25 ಎಕರೆ ಅರಣ್ಯಭೂಮಿ ಕಬಳಿಕೆ!
--------------------------
ವಿಜಯವಾಣಿಯಲ್ಲಿ ವಿಶೇಷ ವರದಿ :ಜಗನ್ನಾಥ್ ಕಾಳೇನಹಳ್ಳಿ
---------------------------------------------
ತುಮಕೂರು: 225 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸುವ ಭೂಗಳ್ಳರ ಸಂಚು ಇದೀಗ ಬಯಲಾಗಿದೆ. ತಹಸೀಲ್ದಾರ್ ಸೇರಿ ಇತರ 8 ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರುವ ಸಂಬಂಧ ವಿಜಯವಾಣಿಗೆ ದಾಖಲೆಗಳು ಲಭ್ಯವಾಗಿವೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಅಂಬಾಪುರ ಗ್ರಾಮದ ಸರ್ವೆ ನಂ.46ರ 421.35 ಎಕರೆ ಸರ್ಕಾರಿ ಭೂಮಿಯಲ್ಲಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ 225 ಎಕರೆ ಭೂಮಿಯನ್ನು ಕಬಳಿಸುವ ಯತ್ನ ನಡೆದಿದೆ.
ಬಡವರು, ದಲಿತರಿಗೆ ಮಂಜೂರಾದ ಭೂಮಿಯನ್ನು ಕೆ.ಬಿ.ಕ್ರಾಸ್ನ ಎಸ್.ರುದ್ರೇಶ್ ಎಂಬುವರು ಜಿಪಿಎ ಮಾಡಿಸಿಕೊಂಡು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ (2014ರ ಅವಧಿಯಲ್ಲಿ)ಆಗಿದ್ದ ಕಾಮಾಕ್ಷಮ್ಮ ಸೇರಿ 8 ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ್ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.
ಯಾರ್ಯಾರ ವಿರುದ್ಧ ಕ್ರಮಕ್ಕೆ ಶಿಫಾರಸು?
---------------------------------
ಕಾಮಾಕ್ಷಮ್ಮ-ತಹಸೀಲ್ದಾರ್(ಚಿಕ್ಕನಾಯಕನಹಳ್ಳಿ), ಇ.ಪ್ರಕಾಶ್-ಭೂದಾಖಲೆಗಳ ಉಪನಿರ್ದೇಶಕ (ಡಿಸಿ ಕಚೇರಿ), ಮಂಜುನಾಥ ತಾನವೆ-ಭೂ ದಾಖಲೆಗಳ ಸಹಾಯಕ ನಿರ್ದೇಶಕ(ತಿಪಟೂರು ಎಸಿ ಕಚೇರಿ), ಬಸವರಾಜು-ಉಪತಹಸೀಲ್ದಾರ್(ನಾಡಕಚೇರಿ, ಹುಳಿಯಾರು), ಮಹೇಶ್-ಪರ್ಯಾವೇಕ್ಷಕ(ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿ), ಸಿ.ಆರ್.ಬಸವರಾಜು-ತಾಲೂಕು ಮೋಜಿಣಿದಾರ (ಚಿಕ್ಕನಾಯಕನಹಳ್ಳಿ), ಹನುಮಂತನಾಯ್ಕ-ಕಂದಾಯ ತನಿಖಾಧಿಕಾರಿ(ಹುಳಿಯಾರು), ಮಂಜುನಾಥ್-ಗ್ರಾಮಲೆಕ್ಕಿಗ (ಬೆಳ್ಳಾರ ವೃತ್ತ, ಹುಳಿಯಾರು).
2006ರಿಂದಲೇ ಜಿಪಿಎ!
-------------------
ಮುತ್ತಗದಹಳ್ಳಿ ಮೀಸಲು ಅರಣ್ಯದಲ್ಲಿನ ಸರ್ಕಾರಿ ಭೂಮಿ ಪಡೆದಿದ್ದ ಬಡವರು, ದಲಿತರನ್ನು ಪತ್ತೆ ಹಚ್ಚಿ ಎಕರೆಗೆ 50 ಸಾವಿರ ರೂ.ನಂತೆ ನೀಡಿ, ಕೆ.ಬಿ.ಕ್ರಾಸ್ನ ಎಸ್.ರುದ್ರೇಶ್ ತನ್ನ ಹೆಸರಿಗೆ ಜಿಪಿಎ ಮಾಡಿಸಿಕೊಂಡಿದ್ದಾರೆ. 2006ರಿಂದಲೇ ಈ ಕೆಲಸ ಆರಂಭಿಸಿದ್ದ ರುದ್ರೇಶ್ಗೆ ಸರ್ಕಾರಿ ಅಧಿಕಾರಿಗಳೇ ಭೂ ದಾಖಲೆಗಳನ್ನು ಒದಗಿಸಿಕೊಟ್ಟಿದ್ದಾರೆ. ಪತ್ನಿ ಸುಜಾತಾ, ಪುತ್ರಿ ಆರ್.ಯಶಸ್ವಿನಿ ಹೆಸರಲ್ಲೂ ಕೆಲವು ಜಮೀನಿನ ಜಿಪಿಎ ಇದೆ. ಈಗ ಎಕರೆಗೆ 5 ಲಕ್ಷ ರೂ.ನಂತೆ ಮಾರಾಟಕ್ಕೆ ರುದ್ರೇಶ್ ಮುಂದಾಗಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?
-------------------
ಅಂಬಾಪುರ ಗ್ರಾಮದ ಸರ್ವೆ ನಂ.46ರ 300 ಎಕರೆ ಪ್ರದೇಶವನ್ನು 1926ರಲ್ಲಿ ಮೈಸೂರು ಮಹಾರಾಜರ ಅಧಿಸೂಚನೆಯಂತೆ ಮುತ್ತಗದಹಳ್ಳಿ ಮೀಸಲು ಅರಣ್ಯ ಎಂದು ಗುರುತಿಸಲಾಗಿತ್ತು (ಇದರಲ್ಲಿ 91 ಎಕರೆಯನ್ನು 1974ರಲ್ಲಿ ತೋಟಗಾರಿಕೆ ಇಲಾಖೆಗೆ ವರ್ಗಾಯಿಸಲಾಗಿತ್ತು). ಈ ಪೈಕಿ 121.35 ಎಕರೆ ಗೋಮಾಳ ಜಮೀನು ಮಾತ್ರ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿತ್ತು. 1977ರಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 225 ಎಕರೆ ಭೂಮಿಯನ್ನು ಬಡವರು, ದಲಿತರು, ಭೂರಹಿತರು ಹೀಗೆ 78 ಮಂದಿಗೆ ಮಂಜೂರು ಮಾಡಲಾಗಿತ್ತು. ಏಕವ್ಯಕ್ತಿ ಕೋರಿಕೆ ಅಡಿ 2014ರಲ್ಲಿ ಸರ್ವೆ ನಡೆಸಿ, ಖಾತೆ ಮಾಡಿಸಿಕೊಡಲು (ದುರಸ್ತಿಪಡಿಸಲು) ಆದೇಶ ಕೋರಿ ಭೂದಾಖಲೆಗಳ ಉಪನಿರ್ದೇಶಕರ ಕಚೇರಿಗೆ ಅಂದಿನ ತಹಸೀಲ್ದಾರ್ ಕಾಮಾಕ್ಷಮ್ಮ ಕಡತ ಸಲ್ಲಿಸಿದ್ದರು. ಬಳಿಕ 58 ಮಂದಿ ಹಕ್ಕುದಾರರಿಗೆ ಮಾತ್ರ ದಾಖಲೆ ಮಾಡಿಕೊಡಲು ಭೂದಾಖಲೆಗಳ ಉಪನಿರ್ದೇಶಕರ ಕಚೇರಿಯಿಂದ ಆದೇಶ ನೀಡಲಾಗಿತ್ತು. ಜಮೀನು ದಾಖಲೆಗೆ ಅನುಮತಿ ಕೋರಿ ಎಸಿ ಕಚೇರಿಗೆ ಕಡತ ಬಂದಾಗ ಅದರಲ್ಲಿ ಹಲವು ಲೋಪಗಳನ್ನು ಉಪವಿಭಾಗಾಧಿಕಾರಿ ಗಮನಿಸಿದ್ದಾರೆ. ಮೀಸಲು ಅರಣ್ಯಕ್ಕೆ ಸೇರಿದ ಭೂಮಿ ಕಾನೂನುಬಾಹಿರವಾಗಿ ಮಂಜೂರಾಗಿತ್ತು ಎಂಬ ಅಂಶ ಮುಚ್ಚಿಡಲಾಗಿತ್ತು. ಮಾತ್ರವಲ್ಲದೆ, ಅರಣ್ಯ ಇಲಾಖೆಗೆ ಸೇರಿದ ಜಾಗ ಎಷ್ಟಿದೆ ಎಂಬುದನ್ನು ಪರಿಶೀಲಿಸದೆ ದಾಖಲಾತಿ ತಯಾರಿಸಲು ಅಂದಿನ ತಹಸೀಲ್ದಾರ್ ಒಪ್ಪಿಗೆ ನೀಡಿದ್ದರು. ಇದಲ್ಲದೆ ಜಮೀನು ಸರ್ವೆ ಕಾರ್ಯಕ್ಕೆ ನೀಡಿದ ನೋಟಿಸ್ನಲ್ಲಿ ಬಹುತೇಕ ಹಕ್ಕುದಾರರ ಪರ ಕೆ.ಬಿ.ಕ್ರಾಸ್ನ ಎಸ್.ರುದ್ರೇಶ್ ಎಂಬುವರ ಹೆಸರು ನಮೂದಾಗಿದ್ದನ್ನು ಉಪವಿಭಾಗಾಧಿಕಾರಿ ಗಮನಿಸಿದ್ದಾರೆ. ಭೂಮಾಫಿಯಾದೊಂದಿಗೆ ಅಧಿಕಾರಿಗಳು ಕೈಜೋಡಿಸಿ ಸರ್ಕಾರಿ ಭೂಮಿ ಕಬಳಿಸಲು ಮುಂದಾಗಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಪ್ರಜ್ಞಾ ಅಮ್ಮೆಂಬಳ್ ಡಿಸಿಗೆ ಪತ್ರ ಬರೆದಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ