ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಕಂಪ್ಯೂಟರ್ ತರಬೇತಿ – ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ದಾರಿ
ಹುಳಿಯಾರು: ಜಾಗತೀಕರಣ ಮತ್ತು ಡಿಜಿಟಲೀಕರಣದ ಈ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣವು ಜೀವನದ ಅವಿಭಾಜ್ಯ ಭಾಗವಾಗಿದೆ. ಇಂದಿನ ಕಾಲದಲ್ಲಿ ಯಾರಿಗಾದರೂ ಕಂಪ್ಯೂಟರ್ ಆಪರೇಟ್ ಮಾಡಲು ಬಾರದಿದ್ದರೆ ಅವರು ಅನಕ್ಷರಸ್ಥರಂತೆ ಕಾಣುತ್ತಾರೆ. ಸರ್ಕಾರಿ ಕಚೇರಿಗಳಿಂದ ಹಿಡಿದು ಖಾಸಗಿ ವಲಯದವರೆಗೆ ಎಲ್ಲ ಕಾರ್ಯಪದ್ಧತಿಗಳು ಡಿಜಿಟಲ್ ಆಗಿವೆ. ವಿದ್ಯಾರ್ಥಿಗಳು ಕಂಪ್ಯೂಟರ್ ಕೌಶಲ್ಯ ಗಳಿಸಿದರೆ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಸ್ಥಾನವನ್ನು ಸ್ಥಿರಗೊಳಿಸಬಹುದು,” ಎಂದು ಪ್ರಾಂಶುಪಾಲ ಪ್ರೊ. ವೀರಣ್ಣ ಎಸ್.ಸಿ. ಹೇಳಿದರು.
ಹುಳಿಯಾರು-ಕೆಂಕೆರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗಾವಕಾಶಗಳ ಕೋಶದ ವತಿಯಿಂದ ಉಚಿತ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ತರಬೇತಿಕಾರ ತಿಪ್ಪೇಸ್ವಾಮಿ ಎಂ.ಕೆ. ಮಾತನಾಡಿ, ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳಲು ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕ. ಪದವಿಯ ಜೊತೆಗೆ ಕಂಪ್ಯೂಟರ್ ಕೌಶಲ್ಯವೂ ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
IQAC ಸಂಯೋಜಕ ಡಾ. ಸರಸ್ವತಿ ಕೆ.ಬಿ. ಮಾತನಾಡಿ ಕಾಲೇಜು ನೀಡುತ್ತಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ. ಆಸಕ್ತಿಯಿಂದ ಕಲಿಯಿರಿ, ತಾಂತ್ರಿಕ ಜ್ಞಾನವೇ ನಿಮ್ಮ ಭವಿಷ್ಯ ನಿರ್ಮಾಣದ ಮೂಲವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯೋಗೀಶ್ ಬಿ. ಅವರು ಇದು ಅರ್ಥಪೂರ್ಣ ಮತ್ತು ಪ್ರಯೋಜನಕಾರಿ ಕಾರ್ಯಕ್ರಮ. ಮನಸ್ಸಿದ್ದರೆ ಮಾರ್ಗ ಸಿಗುತ್ತದೆ ಎಂಬ ಮಾತಿನಂತೆ, ವಿದ್ಯಾರ್ಥಿಗಳು ಮನಸ್ಸಿಟ್ಟು ಈ ತರಬೇತಿಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಕಾಲೇಜಿನಲ್ಲಿ ಉಚಿತ ತರಗತಿಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಇದೇ ಯೋಜನೆಯ ಮುಂದುವರಿಕೆಯಾಗಿ 2025–26ನೇ ಶೈಕ್ಷಣಿಕ ಸಾಲಿನ ತರಗತಿಗಳ ಉದ್ಘಾಟನೆ ನೆರವೇರಿತು.
ಕಾರ್ಯಕ್ರಮದಲ್ಲಿ ಉದ್ಯೋಗಾವಕಾಶಗಳ ಕೋಶದ ಸಂಯೋಜಕರಾದ ಲಕ್ಷ್ಮಿ ಎಸ್., ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಜಗದೀಶ್, ಹಳೆಯ ವಿದ್ಯಾರ್ಥಿನಿ ಭಾರತಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ