ್ರ ವಹಿಸುತ್ತದೆ. ಪೊಲೀಸರ ಪಾತ್ರ ಕೇವಲ ಶೇ. 10ರಷ್ಟು ಮಾತ್ರ ಇರುತ್ತದೆ. ಆದ್ದರಿಂದ ಸಾರ್ವಜನಿಕರ ಸಹಕಾರವೇ ನಮಗೆ ಅತ್ಯಂತ ಮುಖ್ಯ ಎಂದು ಅವರು ಹೇಳಿದರು.
ಶಿಸ್ತು ಮತ್ತು ಕಾನೂನು ಪಾಲನೆಗೆ ಸೂಚನೆಗಳು
ಸಿಪಿಐ ಜನಾರ್ದನ್ ಅವರು ಉತ್ಸವದ ಆಯೋಜಕರಿಗೆ ಮತ್ತು ಸಾರ್ವಜನಿಕರಿಗೆ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು:
* ಆಯೋಜಕರು ಪೊಲೀಸ್ ಠಾಣೆಗೆ ಕೊಟ್ಟಿರುವ ಮಾರ್ಗದಲ್ಲಿಯೇ ಉತ್ಸವ ನಡೆಸಬೇಕು.
* ಸಮಯ ಪರಿಪಾಲನೆ ಮಾಡಬೇಕು.
* ಯಾವುದೇ ಪ್ರಚೋದನೆಗೆ ಒಳಗಾಗದೆ ಜಾತಿ ಧರ್ಮದ ಘೋಷಣೆಗಳನ್ನು ಕೂಗದೆ ಶಾಂತಿಯುತವಾಗಿ ಉತ್ಸವ ಸಾಗಲು ಸಹಕರಿಸಬೇಕು.
* ಸೌಂಡ್‌ಬಾಕ್ಸ್‌ನ ಶಬ್ದದ ಮಿತಿಯನ್ನು ದಾಟಬಾರದು.
* ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಘನೆ ಮಾಡಬಾರದು. ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
* ಯಾರೊಬ್ಬರು ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುವಂತೆ ವರ್ತಿಸಬಾರದು.
ಉಸ್ತುವಾರಿ ಸಬ್ ಇನ್ಸ್ಪೆಕ್ಟರ್ ಚಿತ್ತರಂಜನ್ ಮಾತನಾಡಿ, ಪಟ್ಟಣದ ಎಲ್ಲಾ ಸಮುದಾಯದ ನಾಗರಿಕರು ಉತ್ಸವ ಹಬ್ಬಗಳನ್ನು ನೆಮ್ಮದಿ ಮತ್ತು ಸಂತೋಷದಿಂದ ಆಚರಿಸುವಂತಾಗಬೇಕು ಎಂಬುದು ಇಲಾಖೆಯ ಆಶಯವಾಗಿದ್ದು, ಆ ನಿಟ್ಟಿನಲ್ಲಿ ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಣ್ಣಪುಟ್ಟ ಅಹಿತಕರ ಘಟನೆ ನಡೆದಲ್ಲಿ ತಕ್ಷಣವೇ ಇಲಾಖೆಗೆ ಅಥವಾ ತಮಗೆ ದೂರವಾಣಿ ಮೂಲಕ ತಿಳಿಸಿದಲ್ಲಿ ತತ್‌ಕ್ಷಣವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಅದರ ಬದಲಿಗೆ ಪ್ರಚೋದಿಸಿ ಸಮಸ್ಯೆ ಬಿಗಡಾಯಿಸಲು ಮುಂದಾಗಬಾರದು ಎಂದು ಎಚ್ಚರಿಸಿದರು. ಸಮಾಜ ಘಾತುಕ ಶಕ್ತಿಗಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕೆಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಬಡಗಿ ರಾಮಣ್ಣ, ಕಾರ್ಯದರ್ಶಿ ಧನಂಜಯಮೂರ್ತಿ, ಉಪಾಧ್ಯಕ್ಷ ಎಣ್ಣೆಗೆರೆ ಮಂಜಣ್ಣ, ಪಾತ್ರೆ ಸತೀಶ್, ಪೈಲ್ವಾನ್ ಜಯಣ್ಣ, ಕೃಷ್ಣಮೂರ್ತಿ, ಡಾಬಾ ಸೂರಪ್ಪ, ಮದೀನಾ ಮಸೀದಿಯ ಸಾಧತ್ ಷರೀಫ್, ಜಬಿವುಲ್ಲಾ, ಚಾಂದ್ ಪಾಷಾ, ಸಮೀರ್, ಕಮಲ್ ಫಯಾಜ್, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೆ ಎಂ ಎಲ್ ಮೂರ್ತಿ, ಪ್ರದೀಪ್, ಯುವರಾಜ್, ಬಜರಂಗದಳದ ಬಸವರಾಜ್, ರವಿರಾಜ್, ಮಂಜುನಾಥ್ ಮತ್ತಿತರರು ಸೇರಿದಂತೆ ಹುಳಿಯಾರಿನ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ