--------------
ಹುಳಿಯಾರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 119ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಹುಳಿಯಾರಿನ ರಾಮಗೋಪಾಲ್ ಸರ್ಕಲ್ ಬಳಿಯ ಭೈರವೇಶ್ವರ ಮೆಡಿಕಲ್ಸ್ ಮುಂಭಾಗದಲ್ಲಿ ಚನ್ನಬಸವಯ್ಯ ಅವರ ನೇತೃತ್ವದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಮಾಜಿ ಶಾಸಕ ಕೆ.ಎಸ್. ಕಿರಣ್ ಕುಮಾರ್ ಅವರು ಮಾತನಾಡಿ, ಡಾ. ಶಿವಕುಮಾರ ಸ್ವಾಮೀಜಿಯವರು ಇಡೀ ವಿಶ್ವಕ್ಕೆ ಮಾದರಿಯಾದವರು. ಅವರ ದಾಸೋಹ ಸಂಸ್ಕೃತಿ ಮತ್ತು ಬದುಕಿನ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಶ್ರೀಗಳ ಸೇವೆಯನ್ನು ಸ್ಮರಿಸಿ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ಮತ್ತು ಅನ್ನದ ದಾಸೋಹ ನೀಡಿದ ಸಿದ್ಧಗಂಗಾ ಮಠವು ಒಂದು ಪುಣ್ಯಕ್ಷೇತ್ರ. ಶ್ರೀಗಳು ಇತರ ಮಠಗಳಂತೆ ಶಾಖಾ ಮಠಗಳನ್ನು ತೆರೆಯಲು ಮುಂದಾಗದೆ, ಒಂದೇ ಮಠದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ್ದಾರೆ. ಇಂದು ದೇಶ-ವಿದೇಶಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ವೈದ್ಯರಾಗಿ, ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವುದು ಶ್ರೀಗಳ ಮಾರ್ಗದರ್ಶನದ ಶಕ್ತಿಯಾಗಿದೆ. ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಶ್ರೀಗಳ ಆಶೀರ್ವಾದವೇ ನಮಗೆ ದಾರಿದೀಪ ಎಂದು ನುಡಿದರು.ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನದವರೆಗೆ ನೂರಾರು ಭಕ್ತಾದಿಗಳಿಗೆ ಲಘು ಉಪಹಾರ ಹಾಗೂ ಪಾಯಸ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾವಾರಿಧಿ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್, ಭೈರವೇಶ್ವರ ಮೆಡಿಕಲ್ಸ್ ಮಾಲೀಕರು ಹಾಗೂ ಜಿಲ್ಲಾ ಕರವೇ ಉಪಾಧ್ಯಕ್ಷ ಮೆಡಿಕಲ್ ಚನ್ನಬಸವಯ್ಯ, ತಾಲೂಕು ಕರವೇ ಅಧ್ಯಕ್ಷ ಬೇಕರಿ ಪ್ರಕಾಶ್, ಹುಳಿಯಾರು ಹೋಬಳಿ ಘಟಕದ ಅಧ್ಯಕ್ಷ ಗೌಡಿ, ಹುಳಿಯಾರು ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದಯಾನಂದ್, ಕೌನ್ಸಿಲರ್ ಹೇಮಂತ್ ಕುಮಾರ್, ಮಾಜಿ ಕೌನ್ಸಿಲರ್ ರಾಘವೇಂದ್ರ , ಬಾಲರಾಜು,ರವಿರಾಜ್, ತಮ್ಮಯ್ಯ, ಡಾ. ಚಂದ್ರಧರ್, ಬಾಳೆಕಾಯಿ ಲಕ್ಷ್ಮಿಕಾಂತ್, ಕೊರಿಯರ್ ಹರೀಶ್, ಧನಂಜಯ್, ರಘುನಾಥ್, ಯೋಗೇಶ್ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ