ಹುಳಿಯಾರು : ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮ್ಲಾ ನಾಯಕ ತಾಂಡಾದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸ್ಥಳೀಯ ಆಡಳಿತದ ವಿಳಂಬ ಧೋರಣೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಂಡಾದಲ್ಲಿ ಸುಮಾರು 140ಕ್ಕೂ ಹೆಚ್ಚು ಮನೆಗಳಿದ್ದು, ಕುಡಿಯುವ ನೀರಿಲ್ಲದೆ ಜನರು ಪರದಾಡುವಂತಾಗಿದೆ. ಪಂಚಾಯಿತಿ ವತಿಯಿಂದ ಕೇವಲ ಒಂದು ಟ್ಯಾಂಕರ್ ನೀರು ಪೂರೈಸಲಾಗುತ್ತಿದ್ದು, ಅದು ಇಡೀ ತಾಂಡಾಕ್ಕೆ ಸಾಕಾಗುತ್ತಿಲ್ಲ. ಇದರಿಂದಾಗಿ ಜನರು ದೈನಂದಿನ ಕೆಲಸಗಳಿಗೂ ನೀರಿನ ಅಭಾವ ಎದುರಿಸುತ್ತಿದ್ದಾರೆ.
ಗ್ರಾಮಸ್ಥರು ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (EO) ಹಲವು ಬಾರಿ ಕರೆ ಮಾಡಿ ದೂರು ನೀಡಿದ್ದರೂ, ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಲಾಗಿದೆ.
ನೀರಿನ ಸಮಸ್ಯೆ ಬಗ್ಗೆ ಕೇಳಿದಾಗ, ದಸೂಡಿ ಗ್ರಾಮದ RO ಪ್ಲಾಂಟ್‌ನಿಂದ ನೀರು ತಂದುಕೊಳ್ಳಿ ಎಂದು PDO ಹಗುರವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ. ತಾಂಡಾದಿಂದ ದಸೂಡಿ ಗ್ರಾಮವು ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ಹೆಣ್ಣುಮಕ್ಕಳು ಅಷ್ಟು ದೂರ ನಡೆದು ನೀರು ತರುವುದು ಅಸಾಧ್ಯವೆಂದು ಪ್ರಶ್ನಿಸಿದಾಗ, "ನಾನು ಎಲ್ಲರಿಗೂ ಬೈಕ್ ಕೊಡಿಸಲು ಸಾಧ್ಯವಿಲ್ಲ" ಎಂದು ಉಡಾಫೆಯ ಉತ್ತರ ನೀಡಿದ್ದಾರೆ ಎಂದು ತಾಂಡಾದ ನಿವಾಸಿಗಳು ದೂರಿದ್ದಾರೆ.
ಕರ್ತವ್ಯ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಪ್ರಸ್ತುತ PDO ಅವರನ್ನು ತಕ್ಷಣವೇ ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಂಡಾಕ್ಕೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೊಸ ಅಧಿಕಾರಿಯನ್ನು ನೇಮಿಸಬೇಕು ಎಂದು ಸರ್ಕಾರ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಗ್ರಾಮಸ್ಥರು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ