ಹುಳಿಯಾರು ಪಟ್ಟಣದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಸ್ಥಾಪಿಸಲಾಗಿದ್ದ ಪಾರ್ವತಿ ಪರಮೇಶ್ವರ ಸಹಿತ ಗಣಪತಿ ಹಾಗೂ ಗಜಾನನ ಯುವಕ ಸಂಘದಿಂದ ಪ್ರತಿಷ್ಟಾಪಿಸಲಾಗಿದ್ದ ಬೆಂಕಿ ಗಣಪತಿಯನ್ನು ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ನಂತರ ಶುಕ್ರವಾರದಂದು ವಿಸರ್ಜಿಸಲಾಯಿತು.
ಕಳೆದ ಮೂರು ದಿನಗಳಿಂದ ಈ ಸಂಬಂಧ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬುಧವಾರದಂದು ಹೋಮಹವನಾದಿಗಳನ್ನು ನಡೆದು ಅನ್ನಸಂತರ್ಪಣೆ ಮಾಡಿದರೆ ಗುರುವಾರದಂದು ಸಾಂಸ್ಕೃತಿಕಕಾರ್ಯಕ್ರಮ ಹಾಗೂ ಸಂಜೆ ಉತ್ಸವ ,ಮೆರವಣಿಗೆ ಏರ್ಪಡಿಸಲಾಗಿತ್ತು.
ವಿಶೇಷ ಪೂಜೆ ಸಲ್ಲಿಸಿದ ತರವಾಯು ಭವ್ಯವಾದ ಹೂವಿನ ಮಂಟಪದಲ್ಲಿ ಅಲಂಕೃತ ಗಣಪತಿಯನ್ನು ಕೂರಿಸಿ ಅಲಂಕರಿಸಿ ಪಟ್ಟಣದ ಗಾಂಧಿಪೇಟೆ,ಬಸ್ ನಿಲ್ದಾಣ,ರಾಂಗೋಪಾಲ್ ಸರ್ಕಲ್ ಮುಂತಾದ ಬೀದಿಗಳಲ್ಲಿ ಭಕ್ತಾದಿಗಳೊಂದಿಗೆ ಮೆರವಣಿಗೆ ನಡೆಸಿ ಶುಕ್ರವಾರ ಮುಂಜಾನೆ ಸಮೀಪದ ತಿರುಮಲಾಪುರದ ಕೆರೆಯಲ್ಲಿ ಮೂರ್ತಿಯ ಗಂಗಾಪ್ರವೇಶ ಮಾಡಲಾಯಿತು.
ಮೆರವಣಿಗೆ ಸಂದರ್ಭದಲ್ಲಿ ವೀರಗಾಸೆ, ಗೊಂಬೆ ಕುಣಿತ, ಚಿಟ್ಟಿಮೇಳ, ನಾದಸ್ವರ, ಸ್ಯಾಕ್ಸೋಪೋನ್ ವಾದನಗಳು ಉತ್ಸವಕ್ಕೆ ಮೆರಗು ನೀಡಿದವು. ಬೀದಿಗಳಲ್ಲಿ ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಭಕ್ತರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಸನ್ನ ಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಮೋಹನ್ ಕುಮಾರ್,ದಯಾನಂದ್,ತಾಂಡವಮೂರ್ತಿ,ಹೂವಿನ ಮಲ್ಲೇಶಣ್ಣ.ರಾಜೇಂದ್ರ,ಕಲಾವಿದ ಗೌಡಿ,ಹೂವಿನ ಬಸವರಾಜು,ಮೆಡಿಕಲ್ ಚಂಬಣ್ಣ,ಏಜೆಂಟ್ ಕುಮಾರ್,ತಮ್ಮಯ್ಯ,ಗಾರೆ ವೆಂಕಟೇಶ್ ಹಾಗೂ ಗಜಾನನ ಯುವಕ ಸಂಘದ ಓಡೆಯರ್ ಸೇರಿದಂತೆ ಹಲವಾರು ಮಂದಿ ಮೆರವಣಿಗೆಯ ಉಸ್ತುವಾರಿ ವಹಿಸಿದ್ದರು.ಮೆರವಣಿಗೆ ಶಾಂತಿಯುತವಾಗಿ ಸಾಗಲು ಭಾರಿ ಪೋಲಿಸ್ ಭದ್ರತೆ ಏರ್ಪಡಿಸಲಾಗಿತ್ತು.
--------------------------------
ಹಾರ ,ಲಾಡು ಹರಾಜು : ಗಣಪತಿಗೆ ಹಾಕಿದ್ದ ಹಾರ ಹಾಗೂ ಪ್ರಸಾದವಾಗಿ ಗಣಪತಿಯ ಹಸ್ತದಲ್ಲಿ ಇಡಲಾಗಿದ್ದ ಲಾಡುವನ್ನು ಭಕ್ತಾಧಿಗಳ ಸಮ್ಮೂಖದಲ್ಲಿ ಹರಾಜು ಮಾಡಲಾಯಿತು.ಜಿದ್ದಾಜಿದ್ದಿನಿಂದ ಕೂಡಿದ್ದ ಹರಾಜಿನಲ್ಲಿ ಮೂರು ಕೇಜಿ ತೂಗುತ್ತಿದ್ದ ಸಿಹಿಲಾಡುವನ್ನು ೨೩೦೧ ರೂಪಾಯಿಗಳಿಗೆ ಹಾಗೂ ಸ್ವಾಮಿಗೆ ಹಾಕಲಾಗಿದ್ದ ಹಾರವನ್ನು ೧೦೦೧ ರೂಪಾಯಿಗಳಿಗೆ ಬಂಗಾರದ ಅಂಗಡಿ ಶಂಕರ್ ಖರೀದಿಸಿದರೆ ಮತ್ತೊಂದು ಹಾರವನ್ನು ೧೦೦೧ ರೂಗಳಿಗೆ ಗಣೇಶ್ ಬೇಕರಿಯವರು ಹರಾಜಿನಲ್ಲಿ ತಮ್ಮದಾಗಿಸಿಕೊಂಡರು.
------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ